ಭಾರತ್ ಜೋಡೊ ಯಾತ್ರೆ: ಕಾಶ್ಮೀರಿ ಪಂಡಿತರ ನಿಯೋಗದಿಂದ ರಾಹುಲ್ ಗಾಂಧಿ ಭೇಟಿ

ತಮ್ಮ ವಾಸಸ್ಥಳಕ್ಕೆ ಆಗಮಿಸುವಂತೆ ಮನವಿ

Update: 2023-01-23 17:21 GMT

ಜಮ್ಮು, ಜ.23: ಸೋಮವಾರ ಸಾಂಬಾ ಜಿಲ್ಲೆಯಲ್ಲಿ ಭಾರತ ಜೋಡೊ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ಭೇಟಿಯಾದ ಕಾಶ್ಮೀರಿ ವಲಸಿಗ ಪಂಡಿತರ ನಿಯೋಗವು ಭಯೋತ್ಪಾದಕರಿಂದ ‘ಉದ್ದೇಶಿತ ಹತ್ಯೆಗಳು’ ಮತ್ತು ಪ್ರಧಾನ ಮಂತ್ರಿಗಳ ಪ್ಯಾಕೇಜ್ನಡಿ ನೇಮಕಗೊಂಡವರ ಪ್ರತಿಭಟನೆ ಸೇರಿದಂತೆ ತಮ್ಮ ಹಲವಾರು ಸಮಸ್ಯೆಗಳ ಕುರಿತು ನೋವನ್ನು ತೋಡಿಕೊಂಡಿತು.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ನಿಯೋಗದ ಸದಸ್ಯ ಅಮಿತ್ ಕೌಲ್ ಅವರು, ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಮ್ಮ ಜಾಗ್ತಿ ಬಡಾವಣೆಗೆ ಭೇಟಿ ನೀಡುವಂತೆ ರಾಹುಲ್ ರನ್ನು ಆಹ್ವಾನಿಸಿದ್ದೇವೆ ಮತ್ತು ಅವರು ಕಾಶ್ಮೀರಕ್ಕೆ ಸಾಗುವ ಮಾರ್ಗದಲ್ಲಿ ಸಮುದಾಯವನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

2008ರಲ್ಲಿ ಪ್ರಕಟಿಸಲಾಗಿದ್ದ ಪ್ರಧಾನ ಮಂತ್ರಿಗಳ ಉದ್ಯೋಗ ಪ್ಯಾಕೇಜ್ನಡಿ ಆಯ್ಕೆಯಾದ ಸುಮಾರು 4,000 ಕಾಶ್ಮೀರಿ ವಲಸಿಗ ಪಂಡಿತರು ಕಾಶ್ಮೀರ ಕಣಿವೆಯ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕಳೆದ ವರ್ಷದ ಮೇ 12ರಂದು ತಮ್ಮ ಸಹೋದ್ಯೋಗಿ ರಾಹುಲ್ ಭಟ್ರನ್ನು ಬುಡ್ಗಾಮ್ ಜಿಲ್ಲೆಯ ಅವರ ಕಚೇರಿಯಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ ಬಳಿಕ ಹೆಚ್ಚಿನ ಪಂಡಿತ ಉದ್ಯೋಗಿಗಳು ಜಮ್ಮುವಿಗೆ ಪಲಾಯನ ಮಾಡಿದ್ದಾರೆ. ತಮ್ಮನ್ನು ಕಾಶ್ಮೀರ ಕಣಿವೆಯಿಂದ ಹೊರಗೆ ವರ್ಗಾಯಿಸುವಂತೆ ಆಗ್ರಹಿಸಿ ಕಳೆದ ಆರು ತಿಂಗಳಿಗೂ ಹೆಚ್ಚು ಸಮಯದಿಂದ ಅವರು ಪ್ರತಿಭಟನೆ ನಡೆಸುತ್ತಿದ್ದು,ಜಮ್ಮು-ಕಾಶ್ಮೀರ ಆಡಳಿತವು ಅವರ ವೇತನಗಳನ್ನು ತಡೆಹಿಡಿದಿದೆ.

'ಜಾಗ್ತಿ ಬಡಾವಣೆಗೆ ಖುದ್ದಾಗಿ ಭೇಟಿ ನೀಡುವುದಾಗಿ ಮತ್ತು ನಮ್ಮ ಸಮಸ್ಯೆಗಳನ್ನು ಸಂಸತ್ತಿನೊಳಗೆ ಮತ್ತು ಹೊರಗೆ ಎತ್ತುವುದಾಗಿ ರಾಹುಲ್ ಭರವಸೆ ನೀಡಿದ್ದಾರೆ' ಎಂದು ಕೌಲ್ ತಿಳಿಸಿದರು.

ಬಿಜೆಪಿಯು ತನ್ನ ರಾಜಕೀಯ ಅಜೆಂಡಾವನ್ನು ಮುಂದೊತ್ತಲು ಕಾಶ್ಮೀರಿ ಪಂಡಿತ ಸಮುದಾಯವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ನಿಯೋಗದ ಇನ್ನೋರ್ವ ಸದಸ್ಯ ಜಿತೇಂದ್ರ ಕಚ್ರೂ, ಅವರಿಗೆ (ಬಿಜೆಪಿ) ನಿಜವಾಗಿಯೂ ಕಾಶ್ಮೀರಿ ಪಂಡಿತರ ಸಮಸ್ಯೆಗಳನ್ನು ಬಗೆಹರಿಸುವುದು ಬೇಕಿಲ್ಲ, ಏಕೆಂದರೆ ಧರ್ಮದ ಆಧಾರದಲ್ಲಿ ದ್ವೇಷವನ್ನು ಹರಡುವುದು ಅವರ ರಾಜಕೀಯ ಅಜೆಂಡಾ ಆಗಿದೆ ಎಂದು ಹೇಳಿದರು.

Similar News