ಎರಡು ಮಕ್ಕಳ ನೀತಿಯಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ; ಈ ವ್ಯಕ್ತಿ ಮಾಡಿದ್ದೇನು ಗೊತ್ತೇ?

Update: 2023-01-24 03:19 GMT

ಜೈಪುರ: ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ತನ್ನ ಪತ್ನಿಯ ಜತೆ ಸೇರಿ ತಮ್ಮ ಐದು ತಿಂಗಳ ಮಗುವನ್ನು ನಾಲೆಗೆ ಎಸೆದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಸರ್ಕಾರದ ಎರಡು ಮಕ್ಕಳ ನೀತಿಯ ಕಾರಣದಿಂದ ಮೂರನೇ ಮಗು ಇದೆ ಎನ್ನುವುದು ತಿಳಿದರೆ ತನ್ನ ಉದ್ಯೋಗಕ್ಕೆ ಸಂಚಕಾರ ಬರಬಹುದು ಎಂಬ ಭೀತಿಯಿಂದ ಈ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ.

ಬಿಕನೇರ್ ಜಿಲ್ಲೆಯ ಛಾತರ್‌ಗಢ ಠಾಣೆ ವ್ಯಾಪ್ತಿಯಲ್ಲಿ ಈ ದಂಪತಿ ಭಾನುವಾರ ಸಂಜೆ ಹೆಣ್ಣುಮಗುವನ್ನು ನಾಲೆಗೆ ಎಸೆದಿದಿದ್ದರು. ಜವಾರ್‌ಲಾಲ್ ಮೇಘವಾಲ್ (36) ಎಂಬ ವ್ಯಕ್ತಿ ಗುತ್ತಿಗೆ ಆಧಾರದ ಉದ್ಯೋಗಿಯಾಗಿದ್ದು, ಇಷ್ಟರಲ್ಲೇ ಈತ ಸೇವೆ ಕಾಯಮಾತಿಯನ್ನು ನಿರೀಕ್ಷಿಸಿದ್ದ.

ಈ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಮೂರನೇ ಮಗು ಹುಟ್ಟಿದ ಬಳಿಕ, ರಾಜ್ಯ ಸರ್ಕಾರದ ಎರಡು ಮಕ್ಕಳ ನೀತಿಯಿಂದಾಗಿ ತನ್ನ ಉದ್ಯೋಗಕ್ಕೆ ಸಂಚಕಾರ ಬರಬಹುದು ಎಂಬ ಭೀತಿ ಈತನಲ್ಲಿತ್ತು. ಎರಡು ಮಕ್ಕಳ ನೀತಿಯ ಅನ್ವಯ ಮೂರನೇ ಮಗು ಹುಟ್ಟಿದ ತಕ್ಷಣ ಉದ್ಯೋಗಿಯನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲು ಅವಕಾಶವಿದೆ.

ದಂಪತಿಯನ್ನು ಬಂಧಿಸಲಾಗಿದ್ದು, ಸರ್ಕಾರಿ ಉದ್ಯೋಗ ಕಾಯಂ ಆಗಬೇಕು ಎಂಬ ಕಾರಣಕ್ಕೆ ತಮ್ಮ ಮಗುವನ್ನು ಕೊಂದಿದ್ದಾರೆ ಎಂದು ಬಿಕನೇರ್ ಎಸ್ಪಿ ಯೋಗೇಶ್ ಯಾದವ್ ಹೇಳಿದ್ದಾರೆ. ಜವಾರ್‌ಲಾಲ್ ಮೇಘವಾಲ್ ಮತ್ತು ಆತನ ಪತ್ನಿ ಗೀತಾದೇವಿ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.

Similar News