ಗೊಂಬೆಗಳ ಮಾಯಾಲೋಕ ಮತ್ತು ಅರಣ್ಯನಾಶದ ಮಹಾಶೋಕ ‘ಹಕ್ಕಿ ಕಥೆ’

ರಂಗ ವಿದುರ್ಶೆ

Update: 2023-01-24 06:12 GMT

ಮಕ್ಕಳಿಗೆ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಕುತೂಹಲ, ಆಸಕ್ತಿ ಹುಟ್ಟಿಸುವುದು ಹಾಗೂ ತಾವು ಬದುಕುತ್ತಿರುವ ಸಮಾಜದ ಬಗ್ಗೆ ಅರಿವನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶ. ಸೃಜನಾತ್ಮಕ ಶಿಕ್ಷಣದಿಂದ ಮಕ್ಕಳಿಗೆ ಮಾಹಿತಿಗಿಂತ ಮಿಗಿಲಾಗಿ ಅನುಭವದಿಂದ ಹುಟ್ಟುವ ಜೀವನ ದೃಷ್ಟಿ ಲಭಿಸುತ್ತದೆ. ಬೌದ್ಧಿಕವಾಗಿ ಬೆಳೆಯಬೇಕಿರುವ ಮಕ್ಕಳನ್ನು ತರಗತಿಯ ನಾಲ್ಕು ಗೋಡೆಗಳ ಮಧ್ಯ ಕುಳ್ಳಿರಿಸಿ ಗೊಡ್ಡು ನೀತಿ ಪಾಠಮಾಡುವ ಬದಲು ಆಧುನಿಕ ಸೃಜನಶೀಲ ವಿಧಾನಗಳನ್ನು ಬಳಸಿ ಹೊರೆಯಾಗದಂತೆ ಮಕ್ಕಳ ಮನಸ್ಸಿಗೆ ಮುಟ್ಟುವ ಸರಳ ಕಲಿಕಾ ಕ್ರಮವನ್ನು ಯೋಜಿಸುವುದು ಒಂದು ಬಹುಮುಖ್ಯವಾದ ಸಾಮಾಜಿಕ ಹೊಣೆ. ಆದರೆ ಶಿಕ್ಷಣವು ರಾಜಕಾರಣಿಗಳ ಕೈಗೊಂಬೆಯಾಗಿ, ಪಠ್ಯಪುಸ್ತಕಗಳು ರಾಜಕೀಯ ಸಿದ್ಧಾಂತ ಪ್ರಚುರ ಪಡಿಸುವ ಹಾಗೂ ಅಗತ್ಯಬಿದ್ದಾಗ ಚುನಾವಣಾ ಕಾರ್ಯಸೂಚಿಗಳಾಗಿ ಬದಲಾಗುವ ಹಂತಕ್ಕೆ ತಲುಪಿರುವುದು ಇವತ್ತಿನ ಅತಿ ಘೋರ ದುರಂತ. ಮಕ್ಕಳ ಅರಿವನ್ನು ಹೆಚ್ಚಿಸುವಲ್ಲಿ ಮತ್ತು ಯಾವುದೇ ವಿಷಯಗಳ ಬಗ್ಗೆ ಕುತೂಹಲ ಮೂಡಿಸಿ ಕಥೆಗಳ ಮೂಲಕ ಪಾಠಹೇಳುವ ಕ್ರಮವನ್ನು ಆಧುನಿಕ ರಂಗಭೂಮಿ ಸದ್ದಿಲ್ಲದೆ ಮಾಡುತ್ತಾ ಬಂದಿದೆ. ರಂಗ ದಿಗ್ಗಜ ಬಿ.ವಿ. ಕಾರಂತರ ಆದಿಯಾಗಿ ಇವತ್ತಿನ ಯುವ ರಂಗನಿರ್ದೇಶಕರ ತನಕ ಹಲವಾರು ಮಕ್ಕಳ ನಾಟಕಗಳು ಅದೆಷ್ಟೋ ಜ್ಞಾನದೀವಿಗೆಗಳನ್ನು ಬೆಳಗಿಸಿವೆ. ಇತ್ತೀಚೆಗೆ ಪ್ರದರ್ಶನಗೊಳ್ಳುತ್ತಿರುವ ಶಿವಮೊಗ್ಗ ರಂಗಾಯಣದ ‘ಹಕ್ಕಿಕಥೆ’ ಪ್ರಯೋಗವೂ ಅದೇ ಸಾಲಿಗೆ ಸೇರುವ ಒಂದು ಪ್ರಮುಖ ಮಕ್ಕಳ ನಾಟಕ.

ಮೋಹಕ ಚಿತ್ತಾರದ ಗೊಂಬೆಗಳನ್ನು ಬಳಸಿಕೊಂಡು ಬಣ್ಣದ ಮಾಯಾಲೋಕವನ್ನೇ ಸೃಷ್ಟಿಸುವ ನಾಟಕ ಕಟ್ಟಿಕೊಡುವುದು ಮಾತ್ರ ವಿಷಾದದ ಸ್ಥಾಯೀಭಾವದಲ್ಲಿ ಆಧುನಿಕ ಅಂಧಾಭಿವೃಧಿಯ ಚರಮಗೀತೆಯ ಕಥೆಯನ್ನು. ಮಲೆನಾಡಿನ ಮಹತ್ವದ ಲೇಖಕರಾದ ನಾ. ಡಿಸೋಜ ಅವರ ಕಾದಂಬರಿ ಮತ್ತು ರಂಗಕರ್ಮಿ ಎಸ್. ಮಾಲತಿಯವರ ನಾಟಕ ‘ಹಕ್ಕಿಗೊಂದು ಗೂಡು ಕೊಡಿ’ಯನ್ನು ಆಧರಿಸಿದ ‘ಹಕ್ಕಿಕಥೆ’ ನಾಟಕದ ಮುಖ್ಯ ಆಕರ್ಷಣೆ ಗೊಂಬೆಗಳು. ಶ್ರವಣ್ ಹೆಗ್ಗೋಡು ಗೊಂಬೆಗಳನ್ನು ರೂಪಿಸಿ ಅವುಗಳ ನಿರ್ವಹಣೆಯನ್ನು ನಿರ್ದೇಶಿಸಿದರೆ, ಗಣೇಶ್ ಮಂದಾರ್ತಿಯವರು ಶ್ರವಣ್ ಹೆಗ್ಗೋಡು ಅವರ ಜತೆ ಸೇರಿ ನಾಟಕಕ್ಕೆ ರಂಗರೂಪಕೊಟ್ಟು ನಿರ್ದೇಶಿಸಿದ್ದಾರೆ. ರಂಗಾಯಣ ಶಿವಮೊಗ್ಗದ ರೆಪರ್ಟರಿ ಕಲಾವಿದರ ನಾಟಕವಿದು.

ಆಧುನಿಕ ಕನ್ನಡ ರಂಗಭೂಮಿಯಲ್ಲಿ ಗೊಂಬೆಗಳ ಬಳಕೆಗೆ ದೊಡ್ಡ ಇತಿಹಾಸವಿಲ್ಲ ಮತ್ತು ಅವುಗಳನ್ನು ಕಥೆಯ ಮಹತ್ವದ ಭಾಗಗಳಾಗಿ ಬಳಸಿಕೊಂಡ ಉದಾಹರಣೆಗಳು ತೀರಾ ವಿರಳ. ಗೊಂಬೆಗಳನ್ನು ಮುಖಕ್ಕೆ ಮಾಸ್ಕ್‌ನಂತೆ ಧರಿಸಿ ಅಥವಾ ದಾರದ ಮುಖಾಂತರ ಗೊಂಬೆಗಳನ್ನು ನಿಯಂತ್ರಿಸಿ ಉಪಯೋಗಿಸಿದ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆಯಾದರೂ ಥ್ರೀ ಡೈಮೆನ್ಶನ್ ಹೊಂದಿರುವ ಮನುಷ್ಯ ಗಾತ್ರದ ಅಥವಾ ಅದಕ್ಕಿಂತ ದೊಡ್ಡ ಗೊಂಬೆಗಳು ನಾಟಕದ ಮುಖ್ಯ ಭೂಮಿಕೆಯಲ್ಲಿ ರಂಗದ ಮೇಲೆ ಬರುವುದು ಮತ್ತು ಕೇವಲ ಆ ಗೊಂಬೆಗಳ ನಿರ್ವಹಣೆಗೆ ಮಾತ್ರ ನಟರ ಬಳಕೆಯಾಗುವುದು ಇತ್ತೀಚಿನ ಪೊಪೆಟ್ ಶೋಗಳ ವಿಶೇಷ. ಭಾರತದ ಜಾನಪದ ಕಲೆಗಳಲ್ಲಿ ಗೊಂಬೆಗಳ ಬಳಕೆಯಿದೆಯಾದರೂ ಅವುಗಳ ರಚನೆ ಮತ್ತು ಚಲನೆಗಳು ನಿಗದಿತ ಸ್ಥಳ ಮತ್ತು ಕಾಲಕ್ಕೆ ಸೀಮಿತವಾಗಿರುತ್ತವೆ. ಈ ಮಿತಿಯನ್ನು ಗಮನಿಸಿದ ಕೆಲ ರಂಗಕರ್ಮಿಗಳು ಯುರೋಪ್, ಜಪಾನ್ ಮತ್ತಿತರ ಕಡೆಗಳಲ್ಲಿ ಬಳಕೆಯಲ್ಲಿರುವ ಪೊಪೆಟ್ ಥಿಯೇಟರ್ ಮತ್ತು ಪೊಪೆಟ್ ಮಾದರಿಗಳ ಅಧ್ಯಯನ ನಡೆಸಿ ಅವುಗಳನ್ನು ಭಾರತಕ್ಕೆ ಪರಿಚಯಿಸುತ್ತಿದ್ದಾರೆ. ದಿಲ್ಲಿಯ ಅನುರೂಪಾ ರಾಯ್ ಕಳೆದ ಎರಡು ದಶಕಗಳಿಂದ ಇಂತಹ ಪೊಪೆಟ್ ಶೋಗಳ ಮೂಲಕ ಗಮನ ಸೆಳೆದಿದ್ದಾರೆ. ಅವರ ಗರಡಿಯಲ್ಲಿಯೇ ಬೆಳೆದ ಯುವ ರಂಗಕರ್ಮಿ ಶ್ರವಣ್ ಪ್ರಸಕ್ತ ದಕ್ಷಿಣದ ರಂಗಭೂಮಿಗೆ ಅದರಲ್ಲೂ ಮುಖ್ಯವಾಗಿ ಕನ್ನಡ ರಂಗಭೂಮಿಗೆ ಈ ನವೀನ ಮಾದರಿಯ ರಂಗಪ್ರಕಾರವನ್ನು ಅಳವಡಿಸುವಲ್ಲಿ ನಿರತರಾಗಿದ್ದಾರೆ. ಜಪಾನ್ ದೇಶದ ಬುನ್ರಾಕು ಮಾದರಿಯ ಪೊಪೆಟ್‌ಗಳ ಬಳಕೆ ಹಕ್ಕಿಕಥೆ ನಾಟಕದಲ್ಲಿದೆ. ಬುನ್ರಾಕು ಮಾದರಿಯಲ್ಲಿ ಗೊಂಬೆಗಳಿಗೆ ಸೂತ್ರವನ್ನು ಕಟ್ಟಿ ಆಡಿಸುವುದಿಲ್ಲ. ಬದಲಿಗೆ ನಟರುಗಳು ಗೊಂಬೆಯ ಭಾಗಗಳಾಗಿ ಅಭಿನಯಿಸುತ್ತಾರೆ. ಮನುಷ್ಯ ದೇಹ ಮತ್ತು ಗೊಂಬೆಗಳ ನಡುವೆ ಒಂದು ವಿಶಿಷ್ಟ ಸಮನ್ವಯ ಏರ್ಪಾಡಾಗಿ ಗೊಂಬೆಗಳಿಗೆ ಜೀವಬಂದು ಚಲಿಸುವಂತೆ ಮತ್ತು ಗೊಂಬೆಗಳೇ ಮಾತನಾಡುವ ಅನುಭವವನ್ನು ಕಟ್ಟಿಕೊಡುತ್ತಾರೆ. ಕೆಲವು ಸಲ ಒಂದೇ ಗೊಂಬೆಯನ್ನು ನಾಲ್ಕು ಅಥವಾ ಐದು ಜನರು ನಿರ್ವಹಿಸುವ ಉದಾಹರಣೆಗಳು ಸಿಗುತ್ತವೆ. ಆದರೆ ಗೊಂಬೆಗಳ ಹಿಂದಿರುವ ಕೈಗಳು ಮಾತ್ರ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಇಲ್ಲಿ ನಟರು ಸಂಪೂರ್ಣ ಕಪ್ಪುಬಟ್ಟೆ ತೊಟ್ಟು ಗೊಂಬೆಗಳ ಹಿಂದೆ ಅವಿತುಕೊಂಡು ಗೊಂಬೆಗಳಿಗೆ ಜೀವತುಂಬುತ್ತಾರೆ. ಹಾಗಾಗಿಯೇ ಇಲ್ಲಿನ ಹಕ್ಕಿಗೊಂಬೆ ನಿಜ ಹಕ್ಕಿಯಂತೆ ಹಾರುತ್ತದೆ, ಚಿರತೆಗೊಂಬೆ ನಿಜ ಚಿರತೆಯಂತೆ ನೆಗೆಯುತ್ತದೆ ಮತ್ತು ಇನ್ನಿತರ ಗೊಂಬೆಗಳು ಅವುಗಳ ನಿಜ ಸ್ವಭಾವಕ್ಕೆ ಸರಿಹೊಂದುವಂತೆ ವರ್ತಿಸುತ್ತವೆ. ರಂಗಾಯಣದ ನಟ ನಟಿಯರು ನುರಿತ ಗೊಂಬೆ ತಂತ್ರಜ್ಞರಂತೆ ಈ ನಾಟಕದಲ್ಲಿ ಅಭಿನಯಿಸಿದ್ದಾರೆ. ಗೊಂಬೆಗಳ ಕಾರಣದಿಂದಾಗಿಯೇ ಅತ್ಯಂತ ನೋವಿನ ಕಥೆಯೂ ವಿಸ್ಮಯದ ಅನುಭವವನ್ನು ನೀಡುತ್ತದೆ.

ಮಲೆನಾಡು ಮತ್ತು ಕರಾವಳಿಯ ಜನರಿಗೆ ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ವಿಪ್ಲವಗಳ ಅರಿವಿರುವುದು ಸಹಜ. ಪರಿಸರ ಮಾಲಿನ್ಯ, ಅರಣ್ಯನಾಶ ಮತ್ತು ಮಾನವ - ವನ್ಯಜೀವಿ ಸಂಘರ್ಷಗಳ ವಿಷಯವು ಪ್ರತಿನಿತ್ಯ ಕಣ್ಣಿಗೆ ರಾಚುವ ಅಂಶವಾಗಿವೆ. ಈ ಎಲ್ಲಾ ನಾಶದ ಪರಿಣಾಮಗಳನ್ನು ಹಕ್ಕಿಯೊಂದರ ಆತ್ಮಕಥೆಯ ಮೂಲಕ ಹೃದಯಸ್ಪರ್ಶಿಯಾಗಿ ನಾಟಕ ತೋರಿಸುತ್ತದೆ. ಮಕ್ಕಳ ಮನಸ್ಸಿಗೆ ತಾಕುವಂತೆ ಹಾಗೂ ದೊಡ್ಡವರಿಗೆ ತಮ್ಮ ತಪ್ಪಿನ ಅರಿವಾಗುವಂತೆ ಮಾಡುತ್ತದೆ. ನೀತಿಕಥೆಯ ಧಾಟಿ ನಾಟಕದ ನಿರೂಪಣೆಯಲ್ಲಿದ್ದರೂ ನೀತಿಬೋಧನೆಯ ಉಪದೇಶವಿಲ್ಲ. ಯಕ್ಷಗಾನ ಶೈಲಿಯ ಚಲನೆ, ಕುಣಿತ ಹಾಗೂ ಸಂಗೀತದ ಮಟ್ಟುಗಳಿವೆ. ಗೊಂಬೆಗಳು ನಿಜ ಮನುಷ್ಯರಾಗುವುದು ಹಾಗೂ ಮನುಷ್ಯರು ಗೊಂಬೆಗಳಾಗಿ ಮಾರ್ಪಾಡಾಗುವುದು ನಯವಾಗಿ ಒದಗಿಬರುತ್ತದೆ. ನಟ-ನಟಿಯರ ಶೈಲೀಕೃತ ಅಭಿನಯ ಮತ್ತು ಗೊಂಬೆಗಳ ಸಹಜ ನಟನೆ ಈ ನಾಟಕದಲ್ಲಿ ಹದವಾಗಿ ಮೇಳೈಸಿವೆ. ಕೆಲವು ಕಡೆ ಅಬ್ಬರದ ಸಂಗೀತ ಮತ್ತು ನಟರ ಯಕ್ಷಗಾನ ಪ್ರೇರಿತ ಚಲನೆಗಳು ಹಾಗೂ ಪುರಾಣದ ಶೈಲಿಯ ವೇಷಭೂಷಣಗಳು ಪುಳಕಗೊಳಿಸುವ ನವೀನ ನಮೂನೆಯ ಗೊಂಬೆಗಳ ಜೊತೆ ಹೊಂದದಂತೆ ಕಾಣಿಸಿದರೂ ಒಟ್ಟಂದದಲ್ಲಿ ನಾಟಕಕ್ಕೆ ಮೆರುಗು ತಂದುಕೊಡುತ್ತವೆ. ಗೊಂಬೆಗಳ ಚಲನೆಯಲ್ಲಿರುವ ನುಣುಪು ನಟರ ಅಭಿನಯದಲ್ಲಿಯೂ ಬಂದರೆ ನಾಟಕ ಇನ್ನೂ ಪರಿಣಾಮಕಾರಿಯಾಗುತ್ತದೆ. ಅತಿ ಕಪ್ಪು ಕತ್ತಲೆಯ ರಂಗದ ಮೇಲೆ ಮೂಡುವ ನೇರಳೆ ಬಣ್ಣದ ಬೆಳಕಿನ ವಿನ್ಯಾಸ ಮಾಯಾಲೋಕವನ್ನೇ ಸೃಷ್ಟಿಸುತ್ತದೆ.

ಕನ್ನಡ ಮಕ್ಕಳ ರಂಗಭೂಮಿಯಲ್ಲಿ ಬುನ್ರಾಕು ಗೊಂಬೆಗಳ ಬಳಕೆಯಿಂದಾಗಿ ‘ಹಕ್ಕಿಕಥೆ’ ನಾಟಕ ಪ್ರಯೋಗವು ಒಂದು ಮಹತ್ವದ ಮೈಲಿಗಲ್ಲು.

 ಫೋಟೊ: ಸಮೃದ್ಧಿ ನಂದಿ

Similar News