ಹಿರಿಯಜ್ಜಿ ಮೊರೆರಾ

Update: 2023-01-24 06:34 GMT

ಅಮೆರಿಕದಲ್ಲಿ ಜನಿಸಿದ ಸ್ಪ್ಯಾನಿಷ್ ಮಹಿಳೆ, 115 ವರ್ಷ ವಯಸ್ಸಿನ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಸಲಹೆಗಾರ ಹೇಳಿದ್ದಾರೆ. 118 ವರ್ಷ ವಯಸ್ಸಿನ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಈ ವಾರ ನಿಧನರಾದ ನಂತರ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಷಯವೇನೆಂದರೆ, ಇಷ್ಟು ವರ್ಷಗಳಲ್ಲಿ ಅವರೆಂದೂ ಆಸ್ಪತ್ರೆಗೇ ಹೋದವರಲ್ಲ ಎಂಬುದು.

1918ರ ಫ್ಲೂ, ಎರಡು ವಿಶ್ವ ಯುದ್ಧಗಳು ಮತ್ತು ಸ್ಪೇನ್‌ನ ಅಂತರ್ಯುದ್ಧಗಳನ್ನೆಲ್ಲ ಕಂಡಿರುವವರು ಮೊರೆರಾ. ಕಳೆದ ಎರಡು ದಶಕಗಳಿಂದ ಬ್ರನ್ಯಾಸ್ ಮೊರೆರಾ ವಾಸಿಸುತ್ತಿರುವ ಈಶಾನ್ಯ ಸ್ಪೇನ್‌ನ ಓಲೋಟ್ ಪಟ್ಟಣದಲ್ಲಿರುವ ಸಾಂಟಾ ಮಾರಿಯಾ ಡೆಲ್ ತುರಾ ನರ್ಸಿಂಗ್ ಹೋಮ್, ಅವರಿಗೆ ಹಿರಿಯ ವ್ಯಕ್ತಿ ಹೆಗ್ಗಳಿಕೆ ದೊರೆತಿರುವ ಈ ಸಂದರ್ಭವನ್ನು ಸಂಭ್ರಮಿಸಿದೆ. ಬ್ರನ್ಯಾಸ್ ಮೊರೆರಾ ಅವರ ಕಿರಿಯ ಮಗಳು, 78 ವರ್ಷ ವಯಸ್ಸಿನ ರೋಸಾ ಮೊರೆಟ್, ತನ್ನ ತಾಯಿಯ ದೀರ್ಘಾಯುಷ್ಯಕ್ಕೆ ಆನುವಂಶಿಕತೆ ಕಾರಣವೆಂದು ಹೇಳಿದ್ದಾರೆ. ಅವರು ಎಂದಿಗೂ ಆಸ್ಪತ್ರೆಗೆ ಹೋಗಿಲ್ಲ, ಎಂದೂ ಯಾವುದೇ ಮೂಳೆಗಳು ಮುರಿದಿಲ್ಲ, ಅವರು ಚೆನ್ನಾಗಿಯೇ ಇದ್ದಾರೆ. ಆಕೆಗೆ ಯಾವುದೇ ನೋವು ಇಲ್ಲ ಎಂದು ಮೊರೆಟ್ ಹೇಳಿರುವುದು ವರದಿಯಾಗಿದೆ.

ಬ್ರನ್ಯಾಸ್ ಮೊರೆರಾ 1907ರ ಮಾರ್ಚ್ 4ರಂದು, ಆಕೆಯ ಕುಟುಂಬ ಮೆಕ್ಸಿಕೋದಿಂದ ಅಮೆರಿಕಕ್ಕೆ ಸ್ಥಳಾಂತರಗೊಂಡ ಸ್ವಲ್ಪಸಮಯದ ನಂತರ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಜನಿಸಿದರು. ಮೊದಲ ವಿಶ್ವಸಮರದ ವೇಳೆ ಇಡೀ ಕುಟುಂಬವು 1915ರಲ್ಲಿ ಸ್ಪೇನ್‌ಗೆ ಮರಳಲು ನಿರ್ಧರಿಸಿತು. ಹಡಗು ಪ್ರಯಾಣದ ಕೊನೆಯಲ್ಲಿ ಆಕೆಯ ತಂದೆ ಕ್ಷಯರೋಗದಿಂದ ನಿಧನರಾದರು ಮತ್ತು ಅವರ ಶವಪೆಟ್ಟಿಗೆಯನ್ನು ಸಮುದ್ರಕ್ಕೆ ಎಸೆಯಲಾಯಿತು. ಬ್ರನ್ಯಾಸ್ ಮೊರೆರಾ ಮತ್ತು ಅವರ ತಾಯಿ ಬಾರ್ಸಿಲೋನಾದಲ್ಲಿ ನೆಲೆಸಿದರು. 1931ರಲ್ಲಿ, ಸ್ಪೇನ್‌ನ 1936-39ರ ಅಂತರ್ಯುದ್ಧ ಪ್ರಾರಂಭವಾಗುವ ಐದು ವರ್ಷಗಳ ಮೊದಲು ಮೊರೆರಾ ವೈದ್ಯರೊಬ್ಬರನ್ನು ವಿವಾಹವಾದರು. ಪತಿ 72ನೇ ವಯಸ್ಸಿನಲ್ಲಿ ಸಾಯುವವರೆಗೂ ದಂಪತಿ ನಾಲ್ಕು ದಶಕಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು.

113ನೇ ವಯಸ್ಸಿನಲ್ಲಿ ಬ್ರನ್ಯಾಸ್ ಮೊರೆರಾ ಅವರಿಗೆ ಕೊರೋನ ಕೂಡ ಕಾಣಿಸಿಕೊಂಡಿತು. ಓಲೋಟ್‌ನಲ್ಲಿರುವ ಅವರ ಆರೈಕೆ ಮನೆಯಲ್ಲಿ ತನ್ನ ಕೋಣೆಯೊಳಗೇ ಇದ್ದು ಸಂಪೂರ್ಣ ಚೇತರಿಸಿಕೊಂಡರು. ಇದರ ಬಗ್ಗೆ ಅವರು ತಾನೇನೂ ಅಸಾಮಾನ್ಯವಾದುದನ್ನು ಸಾಧಿಸಿಲ್ಲ ಎಂದು ಹೇಳಿದ್ದಾರೆ.

‘ಮಾಯಾ’ ನಗರಿಗಳು

ಹೊಸ ಹೈಟೆಕ್ ಅಧ್ಯಯನವು ಸುಮಾರು 1,000 ಪುರಾತನ ಮಾಯಾ ವಸಾಹತುಗಳನ್ನು ಶೋಧಿಸಿದೆ. ಉತ್ತರ ಗ್ವಾಟೆಮಾಲಾ ಮತ್ತು ದಕ್ಷಿಣ ಮೆಕ್ಸಿಕೋದ ದಟ್ಟವಾದ ಕಾಡುಗಳಿಂದ ಸಾವಿರಾರು ವರ್ಷಗಳಿಂದ ಮರೆಯಾಗಿರುವ ಪ್ರಪಂಚದ ಮೊದಲ ಹೆದ್ದಾರಿ ಜಾಲದ ಮೂಲಕ ಸಂಪರ್ಕಗೊಂಡಿದ್ದ, ಈ ಮೊದಲು ತಿಳಿದಿರದ 417 ನಗರಗಳನ್ನೂ ಈ ಶೋಧನೆ ಪತ್ತೆಹಚ್ಚಿದೆ.LiDAR ಅಧ್ಯಯನಗಳು ಎಂದೇ ಕರೆಯಲಾಗುವ, ಸುಮಾರು 3,000 ವರ್ಷಗಳಷ್ಟು ಹಳೆಯದಾದ ಮಾಯಾ ವಸಾಹತುಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳ ಆವಿಷ್ಕಾರದ ಕುರಿತು ಗ್ವಾಟೆಮಾಲಾದ FARES  ಮಾನವಶಾಸ್ತ್ರೀಯ ಸಂಶೋಧನಾ ಪ್ರತಿಷ್ಠಾನ ಹೇಳಿದೆ.

ಇದರ ಬಗ್ಗೆ ಕಳೆದ ತಿಂಗಳು ಪ್ರಾಚೀನ ಮೆಸೊಅಮೆರಿಕ ಜರ್ನಲ್‌ನಲ್ಲಿ ಬರೆಯಲಾಗಿದೆ. ಹೊಸದಾಗಿ ಸಂಶೋಧಿತವಾದ ರಚನೆಗಳೆಲ್ಲವೂ, ಗಣಿತ ಮತ್ತು ಬರವಣಿಗೆಯಲ್ಲಿ ಮಾನವನ ಪ್ರಮುಖ ಸಾಧನೆಗಳಿಗೆ ನಾಂದಿ ಹಾಡಿದ ಅತಿದೊಡ್ಡ ಮಾಯಾ ನಗರ ರಾಜ್ಯಗಳು ಹೊರಹೊಮ್ಮುವ ಶತಮಾನಗಳಿಗೂ ಮೊದಲು ನಿರ್ಮಿತವಾದವುಗಳೆನ್ನಲಾಗಿದೆ. LiDAR ತಂತ್ರಜ್ಞಾನವು ದಟ್ಟವಾದ ಕಾಡಿನಲ್ಲಿ ಬೆಳಕನ್ನು ಹರಿಸಿ ಸಸ್ಯಗಳನ್ನು ಶೋಧಿಸಲು ಮತ್ತು ಪ್ರಾಚೀನ ರಚನೆಗಳನ್ನು ಗುರುತಿಸಲು ವಿಮಾನಗಳನ್ನು ಬಳಸುತ್ತದೆ.

ಸಂಶೋಧನೆಯ ಮೊದಲ ಹಂತದಲ್ಲಿ ಪ್ರಾಚೀನ ಪ್ರಪಂಚದ ಮೊದಲ ವ್ಯಾಪಕವಾದ ಕಲ್ಲಿನ ಹೆದ್ದಾರಿಗಳು ಕಂಡಿವೆ. ಇಲ್ಲಿಯವರೆಗೆ ಸುಮಾರು 177 ಕಿ.ಮೀ. ವಿಶಾಲವಾದ ರಸ್ತೆಮಾರ್ಗಗಳನ್ನು ಕಂಡುಕೊಳ್ಳಲಾಗಿದ್ದು, ಕೆಲವು ಸುಮಾರು 40 ಮೀಟರ್ ಅಗಲ ಮತ್ತು ನೆಲದಿಂದ 16 ಅಡಿಗಳಷ್ಟು ಎತ್ತರದಲ್ಲಿವೆ ಎಂದಿದ್ದಾರೆ ಸಂಶೋಧಕರು. ಉತ್ತರ ಗ್ವಾಟೆಮಾಲಾದ ಪೆಟೆನ್ ಜಂಗಲ್‌ನಿಂದ ದಕ್ಷಿಣ ಮೆಕ್ಸಿಕೋದ ಕ್ಯಾಂಪೀಚೆ ರಾಜ್ಯದವರೆಗೆ ವಿಸ್ತರಿಸಿರುವ ಕ್ಯುಂಕಾ ಕಾರ್ಸ್ಟಿಕಾ ಮಿರಾಡೋರ್-ಕಲಾಕ್ಮುಲ್ ಅಧ್ಯಯನದ ಭಾಗವಾಗಿ ಸಂಶೋಧಕರು ಪಿರಮಿಡ್‌ಗಳು, ಬಾಲ್ ಗೇಮ್ ಕೋರ್ಟ್‌ಗಳು, ಜಲಾಶಯಗಳು, ಅಣೆಕಟ್ಟುಗಳು ಮತ್ತು ನೀರಾವರಿ ಕಾಲುವೆಗಳು ಸೇರಿದಂತೆ ಮಹತ್ವದ ನೀರಿನ ಇಂಜಿನಿಯರಿಂಗ್ ಅನ್ನು ಗುರುತಿಸಿದ್ದಾರೆ.

ಇದು ಇಡೀ ಪ್ರದೇಶದಾದ್ಯಂತ ಏಕಕಾಲದಲ್ಲಿ ಏನಾಗುತ್ತಿದೆ ಎಂಬುದರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಂಕೀರ್ಣತೆಯನ್ನು ತೋರಿಸುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ. ನಾಗರಿಕತೆಯ ಶಾಸ್ತ್ರೀಯ ಉತ್ತುಂಗತೆಗಿಂತ ಐದು ಶತಮಾನಗಳ ಮುಂಚೆಯೇ ಪ್ರಸಕ್ತ ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದಾದ್ಯಂತ ಡಜನ್‌ಗಟ್ಟಲೆ ಪ್ರಮುಖ ನಗರ ಕೇಂದ್ರಗಳು ಅಭಿವೃದ್ಧಿ ಹೊಂದಿದ್ದವು ಎಂಬುದರ ದ್ಯೋತಕ.

ಕಾಡ್ಗಿಚ್ಚು ವಿರುದ್ಧ ಕೃತಕ ಬುದ್ಧಿಮತ್ತೆ

ಕಾಡ್ಗಿಚ್ಚುಗಳನ್ನು ನಿವಾರಿಸುವ ಸರಾಸರಿ ವಾರ್ಷಿಕ ಜಾಗತಿಕ ವೆಚ್ಚ ಸುಮಾರು 4 ಲಕ್ಷ ಕೋಟಿ ರೂ. ಎಂದು ವಿಶ್ವ ಆರ್ಥಿಕ ವೇದಿಕೆ ಅಂದಾಜಿಸಿದೆ. ಅವುಗಳ ಮತ್ತು ಅಂತಹ ದುರಂತಗಳಿಂದ ಉಂಟಾಗುವ ಇಂಗಾಲದ ಹೊರಸೂಸುವಿಕೆಯ ವಿರುದ್ಧ ಹೋರಾಡಲು ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚು ಪರಿಣಾಮಕಾರಿ ಎಂಬ ನಿರ್ಧಾರಕ್ಕೆ ಬರಲಾಗಿದೆ. 2021ರಲ್ಲಿ ಜಾಗತಿಕ ಕಾಡ್ಗಿಚ್ಚುಗಳು ಅಂದಾಜು 6,450 ಮೆಗಾ ಟನ್ ಇಂಗಾಲದ ಡೈಆಕ್ಸೈಡನ್ನು ವಾತಾವರಣಕ್ಕೆ ಬಿಡುಗಡೆ ಮಾಡಿದೆ ಎಂದು ಐದು ದಿನಗಳ ವಾರ್ಷಿಕ ಸಭೆಯ ಮೊದಲ ದಿನ ಬಿಡುಗಡೆಯಾದ ವರದಿಯಲ್ಲಿ ಡಬ್ಲುಎಫ್‌ಎಫ್ ಹೇಳಿದೆ. 2000ದಿಂದ ಅಮೆರಿಕ ಸುಮಾರು 15 ಲಕ್ಷ ಕಾಡ್ಗಿಚ್ಚುಗಳನ್ನು ಎದುರಿಸಿದೆ, ಆದರೆ ಆಸ್ಟ್ರೇಲಿಯದಲ್ಲಿ, 2019-2020ರ ಅವಧಿಯ ಕಾಡ್ಗಿಚ್ಚುಗಳಲ್ಲಿ 300 ಕೋಟಿ ಪ್ರಾಣಿಗಳು ಕೊಲ್ಲಲ್ಪಟ್ಟವು ಅಥವಾ ಸ್ಥಳಾಂತರಗೊಂಡವೆಂದು ಅಂದಾಜಿಸಲಾಗಿದೆ.

ಈ ವಿನಾಶಕಾರಿ ಪ್ರವೃತ್ತಿಯು ಮುಂದುವರಿಯಲಿದೆ. ವಿಶ್ವ ಹವಾಮಾನ ಸಂಸ್ಥೆಯ ಡೇಟಾವನ್ನು ಗಮನಿಸಿದರೆ 2050ರ ವೇಳೆಗೆ ಜಾಗತಿಕವಾಗಿ ಶೇ. 30ರಷ್ಟು ಹೆಚ್ಚು ಕಾಡ್ಗಿಚ್ಚುಗಳು ಸಂಭವಿಸಲಿವೆ ಎಂದಿದೆ ಡಬ್ಲುಇಎಫ್. ವಿಶ್ವಸಂಸ್ಥೆಯ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) ವರದಿ ಪ್ರಕಾರ, ವಿಶ್ವದ ಜನಸಂಖ್ಯೆಯ ಶೇ.30ರಷ್ಟು ಜನರು ವರ್ಷಕ್ಕೆ 20 ದಿನಗಳಿಗಿಂತ ಹೆಚ್ಚು ಮಾರಣಾಂತಿಕ ಶಾಖದ ಅಲೆಗಳಿಗೆ ಒಡ್ಡಿಕೊಳ್ಳಬೇಕಾಗಿದೆ.

ಕೃತಕ ಬುದ್ಧಿಮತ್ತೆ ಬಳಕೆಯಿಂದ ಕಾಡ್ಗಿಚ್ಚು ಅಪಾಯದ ಮ್ಯಾಪಿಂಗ್ ಮತ್ತು ಲಾಜಿಸ್ಟಿಕ್ ಯೋಜನೆ ಮೂಲಕ ಸ್ಥಿರ ಮತ್ತು ಹವಾಮಾನ ಡೇಟಾಸೆಟ್‌ಗಳನ್ನು ಸಂಯೋಜಿಸುವುದರಿಂದ ನಿಖರವಾಗಿ ಕಾಡ್ಗಿಚ್ಚಿನ ಮುನ್ಸೂಚನೆ ಪಡೆಯಬಹುದು. ಮತ್ತು ತ್ವರಿತ ಕ್ರಮ ಕೈಗೊಳ್ಳಬಹುದು ಎಂಬುದು ಡಬ್ಲುಇಎಫ್ ಅಭಿಪ್ರಾಯ.

ನೈಜ-ಸಮಯದ ನಕ್ಷೆಗಳನ್ನು ತಯಾರಿಸಲು ಗೂಗಲ್ ಸಹ ಭೂಸ್ಥಿರ ಉಪಗ್ರಹಗಳನ್ನು ಬಳಸುತ್ತದೆ. ಆದರೆ ನಾಸಾದ ಸಂಪನ್ಮೂಲ ನಿರ್ವಹಣೆಗಾಗಿನ ಅಗ್ನಿ ಮಾಹಿತಿ (FIRMS) ಕಡಿಮೆ-ಕಕ್ಷೆಯ ಉಪಗ್ರಹಗಳು ಮತ್ತು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ಬಾಹ್ಯಾಕಾಶ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕೇಂದ್ರ (SSEC) ಅಭಿವೃದ್ಧಿಪಡಿಸಿದ ಭೂಮಿಯ ವೀಕ್ಷಣೆ ಮತ್ತು ಕಾಡ್ಗಿಚ್ಚು ಪತ್ತೆಯ ನಡುವೆ ಕೇವಲ 60 ಸೆಕೆಂಡುಗಳ ಅಂತರದಲ್ಲಿ ಲೈವ್ ಫೈರ್ ಡೇಟಾವನ್ನು ಒದಗಿಸುವ ಸಾಫ್ಟ್‌ವೇರ್ ಅನ್ನು ಬಳಸುತ್ತದೆ. ಇಂತಹ ಹಲವು ತಾಂತ್ರಿಕತೆಗಳು ಬೆಂಕಿಯ ಸಂಭವನೀಯ ತೀವ್ರತೆ ತಿಳಿಯಲು ಮತ್ತು ಅದನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮವನ್ನು ಅನುವು ಮಾಡಿಕೊಡುತ್ತವೆ.

Similar News