ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಕುಸಿದ ಗೌತಮ್ ಅದಾನಿ
ಅಗ್ರ ಮೂವರಲ್ಲಿ ಸೇರಿದ ಜೆಫ್ ಬೆಝೊಸ್
ಹೊಸದಿಲ್ಲಿ: ಬ್ಲೂಮ್‌ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದ ದೈನಂದಿನ ಶ್ರೇಯಾಂಕದಲ್ಲಿ ವಿಶ್ವದ ಮೂರು ಅತಿ ಶ್ರೀಮಂತರ ಪಟ್ಟಿಯಿಂದ ಭಾರತದ ಉದ್ಯಮಿ, ಕೋಟ್ಯಧಿಪತಿ ಗೌತಮ್ ಅದಾನಿ (Gautam Adani) ಹೊರ ಬಿದ್ದಿದ್ದಾರೆ. ಈ ದಿನದ ಶ್ರೇಯಾಂಕ ಪಟ್ಟಿಯಲ್ಲಿ ಅವರು ಮೂರನೆಯ ಸ್ಥಾನದಿಂದ ನಾಲ್ಕನೆಯ ಸ್ಥಾನಕ್ಕೆ ಕುಸಿದಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಅಮೆಝಾನ್ ಸಂಸ್ಥಾಪಕ ಜೆಫ್ ಬೆಝೋಸ್ (Jeff Bezos) ಮೂರನೆ ಸ್ಥಾನಕ್ಕೇರಿದ್ದು, ಲೂಯಿಸ್ ವಿಟ್ಟನ್ನ ಮಾಲಕ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಟೆಸ್ಲಾ, ಸ್ಪೇಸ್ ಎಕ್ಸ್, ಟ್ವಿಟರ್ (Twitter) ಮಾಲಕ ಎಲಾನ್ ಮಸ್ಕ್ (Elon Musk) ಅವರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಈ ನಡುವೆ ರಿಲಯನ್ಸ್ ಗ್ರೂಪ್ ಮಾಲಕ ಮುಕೇಶ್ ಅಂಬಾನಿ ಮೊದಲ ಹತ್ತು ಶ್ರೀಮಂತರ ಪಟ್ಟಿಯಿಂದ ಮತ್ತೆ ಕುಸಿದಿದ್ದು, ಅವರ ಸಂಪತ್ತಿನ ಒಟ್ಟಾರೆ ಮೌಲ್ಯದ ಅನುಸಾರ 12 ಸ್ಥಾನದಲ್ಲಿದ್ದಾರೆ.
ಮತ್ತೊಂದು ಕಡೆ, ಕಳೆದ 24 ಗಂಟೆಗಳಲ್ಲಿ ಗೌತಮ್ ಅದಾನಿ 872 ದಶಲಕ್ಷ ಡಾಲರ್ ಮೌಲ್ಯದ ಸಂಪತ್ತಿನ ನಷ್ಟ ಅನುಭವಿಸಿದ್ದು, ಜನವರಿ 24, 2022ರಿಂದ ಇಲ್ಲಿಯವರೆಗೆ ಒಟ್ಟು 683 ದಶಲಕ್ಷ ಮೌಲ್ಯದ ಸಂಪತ್ತಿನ ನಷ್ಟ ಅನುಭವಿಸಿದ್ದಾರೆ. ಹಾಗೆಯೇ ಅಂಬಾನಿ ಕಳೆದ 24 ಗಂಟೆಗಳಲ್ಲಿ 547 ದಶಲಕ್ಷ ಮೌಲ್ಯದ ಸಂಪತ್ತಿನ ನಷ್ಟ ಅನುಭವಿಸಿದ್ದು, ಜನವರಿ 24, 2022ರಿಂದ ಇಲ್ಲಿಯವರೆಗೆ 2.38 ಶತಕೋಟಿ ಡಾಲರ್ ಮೌಲ್ಯದ ಸಂಪತ್ತಿನ ನಷ್ಟ ಅನುಭವಿಸಿದ್ದಾರೆ. ಹೀಗಿದ್ದೂ, ಈ ಇಬ್ಬರು ಏಷ್ಯಾದ ಅತ್ಯಂತ ಶ್ರೀಮಂತರಾಗಿ ಮುಂದುವರಿದಿದ್ದಾರೆ.
ಇದನ್ನೂ ಓದಿ| ಬೆಂಗಳೂರು: ಫ್ಲೈಓವರ್ ಮೇಲಿಂದ ಹಣ ಎಸೆದ ವ್ಯಕ್ತಿ; ವೀಡಿಯೊ ವೈರಲ್