ಮೌಲ್ಯಗಳ ಶಿಕ್ಷಣದ ಮೂಲ ಸಂವಿಧಾನವೇ ಹೊರತು ಧಾರ್ಮಿಕತೆಯಲ್ಲ

Update: 2023-01-25 05:21 GMT

ಸಾರ್ವಜನಿಕ ಸಂಸ್ಥೆಗಳಾದ ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೆರೆಸುವ ಮೂಲಕ ಮೌಲ್ಯ ಶಿಕ್ಷಣದ ಸೋಗಿನಲ್ಲಿ ಒಂದು ಬಗೆಯ ಧಾರ್ಮಿಕ ಮತಾಂಧತೆ ಎಂದಿಗೂ ಸಲ್ಲದು. ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ಮಕ್ಕಳು ಶಾಲೆಯಲ್ಲಿ ಕಲಿಯಬೇಕಾದ ಮೌಲ್ಯಗಳು, ಸಂವಿಧಾನವನ್ನು ಕೇಂದ್ರೀಕರಿಸಿದ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಜೊತೆಗೆ ಮಾನವ ಹಕ್ಕುಗಳ ನೆಲೆಯಲ್ಲಿನ ಮಾನವೀಯ ಮೌಲ್ಯಗಳಾಗಿರಬೇಕೇ ಹೊರತು ಧರ್ಮಾಧಾರಿತ ಮೌಲ್ಯಗಳಲ್ಲ. ಈ ಬಗ್ಗೆ ಮಕ್ಕಳ ಪಾಲಕರು ಮತ್ತು ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಬೇಕಿದೆ.

 ಮೌಲ್ಯಗಳ ಶಿಕ್ಷಣದ ಕುರಿತಾದ ಚರ್ಚೆ ಶಾಲಾ ಶಿಕ್ಷಣದಲ್ಲಿ ಹೊಸದೇನಲ್ಲ. ಶಿಕ್ಷಣದ ಮೂಲ ಉದ್ದೇಶವೇ ಸಾಮಾಜಿಕ ಒಳಿತು ಮತ್ತು ಮಾನವೀಯತೆಯ ಬದುಕನ್ನು ಕಟ್ಟಿಕೊಳ್ಳಲು ಅವಶ್ಯವಾದ ಜ್ಞಾನವನ್ನು ಮಕ್ಕಳಿಗೆ ಕೊಡಮಾಡುವುದು. ಅಗತ್ಯವಿದ್ದಾಗ, ಶಿಕ್ಷಣದ ಮೌಲ್ಯಗಳು ಸಾಮಾಜಿಕ ಪರಿವರ್ತನೆಯ ದೊಡ್ಡ ಸಾಧನವೂ ಹೌದು. ಶಿಕ್ಷಣ ಚಲನಶೀಲವಾಗಿದ್ದು ಆಯಾ ಕಾಲಕ್ಕೆ ಅಗತ್ಯವಾದ ಮೌಲ್ಯಗಳನ್ನು ಒಳಮಾಡಿಕೊಳ್ಳುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಸ್ವಾತಂತ್ರ್ಯಾನಂತರ ಸಂವಿಧಾನವನ್ನು ಕೇಂದ್ರೀಕರಿಸಿ ಸಾಂವಿಧಾನಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಬಗ್ಗೆ ನಮ್ಮ ಎಲ್ಲಾ ರಾಷ್ಟ್ರೀಯ ಶಿಕ್ಷಣ ನೀತಿಗಳು ಹಾಗೂ ಪಠ್ಯಕ್ರಮ ಚೌಕಟ್ಟುಗಳು ಒತ್ತಿ ಹೇಳಿವೆ.

ಸಂವಿಧಾನದ ನೆಲೆಯಲ್ಲಿ ಮೌಲ್ಯ ಶಿಕ್ಷಣದ ತಿರುಳು ಸಂವಿಧಾನ ಪ್ರತಿಪಾದಿಸುವ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಜೊತೆಗೆ ಮಾನವ ಹಕ್ಕುಗಳ ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಮತ್ತು ಜೀವನದಲ್ಲಿ ಅನುಸರಿಸುವ ಮೂಲಕ ಪ್ರತಿಯೊಬ್ಬ ನಾಗರಿಕನು ಘನತೆಯಿಂದ ಜೀವಿಸುವ ಭೂಮಿಕೆಯನ್ನು ಸಮಾನತೆ ಮತ್ತು ತಾರತಮ್ಯರಹಿತ ನೆಲೆಯಲ್ಲಿ ಕಟ್ಟಿಕೊಡುವುದಾಗಿದೆ. ಈ ಕುರಿತು ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕ ಪ್ರಾಧಿಕಾರಗಳಾದ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿ ಹಾಗೂ ರಾಜ್ಯಗಳಲ್ಲಿ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಮಂಡಳಿಗಳು ಅಗತ್ಯ ಪಠ್ಯಕ್ರಮ ಚೌಕಟ್ಟು ರೂಪಿಸುವ ಕೆಲಸವನ್ನು ನಿರ್ವಹಿಸುತ್ತಿವೆ. ಪ್ರಮಾಣೀಕರಿಸಿದ ಚೌಕಟ್ಟು ಈ ಬಗೆಯದಾಗಿರುವಾಗ, ಧರ್ಮ-ಧಾರ್ಮಿಕ ನೆಲೆಯಲ್ಲಿ ಸರಕಾರ ಹಾಗೂ ಸ್ವಾಮೀಜಿಗಳು ಮೌಲ್ಯಗಳ ಶಿಕ್ಷಣಕ್ಕೆ ಬೇರೆಯೇ ವ್ಯಾಖ್ಯಾನ ನೀಡುತ್ತಿರುವ ಸಂದರ್ಭದಲ್ಲಿ, ಶಿಕ್ಷಣ ನೀತಿಗಳ ಪರಾಮರ್ಶೆ ಸಹಾಯಕವಾಗಬಹುದು. ನಮ್ಮ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ (1968), ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಕುರಿತು ಪ್ರಸ್ತಾವಿಸಿದೆ. ಶೈಕ್ಷಣಿಕ ವ್ಯವಸ್ಥೆಯು ಯುವಕ-ಯುವತಿಯರನ್ನು ರಾಷ್ಟ್ರೀಯ ಸೇವೆಗೆ ಮತ್ತು ಅಭಿವೃದ್ಧಿಗೆ ಬದ್ಧವಾಗಿರುವ ಗುಣ ಮತ್ತು ಸಾಮರ್ಥ್ಯ ಹೊಂದಿರುವವರನ್ನಾಗಿ ರೂಪಿಸಬೇಕು. ಶಿಕ್ಷಣ ರಾಷ್ಟ್ರೀಯ ಪ್ರಗತಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ, ಸರ್ವಸಮಾನ ನಾಗರಿಕ ಪ್ರಜ್ಞೆ ಹಾಗೂ ಸಂಸ್ಕೃತಿಯನ್ನು ಸೃಷ್ಟಿಸುವ ಮೂಲಕ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಹಾಗೂ ದೇಶಕ್ಕೆ ಇದು ಅತ್ಯಗತ್ಯ ಎಂದು ಪ್ರತಿಪಾದಿಸಿದೆ (ಪ್ಯಾರಾ 4, 1968). ನಂತರ ರೂಪಿಸಲಾದ 1979ರ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯು, ಮೌಲ್ಯಗಳ ಶಿಕ್ಷಣ ಕುರಿತಂತೆ, ಆದರ್ಶ ಶಿಕ್ಷಣ ವ್ಯವಸ್ಥೆಯು ವ್ಯಕ್ತಿಗಳು ತಮ್ಮನ್ನು ತಾವು ಪೂರ್ಣವಾಗಿ ಅರಿಯುವ ಮೂಲಕ, ಅವರಲ್ಲಿನ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳು ವರ್ಧಿಸುವ ಜೊತೆಗೆ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಅರಿವನ್ನು ಉತ್ತೇಜಿಸುತ್ತದೆ. ಇದರಿಂದ ಅವರು ಉತ್ತಮ ನಡವಳಿಕೆಯ ಮೂಲಕ ಉತ್ತಮ ಜೀವನ ಮತ್ತು ಸಮಾಜದ ಜವಾಬ್ದಾರಿಯುತ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. ಈ ರೀತಿ ವ್ಯಕ್ತಿ ತನ್ನನ್ನು ತಾನು ಪರಿವರ್ತಿಸಿಕೊಳ್ಳುವ ಮೂಲಕ ಸಾಮಾಜಿಕ ಪರಿವರ್ತನೆಯನ್ನೂ ತರಬಹುದಾಗಿದೆ. ಶಿಕ್ಷಣದ ಗುರಿ, ದೇಶದ ಒಳಿತಿಗೆ ಹಾನಿಯಾಗದಂತೆ ಮತ್ತು ನಾವು ಪಾಲಿಸಿಕೊಂಡು ಬಂದಿರುವ ಆದರ್ಶಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗದಂತೆ ವ್ಯಕ್ತಿಯು ಪ್ರಾಮಾಣಿಕವಾಗಿ ಜೀವನ ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗಬೇಕು. ಈ ಮೂಲಕ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಮಾಜವಾದದ ಮೌಲ್ಯಗಳನ್ನು ಬಲಪಡಿಸುವುದು(ಪ್ಯಾರಾ 1.1 ಮತ್ತು 1.2, 1979). 1986 ರಾಷ್ಟ್ರೀಯ ಶಿಕ್ಷಣ ನೀತಿಯು ಮೌಲ್ಯ ಶಿಕ್ಷಣ ಕುರಿತಂತೆ, ಸಾಂಸ್ಕೃತಿಕವಾಗಿ ಬಹುತ್ವದ ನಮ್ಮ ಸಮಾಜದಲ್ಲಿ, ಶಿಕ್ಷಣವು ಸಾರ್ವತ್ರಿಕ ಮತ್ತು ಶಾಶ್ವತ ಮೌಲ್ಯಗಳಾದ ಜನರ ಐಕ್ಯತೆ ಮತ್ತು ಸಮಗ್ರತೆಯನ್ನು ಸಾಧಿಸುವ ಮೌಲ್ಯಗಳನ್ನು ಪೋಷಿಸಬೇಕಿದೆ ಎಂದು ಹೇಳಿದೆ. ಮೌಲ್ಯ ಶಿಕ್ಷಣವು ಗೊಡ್ಡು ಸಂಪ್ರದಾಯ, ಧಾರ್ಮಿಕ ಮತಾಂಧತೆ, ಹಿಂಸೆ, ಮೂಢನಂಬಿಕೆ ಮತ್ತು ದೈವವಾದತ್ವದ ನಿವಾರಣೆಗೆ ನೆರವಾಗಬೇಕು ಎಂದು ಪ್ರತಿಪಾದಿಸಿದೆ (ಪ್ಯಾರಾ 8.5, 1986). 2000ರಲ್ಲಿ ಹೊಸದಾಗಿ ರೂಪಿಸಲಾದ ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ಶಿಕ್ಷಣದ ರಾಷ್ಟ್ರೀಯ ನೀತಿಯು ದೇಶದ ವಿಶಿಷ್ಟ ಸಾಮಾಜಿಕ-ಸಾಂಸ್ಕೃತಿಕ ಗುರುತನ್ನು ಉತ್ತೇಜಿಸಲು ಶಿಕ್ಷಣದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತದೆ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಹಿಷ್ಣುತೆ ಮತ್ತು ವೈಜ್ಞಾನಿಕ ಮನೋಭಾವ ಮತ್ತು ಕಾಳಜಿಗಳನ್ನು ಉತ್ತೇಜಿಸುವ ರಾಷ್ಟ್ರೀಯ ಏಕತೆಗೆ ಮಹತ್ವ ನೀಡುತ್ತದೆ. ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸುಗಳು ಪೌರತ್ವದ ಮೂಲಭೂತ ಕರ್ತವ್ಯಗಳ ಮೇಲೆ ಹಾಗೂ ಮೂಲಭೂತ ಮಾನವ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯಕ್ಕೆ ಬಲವಾದ ಬದ್ಧತೆಗೆ ದಾರಿ ಮಾಡಿಕೊಡುತ್ತದೆ (ಪ್ಯಾರಾ 1.4.7., 2000). ನಂತರ ಪರಿಷ್ಕೃತಗೊಂಡ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (2005), ಮಾನವ ಹಕ್ಕುಗಳಿಗೆ ಗೌರವ, ಸಹಕಾರ, ಸಹನೆ, ಸಹಿಷ್ಣುತೆ, ನ್ಯಾಯ, ಜವಾಬ್ದಾರಿಯುತ ಪೌರತ್ವ, ವೈವಿಧ್ಯತೆ, ಬಹುತ್ವ, ಪ್ರಜಾಪ್ರಭುತ್ವದ ಬಲವರ್ಧನೆ, ಶಾಂತಿಯುತ ಸಹಬಾಳ್ವೆಯಂತಹ ಹಲವು ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (2020), ನಿರ್ದಿಷ್ಟವಾಗಿ ಮೌಲ್ಯಗಳ ಶಿಕ್ಷಣದ ಶಿರೋನಾಮೆ ಅಡಿಯಲ್ಲಿ ಮೌಲ್ಯ ಶಿಕ್ಷಣದ ಬಗ್ಗೆ ಪ್ರಸ್ತಾವಿಸದಿದ್ದರೂ ಸನಾತನ ಭಾರತೀಯ, ಸಾಂವಿಧಾನಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಬಗ್ಗೆ ನೀತಿಯಲ್ಲಿ ಹಲವೆಡೆ ಪ್ರಸ್ತಾವಿಸಿದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೊಂದಿದೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಪ್ರಸ್ತಾವಿಸುತ್ತಲೇ, ಧಾರ್ಮಿಕ ನೆಲೆಯಲ್ಲಿ ಪ್ರತಿಪಾದಿಸುವ ಸನಾತನ ಭಾರತೀಯ ಮೌಲ್ಯಗಳಾದ ಸತ್ಯ, ನಿಷ್ಕಾಮ ಕರ್ಮ, ಶಾಂತಿ, ತ್ಯಾಗ, ಸಹಿಷ್ಣುತೆ, ಸಹಾಯ, ಸೌಜನ್ಯ, ತಾಳ್ಮೆ, ಕ್ಷಮೆ, ಸಹಾನುಭೂತಿ, ದೇಶಭಕ್ತಿ ಇತ್ಯಾದಿಗಳನ್ನು ಮುನ್ನೆಲೆಗೆ ತಂದು, ಸಾಂವಿಧಾನಿಕ ಮೌಲ್ಯಗಳಾದ ಪ್ರಜಾಸತ್ತಾತ್ಮಕ ದೃಷ್ಟಿಕೋನ, ಸಮಗ್ರತೆ, ಕರ್ತವ್ಯ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೆಳಸಬೇಕೆಂದು ಹೇಳುತ್ತಲೇ ಅವುಗಳನ್ನು ಹಿನ್ನೆಲೆಗೆ ಸರಿಸಿ ಗೌಣಗೊಳಿಸುತ್ತದೆ. ಅವುಗಳನ್ನು ಪ್ರಸ್ತಾವಿಸುವ ಮತ್ತು ಪ್ರಸ್ತುತಪಡಿಸುವ ವಿಧಾನದಲ್ಲಿ, ಸಾಂವಿಧಾನಿಕ ಮೌಲ್ಯಗಳನ್ನು ಹಿನ್ನೆಲೆಗೆ ಸರಿಸಿ, ಧಾರ್ಮಿಕ ಮೌಲ್ಯಗಳನ್ನು ಮುನ್ನೆಲೆಗೆ ತಂದು ತನ್ನ ಧರ್ಮ ಆಧಾರಿತ ಹಿಂದುತ್ವವಾದದ ರಾಜಕೀಯ ಅಜೆಂಡಾವನ್ನು ವ್ಯವಸ್ಥಿತವಾಗಿ ತುರುಕುವ ಕೆಲಸ ಮಾಡಿದೆ. ಅದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮೇಲಿನ ಚರ್ಚೆಗಳು, ಹಿಂದಿನ ಶಿಕ್ಷಣ ನೀತಿಗಳು ಪ್ರತಿಪಾದಿಸಿಕೊಂಡು ಬಂದ ಮೌಲ್ಯಗಳ ಶಿಕ್ಷಣಕ್ಕೂ ಮತ್ತು ಭಾರತೀಯ ಜನತಾ ಪಕ್ಷ ಸಂಸತ್ತನ್ನು ಹಾಗೂ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯನ್ನು ಕಡೆಗಣಿಸಿ ಕೋವಿಡ್ ಕಾಲದಲ್ಲಿ ಆತುರವಾಗಿ ಜಾರಿಗೊಳಿಸಿದ ಶಿಕ್ಷಣ ನೀತಿಗಿರುವ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ತಿಳಿಯಲು ಸಹಾಯವಾಗುತ್ತವೆ. ನಿಜ ಹೇಳಬೇಕೆಂದರೆ, ಸಾಂವಿಧಾನಿಕ ನೆಲೆಗಿಂತ ಸನಾತನ ಧಾರ್ಮಿಕ ನೆಲೆಯಲ್ಲಿ ಮೌಲ್ಯಗಳ ಶಿಕ್ಷಣವನ್ನು ಸೇರಿಸುವ ಕೆಲಸವನ್ನು ಭಾರತೀಯ ಜನತಾ ಪಕ್ಷ ತಾನು ಅಧಿಕಾರಕ್ಕೆ ಬಂದ ಎಲ್ಲಾ ಸಂದರ್ಭಗಳಲ್ಲಿ( 1977, 1988, 2014) ಮಾಡುತ್ತಲೇ ಬಂದಿದೆ. ಇತಿಹಾಸವನ್ನು ತಿರುಚುವುದು, ಶಿಕ್ಷಣದಲ್ಲಿ ಕೋಮುವಾದ ಬೆರೆಸುವುದು, ಭಾರತೀಯ ಮೌಲ್ಯಗಳ ಸೋಗಿನಲ್ಲಿ ಆಧುನಿಕ ವೈಜ್ಞಾನಿಕ ಶಿಕ್ಷಣವನ್ನು ಪಲ್ಲಟಗೊಳಿಸಿ ಶಾಸ್ತ್ರ, ಪುರಾಣ ಮತ್ತು ದಂತಕತೆಗಳ ನೆಲೆಯಲ್ಲಿ ಶಿಕ್ಷಣವನ್ನು ಹಿಂದಕ್ಕೆ ಕೊಂಡೊಯ್ಯುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಾ ಬಂದಿದೆ. ಈ ಎಲ್ಲಾ ವಿಚಾರಗಳು ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮಾತ್ರ ಮುನ್ನೆಲೆಗೆ ಬರುವುದರ ಹಿಂದೆ ಒಂದು ಕ್ಷುಲ್ಲಕ ರಾಜಕೀಯ ಅಜೆಂಡಾವಿದೆ. ಶಿಕ್ಷಣವನ್ನು ವೈಜ್ಞಾನಿಕ ಹಾಗೂ ವೈಚಾರಿಕ ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಆಧರಿಸಿ ಮೌಲ್ಯಗಳ ಶಿಕ್ಷಣ ನೀಡಬೇಕೆನ್ನುವ ಸಂವಿಧಾನದ ಆಶಯದ ಬದಲು, ಧಾರ್ಮಿಕ ನೆಲೆಯಲ್ಲಿ ಮೌಲ್ಯಗಳನ್ನು ಅರ್ಥೈಸಿ, ಭಾರತವನ್ನು ಒಂದು ಧಾರ್ಮಿಕ ರಾಷ್ಟ್ರವನ್ನಾಗಿಸುವ ರಾಜಕೀಯ ಪ್ರೇರಿತ ಮೌಲ್ಯ ಶಿಕ್ಷಣವನ್ನು ಪ್ರತಿಪಾದಿಸುವ ಮೂಲಕ ನೈಜ ಮೌಲ್ಯ ಶಿಕ್ಷಣವನ್ನು ಅಪಮೌಲ್ಯಗೊಳಿಸುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಆಯೋಜಿಸಿದ್ದ ಮಠಾಧೀಶರ ಸಭೆ ಒಂದು ಧರ್ಮ ಆಧಾರಿತ ಕೋಮುವಾದಿ ಪಕ್ಷದ ನೆಲೆಯಲ್ಲಿ ಮೌಲ್ಯಗಳ ಶಿಕ್ಷಣದ ಬಗ್ಗೆ ಚರ್ಚಿಸಿದ್ದು ಸಂವಿಧಾನಕ್ಕೆಸಗಿದ ದೊಡ್ಡ ಅಪಚಾರ ಹಾಗೂ ಮೌಲ್ಯ ಶಿಕ್ಷಣವನ್ನು ಅಪಮೌಲ್ಯಗೊಳಿಸುವುದಾಗಿದೆ. ಸಾರ್ವಜನಿಕ ಶಿಕ್ಷಣ ಹೇಗಿರಬೇಕು ಏನನ್ನು ಕಲಿಸಬೇಕೆಂದು ನಿರ್ಧರಿಸಲು ಶೈಕ್ಷಣಿಕ ಪ್ರಾಧಿಕಾರಗಳಿವೆ. ಸ್ವಾಮೀಜಿಗಳಿಗೆ ಸಮಾಜದಲ್ಲಿ ಮೌಲ್ಯಗಳ ಕೊರತೆ ಕಾಣಿಸಿದಲ್ಲಿ, ತಮ್ಮ ಮಠ-ಮಾನ್ಯಗಳಲ್ಲಿ ಅವರು ವೈಯಕ್ತಿಕ ನೆಲೆಯಲ್ಲಿ ಮೌಲ್ಯೋಪದೇಶ ನೀಡಲಿ. ಅದರೆ, ಸಾರ್ವಜನಿಕ ಸಂಸ್ಥೆಗಳಾದ ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೆರೆಸುವ ಮೂಲಕ ಮೌಲ್ಯ ಶಿಕ್ಷಣದ ಸೋಗಿನಲ್ಲಿ ಒಂದು ಬಗೆಯ ಧಾರ್ಮಿಕ ಮತಾಂಧತೆ ಎಂದಿಗೂ ಸಲ್ಲದು. ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ಮಕ್ಕಳು ಶಾಲೆಯಲ್ಲಿ ಕಲಿಯಬೇಕಾದ ಮೌಲ್ಯಗಳು, ಸಂವಿಧಾನವನ್ನು ಕೇಂದ್ರೀಕರಿಸಿದ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಜೊತೆಗೆ ಮಾನವ ಹಕ್ಕುಗಳ ನೆಲೆಯಲ್ಲಿನ ಮಾನವೀಯ ಮೌಲ್ಯಗಳಾಗಿರಬೇಕೇ ಹೊರತು ಧರ್ಮಾಧಾರಿತ ಮೌಲ್ಯಗಳಲ್ಲ. ಈ ಬಗ್ಗೆ ಮಕ್ಕಳ ಪಾಲಕರು ಮತ್ತು ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಬೇಕಿದೆ. 

Similar News