ಜೀವವೈವಿಧ್ಯ ಸಾಧಿಸಲು ಹೊಸ ಚೌಕಟ್ಟು: ‘30x30’

Update: 2023-01-25 05:05 GMT

2030ರವರೆಗೆ ಜೀವವೈವಿಧ್ಯದ ನಷ್ಟವನ್ನು ತಡೆಯಲು ಮತ್ತು ಹಿಮ್ಮೆಟ್ಟಿಸಲು ದೇಶಗಳಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಈ ಚೌಕಟ್ಟು, ನಾಲ್ಕು ವಿಶಾಲ ಗುರಿಗಳನ್ನು ಒಳಗೊಂಡಿದೆ.

ಲ್ಲೆಡೆಯೂ ಕಾಡು ಮತ್ತು ಪ್ರಾಣಿಗಳ ತೀವ್ರಗತಿಯ ನಶಿಸುವಿಕೆ ತಡೆಯಲು 2022ರ ಡಿಸೆಂಬರಿನಲ್ಲಿ ವಿಶ್ವದ ದೇಶಗಳೆಲ್ಲ ಸಮ್ಮತಿಸಿದವು. ಭಾರತಕ್ಕೆ, ಈ ಗುರಿಗಳನ್ನು ಸಾಧಿಸಲು ನಿರ್ಲಕ್ಷಿಸಲ್ಪಟ್ಟ ಪರಿಸರ ವ್ಯವಸ್ಥೆಗಳನ್ನು ಹಳಿಗೆ ತರುವುದು ಅಗತ್ಯವಿದೆ. ಸ್ಥಳೀಯ ವನ್ಯಜೀವಿಗಳಿಂದ ಪ್ರಯೋಜನ ಪಡೆಯುವ ಸ್ಥಳೀಯ ಸಮುದಾಯಗಳ ಹಕ್ಕುಗಳನ್ನು ಗೌರವಿಸುವುದು ಇವುಗಳಲ್ಲಿ ಒಂದೆನ್ನುತ್ತಾರೆ ತಜ್ಞರು.

ಕೆನಡಾದ ಮಾಂಟ್ರಿಯಲ್‌ನಲ್ಲಿ ಡಿಸೆಂಬರ್ 2022ರಲ್ಲಿ ನಡೆದ ಜೈವಿಕ ವೈವಿಧ್ಯತೆ ಕುರಿತ ವಿಶ್ವಸಂಸ್ಥೆ ಸಮಾವೇಶದಲ್ಲಿ 196 ದೇಶಗಳು ‘ಕುನ್ಮಿಂಗ್-ಮಾಂಟ್ರಿಯಲ್ ಗ್ಲೋಬಲ್ ಬಯೋಡೈವರ್ಸಿಟಿ ಫ್ರೇಮ್‌ವರ್ಕ್’ ಅನ್ನು ಒಪ್ಪಿಕೊಂಡಿವೆ. 2030ರವರೆಗೆ ಜೀವವೈವಿಧ್ಯದ ನಷ್ಟವನ್ನು ತಡೆಯಲು ಮತ್ತು ಹಿಮ್ಮೆಟ್ಟಿಸಲು ದೇಶಗಳಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಈ ಚೌಕಟ್ಟು, ನಾಲ್ಕು ವಿಶಾಲ ಗುರಿಗಳನ್ನು ಒಳಗೊಂಡಿದೆ. ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು ಮತ್ತು ಜೀವವೈವಿಧ್ಯದ ಅಳಿವನ್ನು ತಡೆಯುವುದು, ವನ್ಯಸಂಪತ್ತಿನ ಸುಸ್ಥಿರ ಬಳಕೆಯಿಂದ ಪ್ರಯೋಜನ ಪಡೆಯಬಹುದೆಂದು ಖಚಿತಪಡಿಸಿಕೊಳ್ಳುವುದು, ಆನುವಂಶಿಕ ಸಂಪನ್ಮೂಲಗಳ ಪ್ರಯೋಜನದ ಸಮಾನ ಹಂಚಿಕೆ ಮತ್ತು ಈ ಚೌಕಟ್ಟನ್ನು ಕಾರ್ಯಗತಗೊಳಿಸಲು ಸಾಕಷ್ಟು ಸಂಪನ್ಮೂಲಗಳನ್ನು ಪಡೆದುಕೊಳ್ಳುವುದು ನಾಲ್ಕು ಮುಖ್ಯ ಗುರಿಗಳಾಗಿವೆ.

ಇವುಗಳಲ್ಲಿ ಅತಿ ಪ್ರಮುಖವಾದುದು 2030ರ ವೇಳೆಗೆ ವಿಶ್ವದ ಶೇ. 30ರಷ್ಟು ಭೂಮಿ ಮತ್ತು ಸಾಗರಗಳನ್ನು ಸಂರಕ್ಷಿಸುವ ಗುರಿ. ಇದನ್ನು ವ್ಯಾಪಕವಾಗಿ ‘30x30’ ಗುರಿ ಎಂದು ಕರೆಯಲಾಗುತ್ತದೆ.

ಭಾರತ ‘30x30’ ಸಾಧಿಸಬಹುದೇ?

ಸರಕಾರವು ಹೇಳುವ ಪ್ರಕಾರ, ದೇಶದ ಭೌಗೋಳಿಕ ಪ್ರದೇಶದ ಸುಮಾರು ಶೇ. 27 ಈಗಾಗಲೇ ಕೆಲವು ರೀತಿಯ ಸಂರಕ್ಷಣಾ ಕ್ರಮಕ್ಕೆ ಒಳಪಟ್ಟಿದೆ. ಈ ವ್ಯಾಪ್ತಿಯಲ್ಲಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಂತಹ ಔಪಚಾರಿಕ ಸಂರಕ್ಷಿತ ಪ್ರದೇಶಗಳು ಸೇರಿವೆ. ಇದು ಭಾರತದ ಭೂಪ್ರದೇಶದ ಶೇ.5ಕ್ಕಿಂತ ಸ್ವಲ್ಪಹೆಚ್ಚು ಎನ್ನಲಾಗುತ್ತದೆ. ಜೊತೆಗೆ ಕುರುಚಲು ಪ್ರದೇಶಗಳು, ಮೀಸಲು ಅರಣ್ಯಗಳು ಮತ್ತು ವರ್ಗೀಕರಿಸದ ಅರಣ್ಯಗಳು ಸೇರಿದಂತೆ ಇತರ ಪ್ರದೇಶಗಳನ್ನು ಒಳಗೊಂಡಿದೆ.

ಆದರೆ, ಕಡಿಮೆ ಜೀವವೈವಿಧ್ಯವನ್ನು ಹೊಂದಿರುವ ಏಕಬೆಳೆಗಳು ಸೇರಿದಂತೆ ತೋಟಗಳನ್ನು ಅರಣ್ಯ ವ್ಯಾಪ್ತಿ ಎಂದು ವರ್ಗೀಕರಿಸಲಾಗಿದೆ ಮತ್ತು ಅವುಗಳ ಸೇರ್ಪಡೆಯು ಸಂರಕ್ಷಣಾ ಕ್ರಮಗಳ ಅಡಿಯಲ್ಲಿನ ಭೂಮಿಯ ಅಂಕಿಅಂಶವನ್ನು ತಪ್ಪಾಗಿ ಹೆಚ್ಚಿಸುವ ಸಾಧ್ಯತೆಯಿದೆಯೆಂಬುದು ತಜ್ಞರು ವ್ಯಕ್ತಪಡಿಸುವ ಆತಂಕ.

ಭಾರತದಲ್ಲಿ ‘30x30’ ಗುರಿಯನ್ನು ಕಾರ್ಯಗತ ಗೊಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಹುಲ್ಲುಗಾವಲುಗಳು, ಸೀಗ್ರಾಸ್ ಹುಲ್ಲುಗಾವಲುಗಳು ಮತ್ತು ಜೌಗು ಪ್ರದೇಶಗಳಂತಹ ಸಂರಕ್ಷಣಾ ಕ್ರಮದಲ್ಲಿ ಕಡೆಗಣಿಸಲ್ಪಡುವ ಆವಾಸಸ್ಥಾನಗಳ ಮೇಲೆ ಕೇಂದ್ರೀಕರಿಸುವುದು ಎಂಬುದು ಪರಿಣಿತರ ಅಭಿಮತ.

ಯೋಜನೆಯ ಘಟಕವೆಂದು ನಾವು ಮಧ್ಯ ಏಶ್ಯದ ಫ್ಲೈವೇಯನ್ನು ಗಮನಿಸಿದರೆ, ರಕ್ಷಣೆಯ ಅಗತ್ಯವಿರುವ ಮತ್ತು ಅವುಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದನ್ನು ಗಮನಿಸಬೇಕಾದ ಹಲವಾರು ತಾಣಗಳಿವೆ. ಉದಾಹರಣೆಗೆ ಕಡಲತೀರಗಳು, ಕರಾವಳಿ ಪ್ರದೇಶಗಳು ಮತ್ತು ಒಳನಾಡಿನ ನೀರು. ಮಧ್ಯ ಏಶ್ಯದ ಫ್ಲೈವೇ ಒಂದು ಪ್ರಮುಖ ಪಕ್ಷಿ ವಲಸೆ ಮಾರ್ಗವಾಗಿದೆ. ಇದರಲ್ಲಿ ಮಧ್ಯ ಏಶ್ಯ, ಚೀನಾ ಮತ್ತು ರಶ್ಯದಲ್ಲಿ ಸಂತಾನೋತ್ಪತ್ತಿ ಮಾಡುವ ಪಕ್ಷಿಗಳು ಚಳಿಗಾಲವನ್ನು ಕಳೆಯಲು ದಕ್ಷಿಣ ಏಶ್ಯಕ್ಕೆ ಪ್ರಯಾಣಿಸುತ್ತವೆ. ‘30x30’ ಗುರಿ - ಇದು ವಿಶಾಲವಾದ ಭೂದೃಶ್ಯಗಳು, ಕಡಲತೀರಗಳು ಮತ್ತು ಸಾಗರಗಳೊಂದಿಗೆ ಸಂಯೋಜಿಸಲ್ಪಟ್ಟ, ಉತ್ತಮ ಸಂಪರ್ಕ ಹೊಂದಿದ ಸಂರಕ್ಷಿತ ಪ್ರದೇಶಗಳ ಕುರಿತು ಗಮನ ಕೊಡುವಂಥದ್ದು. ಐತಿಹಾಸಿಕವಾಗಿ ಕಡೆಗಣಿಸಲ್ಪಟ್ಟಿರುವ ತಾಣಗಳ ರಕ್ಷಣೆಯನ್ನು ಕಾರ್ಯತಂತ್ರವಾಗಿ ಯೋಜಿಸಲು ಮತ್ತು ಆವಾಸಸ್ಥಾನವನ್ನು ಸುಧಾರಿಸಲು ಇದು ಮುಖ್ಯವಾಗಿ ಒತ್ತುನೀಡುತ್ತದೆ.

ಹೊಸ ಸಂರಕ್ಷಣಾ ಮಾದರಿ?

ದಕ್ಷಿಣ ಏಶ್ಯದಲ್ಲಿ ಸಂರಕ್ಷಿತ ಪ್ರದೇಶದ ಜಾಲಗಳ ಸಂಭಾವ್ಯ ವಿಸ್ತರಣೆಯು ಸಮುದಾಯಗಳ ಹಕ್ಕುಗಳನ್ನು ದುರ್ಬಲಗೊಳಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಅನೇಕ ಪರಿಣಿತರು ಕಳವಳ ವ್ಯಕ್ತಪಡಿಸಿದ್ದಾರೆ. ಮೀನುಗಾರ ಸಮುದಾಯಗಳು ಮತ್ತು ಸಮುದ್ರ ಸಂರಕ್ಷಿತ ಪ್ರದೇಶಗಳ ನಡುವಿನ ಸಂಬಂಧದ ಕುರಿತು ಹೇಳುವುದಾದರೆ, ಭಾರತದಲ್ಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಮೀನುಗಾರಿಕೆ ಮಾಡಲು ಮೀನುಗಾರ ಸಮುದಾಯಗಳಿಗೆ ಅನುಮತಿ ಇಲ್ಲ. 2006ರ ಅರಣ್ಯ ಹಕ್ಕುಗಳ ಕಾಯ್ದೆಯಡಿಯಲ್ಲಿ ಭೂ ಸಂರಕ್ಷಿತ ಪ್ರದೇಶಗಳಲ್ಲಿನ ಅರಣ್ಯ-ವಾಸಿಸುವ ಸಮುದಾಯಗಳ ಭೂಮಿ ಮತ್ತು ಪ್ರವೇಶ ಹಕ್ಕುಗಳನ್ನು ಕಾನೂನುಬದ್ಧವಾಗಿ ರಕ್ಷಿಸಲಾಗಿದೆ, ಮೀನುಗಾರ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಯಾವುದೇ ಸಮಾನವಾದ ಕಾನೂನು ಅಸ್ತಿತ್ವದಲ್ಲಿಲ್ಲ.

ಸ್ಥಳೀಯ ಜನರು ಮತ್ತು ಸ್ಥಳೀಯ ಸಮುದಾಯಗಳ ಹಕ್ಕುಗಳು - ಹಾಗೆಯೇ ಅವರ ಸಾಂಪ್ರದಾಯಿಕ ಮತ್ತು ವನ್ಯಸಂಪತ್ತಿನ ಸಮರ್ಥನೀಯ ಬಳಕೆಯನ್ನು ಯಾವುದೇ ಯೋಜನೆಯ ಅನುಷ್ಠಾನದಲ್ಲಿಯೂ ಗೌರವಿಸಬೇಕು ಮತ್ತು ರಕ್ಷಿಸಬೇಕು. ಸಮುದ್ರ ಸಂರಕ್ಷಿತ ಪ್ರದೇಶಗಳ ನಿರ್ವಹಣೆಯು ಹೊರಗಿಡುವ, ಅಸಮಾನತೆಯ ವ್ಯವಸ್ಥೆಯಾಗಿದ್ದು, ಇದು ಸಂರಕ್ಷಣೆ ಮತ್ತು ಮೀನುಗಾರ ಸಮುದಾಯಗಳ ವಿಚಾರದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕೊಡಲಾರದು ಎಂಬುದು ಪರಿಣಿತರ ಟೀಕೆ.

ಸ್ಥಳೀಯ ಸಮುದಾಯಗಳ ಸ್ಥಳಾಂತರ ಮತ್ತು ಅವರ ಪ್ರವೇಶ ಹಕ್ಕುಗಳ ಮೇಲೆ ನಿರ್ಬಂಧಗಳನ್ನು ಉಂಟುಮಾಡುವ ಅಭಯಾರಣ್ಯಗಳು ಮತ್ತು ಉದ್ಯಾನವನಗಳಂತಹ ಸಂರಕ್ಷಿತ ಪ್ರದೇಶಗಳನ್ನು ವಿಸ್ತರಿಸಲು ಭಾರತವು ಗಮನ ಹರಿಸುವ ಸಾಧ್ಯತೆಯಿಲ್ಲ. ಪ್ರಸಕ್ತ, ಭಾರತವು 106 ರಾಷ್ಟ್ರೀಯ ಉದ್ಯಾನವನಗಳನ್ನು ಮತ್ತು 567 ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿದೆ.

 ಬದಲಾಗಿ, ಭಾರತವು ಈಗ ಇತರ ಪರಿಣಾಮಕಾರಿ ಪ್ರದೇಶ ಆಧಾರಿತ ಸಂರಕ್ಷಣಾ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. ಸಂರಕ್ಷಿತ ಪ್ರದೇಶದ ಸಂಪರ್ಕಜಾಲದ ಹೊರಗೆ ಇರುವ ಜೀವವೈವಿಧ್ಯ ಪ್ರದೇಶಗಳನ್ನು ಮತ್ತು ಆ ಪ್ರದೇಶ ನಿರ್ವಹಣೆಯ ಸಂರಕ್ಷಣಾ ಗುರಿಗಳನ್ನು ಸಾಧಿಸುವ ವಿಚಾರ ಇಲ್ಲಿ ಬರುತ್ತದೆ. ಜೂನ್ 2022ರಲ್ಲಿ, ಭಾರತೀಯ ಪರಿಸರ ಸಚಿವಾಲಯ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ಗುರುತಿಸಿದಂತೆ, ಇದರಲ್ಲಿ ಅರುಣಾಚಲ ಪ್ರದೇಶದ ಅಪತಾನಿ ಬುಡಕಟ್ಟು, ನಾಗಾಲ್ಯಾಂಡ್‌ನ ಚಖೇಸಾಂಗ್ ಬುಡಕಟ್ಟು ಮತ್ತು ಕಾಶ್ಮೀರದ ಕೇಸರಿ ರೈತರು ಅಭ್ಯಾಸ ಮಾಡುವ ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಸೇರಿವೆ.

ಇವುಗಳ ಮೇಲಿನ ಗಮನವು, ಮಾನವ ಚಟುವಟಿಕೆಯ ಮೇಲೆ ಕಡಿಮೆ ನಿರ್ಬಂಧಗಳನ್ನು ಹೊಂದಿರುವ ಪ್ರದೇಶಗಳನ್ನು ಸೇರಿಸಲು ಸಂರಕ್ಷಣೆಯನ್ನು ಮರು ವ್ಯಾಖ್ಯಾನಿಸುವ ಪ್ರಯತ್ನದ ಭಾಗವಾಗಿದೆ ಮತ್ತು ಸಾಂಪ್ರದಾಯಿಕ ಸಂರಕ್ಷಿತ ಪ್ರದೇಶಗಳಿಗಿಂತ ಸಹ-ಪ್ರಯೋಜನಗಳು ಮತ್ತು ಸಹ-ನಿರ್ವಹಣೆಯ ಮೇಲೆ ಹೆಚ್ಚು ಗಮನಹರಿಸುತ್ತದೆ. ಇದು ಕೇವಲ ಹುಲಿಗಳು ಮತ್ತು ಆನೆಗಳ ಬಗ್ಗೆ ಅಲ್ಲ. ಮಣ್ಣಿನ ಸಂರಕ್ಷಣೆಯಂತಹ ಸಮಸ್ಯೆಗಳು ಸಹ ಪ್ರಮುಖವಾಗಿವೆ. ಏಕೆಂದರೆ ಅನೇಕ ಪಾಳುಬಿದ್ದ ಭೂಮಿಗಳಿವೆ. ನಗರ ಜೀವವೈವಿಧ್ಯದ ಅಗತ್ಯದ ಕಡೆಗೂ ಇದು ಕಣ್ಣು ಹರಿಸುತ್ತದೆ.

ಭಾರತವು ವ್ಯಾಪಕವಾಗಿ ತೊಡಗಿಸಿಕೊಂಡಿರುವ ಒಂದು ಗುರಿಯು ಕೃಷಿ ಸಬ್ಸಿಡಿಗಳಿಗೆ ಸಂಬಂಧಿಸಿದೆ. ಭಾರತದಂತಹ ದೇಶಗಳಲ್ಲಿ, ಕೃಷಿ ಸಬ್ಸಿಡಿಗಳ ಸುತ್ತಲಿನ ನಿರ್ಧಾರಗಳು ಪ್ರಮುಖ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಹೊಂದಿವೆ, ಏಕೆಂದರೆ ಲಕ್ಷಾಂತರ ಬಡ ರೈತರು ಸರಕಾರದ ಬೆಂಬಲವನ್ನು ಅವಲಂಬಿಸಿದ್ದಾರೆ. ಆದರೆ, ಜೀವವೈವಿಧ್ಯಕ್ಕೆ ಹಾನಿಕಾರಕವಾದ ಸಬ್ಸಿಡಿಗಳ ವಿಚಾರವಾಗಿ ಜೈವಿಕ ವೈವಿಧ್ಯ ಉತ್ತಮಗೊಳಿಸುವ ಯೋಜನೆಗಳು ಗಮನ ಕೊಡುತ್ತವೆ. ಕೀಟನಾಶಕಗಳು ಮತ್ತು ಹೆಚ್ಚು ಅಪಾಯಕಾರಿ ರಾಸಾಯನಿಕಗಳಿಂದ ಒಟ್ಟಾರೆ ಅಪಾಯವನ್ನು ತಗ್ಗಿಸುವ ನಿಟ್ಟಿನ ಕ್ರಮಗಳು ಇದರಲ್ಲಿ ಸೇರುತ್ತವೆ. ಕೀಟನಾಶಕಗಳು ಮತ್ತು ಇತರ ಹಾನಿಕಾರಕ ರಾಸಾಯನಿಕಗಳಿಂದ ದೂರವಿರಲು ಬಯಸುವ ರೈತರು ಅದಕ್ಕೆ ಪರ್ಯಾಯದ ಕಡೆಗೆ ಗಮನ ಹರಿಸಬಹುದು.

ತಮ್ಮ ಜೀವನೋಪಾಯಕ್ಕಾಗಿ ಕಾಡು ಪರಿಸರ ವ್ಯವಸ್ಥೆಗಳನ್ನು ಅವಲಂಬಿಸಿರುವ ಅಪಾರ ಸಂಖ್ಯೆಯ ಜನರನ್ನು ಒಳಗೊಂಡಂತೆ ಜೀವವೈವಿಧ್ಯತೆಯ ರಕ್ಷಣೆ ವಿಚಾರ ಬಂದಾಗ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಇದೇ ರೀತಿಯ ಕಾಳಜಿಯನ್ನು ಹಂಚಿಕೊಳ್ಳುತ್ತವೆ. ಭಾರತದಲ್ಲಿ, 300 ದಶಲಕ್ಷಕ್ಕೂ ಹೆಚ್ಚು ಜನರು ಅರಣ್ಯವನ್ನು ಅವಲಂಬಿಸಿದ್ದಾರೆ. ಆದ್ದರಿಂದ, ಅಭಿವೃದ್ಧಿ ಹೊಂದಿದ ದೇಶಗಳ ಹಣಕಾಸಿನ ನೆರವಿನ ವಿಚಾರವೂ ಒಳಗೊಂಡಂತೆ, ಅಗತ್ಯವನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಒಂದಾಗಿರಲು ಭಾರತವು ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಾಲ್ದೀವ್ಸ್‌ನಂತಹ ನೆರೆಯ ರಾಷ್ಟ್ರಗಳೊಂದಿಗೆ ಸಮನ್ವಯತೆ ಹೊಂದಿದೆ.

ಅಂತಿಮವಾಗಿ ಇದು ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಯಾವ ರೀತಿಯಲ್ಲಿ ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಲಿವೆ ಎಂಬುದನ್ನೇ ಅವಲಂಬಿಸಿದೆ. ಯಾಕೆಂದರೆ, ಇದು ಶತಕೋಟಿ ಡಾಲರುಗಳ ಲೆಕ್ಕಾಚಾರದ ಯೋಜನೆಯಾಗಿದೆ. 

Similar News