ಬಿಡುಗಡೆಯ ಮುನ್ನಾ ದಿನವೇ ಆನ್‌ಲೈನ್ ನಲ್ಲಿ 'ಪಠಾಣ್' ಸಿನೆಮಾ ಸೋರಿಕೆ

Update: 2023-01-25 07:03 GMT

ಮುಂಬೈ: ಪೈರಸಿಯನ್ನು ತಡೆಯಬೇಕು ಎಂದು ಯಶ್‌ರಾಜ್ ಫಿಲಂಸ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿರುವ ಹೊರತಾಗಿಯೂ 'ಪಠಾಣ್' (Pathaan) ಚಿತ್ರ ಬಿಡುಗಡೆಯ ಮುನ್ನಾ ದಿನವೇ ಆನ್‌ಲೈನ್ ನಲ್ಲಿ ಸಿನೆಮಾ ಸೋರಿಕೆ ಆಗಿದೆ ಎಂದು ವರದಿಯಾಗಿದೆ.

ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ನಾಯಕತ್ವದ 'ಪಠಾಣ್' ಚಿತ್ರ ಬುಧವಾರ ಸುಮಾರು 100 ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ದಿನದ ಪ್ರದರ್ಶನಕ್ಕೇ ಈಗಾಗಲೇ 5 ಲಕ್ಷ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದ್ದು, ದಾಖಲೆಯ ಆದಾಯ ಗಳಿಸುವ ನಿರೀಕ್ಷೆಯನ್ನು 'ಪಠಾಣ್' ಚಿತ್ರ ಈಗಾಗಲೇ ಹುಟ್ಟಿಸಿದೆ. ಹೀಗಿದ್ದೂ ಚಿತ್ರವು ಕೆಲವು ಅಂತರ್ಜಾಲ ತಾಣಗಳಲ್ಲಿ ಲಭ್ಯವಿದೆ ಎಂದು Times Now ವರದಿ ಮಾಡಿದೆ. ಒಂದು ಅಂತರ್ಜಾಲ ತಾಣವು ತನ್ನಲ್ಲಿ ಬಿಡುಗಡೆಯಾಗಿರುವ 'ಪಠಾಣ್' ಚಿತ್ರದ ಆವೃತ್ತಿಯನ್ನು ಕ್ಯಾಮೆರಾದ ಆವೃತ್ತಿ ಎಂದು ಹೇಳಿಕೊಂಡಿದ್ದರೆ, ಮತ್ತೊಂದು ಅಂತರ್ಜಾಲ ತಾಣವು ಡಿವಿಡಿ ಪೂರ್ವ ಆವೃತ್ತಿ ಎಂದು ಹೇಳಿಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ 'ಪಠಾಣ್' ಚಿತ್ರದ ನಿರ್ಮಾಣ ಸಂಸ್ಥೆ ಯಶ್‌ರಾಜ್ ಫಿಲಂಸ್, ಚಿತ್ರವನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸಿ ಎಂದು ಅಭಿಮಾನಿಗಳನ್ನು ಒತ್ತಾಯಿಸಿದ್ದು, ಚಿತ್ರದ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡು ಸೋರಿಕೆ ಮಾಡುವುದರ ವಿರುದ್ಧ ಅವರಿಗೆ ಎಚ್ಚರಿಕೆ ನೀಡಿದೆ.

"ಬೃಹತ್ ಸಾಹಸಮಯ ಚಿತ್ರ ವೈಭವವನ್ನು ವೀಕ್ಷಿಸಲು ಸಿದ್ಧರಾಗಿದ್ದೀರಾ? ದಯವಿಟ್ಟು ಆ ಚಿತ್ರದ ವಿಡಿಯೊ ಚಿತ್ರೀಕರಣ ಮಾಡುವುದು, ಅವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುವುದು ಹಾಗೂ ಆ ಮೂಲಕ ಚಿತ್ರಕ್ಕೆ ಹಾನಿ ಮಾಡುವುದರಿಂದ ದೂರ ಉಳಿಯಿರಿ ಎಂದು ವಿನಮ್ರ ಮನವಿ ಮಾಡಿಕೊಳ್ಳುತ್ತೇವೆ. 'ಪಠಾಣ್' ಚಿತ್ರದ ಅನುಭವವನ್ನು ಚಿತ್ರಮಂದಿರಗಳಲ್ಲೇ ಅನುಭವಿಸಿ" ಎಂದು ಟ್ವೀಟ್ ಮಾಡಿರುವ ಯಶ್‌ರಾಜ್ ಫಿಲಂಸ್, ಪೈರಸಿಯನ್ನು ವರದಿ ಮಾಡಲು ಇಮೇಲ್ ವಿಳಾಸವನ್ನೂ ಅದರಲ್ಲಿ ಲಗತ್ತಿಸಿದೆ.

ಈಗಾಗಲೇ 5 ಲಕ್ಷ ಮುಂಗಡ ಟಿಕೆಟ್‌ಗಳ ಕಾಯ್ದಿರಿಸುವಿಕೆಯಿಂದ ಗಲ್ಲಾ ಪೆಟ್ಟಿಗೆಯನ್ನು ಸೂರೆ ಮಾಡಿರುವ 'ಪಠಾಣ್' ಚಿತ್ರ, 'ಬಾಹುಬಲಿ 2' ನಂತರ ಆ ಸಾಧನೆಯನ್ನು ಮಾಡಿರುವ ಎರಡನೆ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ದಾಖಲೆ ಸೃಷ್ಟಿಸಿದ 'ಪಠಾಣ್' 

Similar News