ಫುಟ್‌ಬಾಲ್ ಪಂದ್ಯದಲ್ಲಿ ಮೊತ್ತಮೊದಲ ವೈಟ್ ಕಾರ್ಡ್ ಬಳಕೆ: ಈ ಕುರಿತ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ...

Update: 2023-01-25 11:35 GMT

ಎಸ್ಟಾಡಿಯೊ ಡ ಲುಝ್ (ಪೋರ್ಚುಗಲ್): ಯೆಲ್ಲೊ ಕಾರ್ಡ್ ಮತ್ತು ರೆಡ್ ಕಾರ್ಡ್ ಬಗ್ಗೆ ತಿಳಿಯದಿರುವ ಫುಟ್‌ಬಾಲ್ (Football) ಪ್ರೇಮಿಯೇ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಆದರೆ, ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಪೋರ್ಚುಗಲ್‌ನಲ್ಲಿ ನಡೆದ ಬೆನ್ಫಿಕಾ (Benfica) ಹಾಗೂ ಸ್ಪೋರ್ಟಿಂಗ್ ಲಿಸ್ಬಾನ್ (Sporting Lisbon) ತಂಡಗಳ ನಡುವಿನ ಮಹಿಳಾ ಫುಟ್‌ಬಾಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗೀಸ್ ರೆಫ್ರಿ ಕ್ಯಾಥರಿನಾ ಕ್ಯಾಂಪೊಸ್ ವೈಟ್ ಕಾರ್ಡ್ (White Card) ತೋರಿಸುವ ಮೂಲಕ ಅದರ ಬಳಕೆಗೆ ನಾಂದಿ ಹಾಡಿದ್ದಾರೆ.

ಬೆನ್ಫಿಕಾ ಮಹಿಳಾ ಫುಟ್‌ಬಾಲ್ ತಂಡವು ಸ್ಪೋರ್ಟಿಂಗ್ ಲಿಸ್ಬಾನ್ ತಂಡದ ವಿರುದ್ಧದ ಪಂದ್ಯದಲ್ಲಿ ಮಧ್ಯಂತರ ಸಮಯಕ್ಕೆ ಕೆಲ ಹೊತ್ತು ಬಾಕಿಯಿರುವಾಗ 3-0 ಅಂತರದ ಮುನ್ನಡೆ ಸಾಧಿಸಿತ್ತು. ಈ ಹಂತದಲ್ಲಿ ರೆಫ್ರಿ ಕ್ಯಾಥರಿನಾ ಕ್ಯಾಂಪೊಸ್ ಅವರು ಬೆನ್ಫಿಕಾ ತಂಡಕ್ಕೆ ವೈಟ್ ಕಾರ್ಡ್ ತೋರಿಸಲು ನಿರ್ಧರಿಸಿದರು. ಈ ನಿರ್ಧಾರವನ್ನು ಎಸ್ಟಾಡಿಯೊ ಡ ಲಝ್ ಕ್ರೀಡಾಂಗಣದಲ್ಲಿ ನೆರೆದಿದ್ದ ಫುಟ್‌ಬಾಲ್ ಅಭಿಮಾನಿಗಳು ಹರ್ಷೋದ್ಗಾರದ ಮೂಲಕ ಸ್ವಾಗತಿಸಿದರು. 1970ರ ಫಿಫಾ ವಿಶ್ವಕಪ್ ಪಂದ್ಯಾವಳಿ ಪ್ರಾರಂಭವಾದಾಗಿನಿಂದ ಯೆಲ್ಲೊ ಕಾರ್ಡ್ ಮತ್ತು ರೆಡ್ ಕಾರ್ಡ್ ಫುಟ್‌ಬಾಲ್ ಪಂದ್ಯಗಳ ಅವಿಭಾಜ್ಯ ಅಂಗವಾಗಿ ಹೋಗಿವೆ. ಹೀಗಾಗಿ, ಈ ಪಂದ್ಯದಲ್ಲಿ ವೈಟ್ ಕಾರ್ಡ್ ತೋರಿಸಿದ್ದರಿಂದ ಹಲವಾರು ಫುಟ್‌ಬಾಲ್ ಅಭಿಮಾನಿಗಳು ಗೊಂದಲಗೊಂಡರು.

ಪೋರ್ಚುಗಲ್ ರಾಷ್ಟ್ರೀಯ ಕ್ರೀಡಾ ಮೌಲ್ಯಗಳ ಯೋಜನೆಯ ಭಾಗವಾಗಿ ಜಾರಿಯಾಗಿರುವ ಈ ಉಪಕ್ರಮದ ಪ್ರಕಾರ, ಅಂಗಳದಲ್ಲಿ ಫುಟ್‌ಬಾಲ್ ಆಟಗಾರರು ಪ್ರದರ್ಶಿಸುವ ನ್ಯಾಯೋಚಿತ ಆಟವನ್ನು ಗುರುತಿಸಲು ವೈಟ್ ಕಾರ್ಡ್ ಬಳಸಲಾಗುತ್ತದೆ. ಈ ಪ್ರಾಯೋಗಿಕ ಯೋಜನೆಯನ್ನು ಪೋರ್ಚುಗೀಸ್ ಫುಟ್‌ಬಾಲ್ ಫೆಡರೇಶನ್ ಮಾರ್ಗದರ್ಶನದಲ್ಲಿ ಪೋರ್ಚುಗೀಸ್ ಲೀಗ್ ಪಂದ್ಯಗಳಲ್ಲಿ ಪರಿಚಯಿಸಲಾಗಿದೆ.

ಪೋರ್ಚುಗೀಸ್ ಫುಟ್‌ಬಾಲ್‌ ಪ್ರಾಧಿಕಾರಗಳು ವೈಟ್ ಕಾರ್ಡ್ ಜೊತೆಗೆ ಪಂದ್ಯದ ವೇಳೆ ಘರ್ಷಣೆ ಏರ್ಪಟ್ಟಾಗ ಬದಲಿ ಆಟಗಾರರಿಗೆ ಅವಕಾಶ ನೀಡುವುದು ಹಾಗೂ ಸಮಯವನ್ನು ವ್ಯರ್ಥ ಮಾಡಲು ಬಯಸುವ ತಂಡಗಳ ಪಾಲಿಗೆ ಅಂಕುಶದಂತೆ ವರ್ತಿಸುವ ಚೆಂಡನ್ನು ತಮ್ಮೊಂದಿಗೆ ಹಿಡಿದಿಟ್ಟುಕೊಳ್ಳುವ ಸಮಯವನ್ನು ನಿರ್ದಿಷ್ಟ ಅವಧಿಗೆ ನಿಗದಿಗೊಳಿಸುವ ಯೋಜನೆಯನ್ನೂ ಅಳವಡಿಸಿಕೊಂಡಿವೆ.

ಬೆನ್ಫಿಕಾ ಮತ್ತು ಸ್ಪೋರ್ಟಿಂಗ್ ಲಿಸ್ಬಾನ್ ನಡುವೆ ಪಂದ್ಯ ನಡೆಯುವಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಯೊಬ್ಬ ಅಸ್ವಸ್ಥತೆ ಹಾಗೂ ಸುಸ್ತಿನಿಂದ ಕೆಳಗೆ ಬಿದ್ದ. ಕೂಡಲೇ ಎರಡೂ ತಂಡದ ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಭಾಯಿಸಿದವಲ್ಲದೆ, ಕೆಲವೇ ನಿಮಿಷಗಳಲ್ಲಿ ಆತನಿಗೆ ಶುಶ್ರೂಷೆ ಒದಗಿಸಿದವು. ಈ ನಡವಳಿಕೆಯನ್ನು ಪ್ರಶಂಸಿಸುವ ಭಾಗವಾಗಿ ಪಂದ್ಯದಲ್ಲಿ ವೈಟ್ ಕಾರ್ಡ್ ಪ್ರದರ್ಶಿಸಲಾಯಿತು.

ದಾಖಲೆ ಸಂಖ್ಯೆಯಲ್ಲಿ ನೆರೆದಿದ್ದ ಫುಟ್‌ಬಾಲ್ ಅಭಿಮಾನಿಗಳ ಎದುರು ಬೆನ್ಫಿಕಾ ಮಹಿಳಾ ಫುಟ್‌ಬಾಲ್ ತಂಡವು 5-0  ಅಂತರದಲ್ಲಿ ಸ್ಪೋರ್ಟಿಂಗ್ ಲಿಸ್ಬಾನ್ ತಂಡದ ವಿರುದ್ಧ ಜಯಭೇರಿ ಬಾರಿಸಿತು.

ಇದನ್ನೂ ಓದಿ: ಬಿಡುಗಡೆಯ ಮುನ್ನಾ ದಿನವೇ ಆನ್‌ಲೈನ್ ನಲ್ಲಿ 'ಪಠಾಣ್' ಸಿನೆಮಾ ಸೋರಿಕೆ

Similar News