ರಾಣಾ ಅಯ್ಯೂಬ್ ವಿರುದ್ಧದ ವಿಚಾರಣೆ ಮುಂದೂಡಿ: ಘಾಝಿಯಾಬಾದ್ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಸೂಚನೆ

Update: 2023-01-25 15:19 GMT

ಹೊಸದಿಲ್ಲಿ, ಜ. 25: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತೆ ರಾಣಾ ಅಯೂಬ್(Rana Ayyub) ವಿರುದ್ಧದ ವಿಚಾರಣೆಯನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್(Supreme Court) ಬುಧವಾರ ಘಾಝಿಯಾಬಾದ್ ನ ನ್ಯಾಯಾಲಯವೊಂದಕ್ಕೆ ನಿರ್ದೇಶನ ನೀಡಿದೆ.

ವಿಚಾರಣೆಗಾಗಿ ಜನವರಿ 27ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಘಾಝಿಯಾಬಾದ್ ನ್ಯಾಯಾಲಯವು ರಾಣಾ ಅಯೂಬ್ ಗೆ ಈ ಮೊದಲು ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅಯೂಬ್ ಸುಪ್ರೀಂ ಕೋರ್ಟ್ ಗೆ  ಹೋಗಿದ್ದರು.

ನ್ಯಾಯಾಲಯದ ನಿರ್ದೇಶನವನ್ನು ಪ್ರಕರಣದ ವೌಲ್ಯಮಾಪನ ಎಂಬುದಾಗಿ ಪರಿಗಣಿಸಬಾರದು ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ(Krishna Murari) ಮತ್ತು ವಿ. ರಾಮಸುಬ್ರಮಣಿಯನ್(V. Ramasubramanian) ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಹೇಳಿತು. ಬುಧವಾರ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ಈ ಆದೇಶ ನೀಡಲಾಗಿದೆ ಎಂದು ಅದು ತಿಳಿಸಿತು.

ಪತ್ರಕರ್ತೆಯು ಸಾಮಾಜಿಕ ಸೇವೆಯ ಹೆಸರಿನಲ್ಲಿ, ಆನ್ಲೈನ್ ಸಾರ್ವಜನಿಕ ದೇಣಿಗೆ ಸಂಗ್ರಹ (ಕ್ರೌಡ್ಫಂಡಿಂಗ್) ವೇದಿಕೆ ‘ಕೆಟ್ಟೊ’ ಮೂಲಕ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹಿಸಿದ್ದಾರೆ ಎಂಬ ಆರೋಪಿಸಿ 2021 ಸೆಪ್ಟಂಬರ್ ನಲ್ಲಿ ಅವರ ವಿರುದ್ಧ ಮೊಕದ್ದಮೆಯೊಂದು ದಾಖಲಾಗಿತ್ತು. ಅದರ ಆಧಾರದಲ್ಲಿ ಕಳೆದ ವರ್ಷದ ಅಕ್ಟೋಬರ್ 13ರಂದು ಅನುಷ್ಠಾನ ನಿರ್ದೇಶನಾಲಯವು ಅವರ ವಿರುದ್ಧ ಪ್ರಾಸಿಕ್ಯೂಶನ್ ದೂರು ದಾಖಲಿಸಿತ್ತು.

ಅದೂ ಅಲ್ಲದೆ, 2010ರ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯಡಿ ನೋಂದಾಯಿಸದೆ ಅವರು ವಿದೇಶಗಳಿಂದಲೂ ಹಣ ಪಡೆದಿದ್ದಾರೆ ಎಂಬುದಾಗಿಯೂ ಅನುಷ್ಠಾನ ನಿರ್ದೇಶನಾಲಯ ಆರೋಪಿಸಿದೆ.

ಅಯೂಬ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ವೃಂದಾ ಗ್ರೋವರ್, ಅನುಷ್ಠಾನ ನಿರ್ದೇಶನಾಲಯವು ಪ್ರಾಸಿಕ್ಯೂಶನ್ ದೂರನ್ನು ಮುಂಬೈಯಲ್ಲಿ ದಾಖಲಿಸಬೇಕಾಗಿತ್ತು; ಮುಂಬೈಯಲ್ಲಿ ಅಪರಾಧ ನಡೆದಿದೆ ಎಂದು ಅದು ಹೇಳಿದೆ ಎಂದರು.

ಘಾಝಿಯಾಬಾದ್ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ರಾಣಾ ಅಯೂಬ್ ರನ್ನು ಒತ್ತಾಯಿಸಬಾರದು, ಅಲ್ಲಿ ಅವರ ಜೀವ ಮತ್ತು ಸ್ವಾತಂತ್ರಕ್ಕೆ ಬೆದರಿಕೆಯಿದೆ ಎಂದೂ ಅವರು ಹೇಳಿದರು.

Similar News