ರಾಜ್ಯದಲ್ಲಿ 60 ಕೋಟಿ ಮೀನುಮರಿಗಳ ಉತ್ಪಾದನೆಗೆ ಯೋಜನೆ: ಎಸ್.ಅಂಗಾರ

Update: 2023-01-25 18:08 GMT

ಮಲ್ಪೆ: ರಾಜ್ಯದಲ್ಲಿ 60ಕೋಟಿ ಮೀನು ಮರಿಗಳ ಅವಶ್ಯಕತೆಗಳಿದ್ದು, ನಮ್ಮಲ್ಲಿ ಪ್ರಸ್ತುತ ಕೇವಲ 40ಕೋಟಿ ಮೀನು ಮರಿಗಳನ್ನು ಉತ್ಪಾದಿಸಲಾಗುತ್ತಿದೆ. ಉಳಿದ 20 ಕೋಟಿ ಹೊರರಾಜ್ಯಗಳಿಂದ ತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯಕ್ಕೆ ಬೇಕಾದ ವಿವಿಧ ಜಾತಿಯ ಮೀನಿನ ಮರಿಗಳನ್ನು ಬೇಡಿಕೆಗೆ ಅನುಗುಣವಾಗಿ ಆಯಾ ಭಾಗದಲ್ಲಿ ಉತ್ಪಾದಿಸುವ ಕಾರ್ಯ ಮಾಡ ಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೀನುಗಾರಿಕೆ ಇಲಾಖೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಮಲ್ಪೆ ಮೀನುಗಾರಿಕೆ ಬಂದರು ಆವರಣದಲ್ಲಿ ನಡೆದ ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್ ಹಾಗೂ ನೆವಿಗೇಶನ್ ಚಾನೆಲ್ ನಿರ್ವಹಣಾ ಹೂಳೆತ್ತುವಿಕೆ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಮಲ್ಪೆ ಉದ್ಯಾವರ ನದಿಯಲ್ಲಿ ಹೊಸದಾಗಿ ನಿರ್ಮಿ ಲಾದ ಜೆಟ್ಟಿಗಳು ಮತ್ತು ಮೀನುಗಾರಿಕೆ ಬಂದರಿನ ಯಾಂತ್ರಿಕ ಸ್ಲಿಪ್ವೇ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಬಾಗಲಕೋಟೆ ಆಲಮಟ್ಟಿಯಲ್ಲಿ ನೀರಾವರಿ ನಿಗಮದಿಂದ ಮೀನು ಮರಿಗಳ ಉತ್ಪಾದನೆಗಾಗಿ 25 ಎಕರೆ ಜಮೀನು ಕೊಡುವ ಕೆಲಸ ಮಾಡಲಾಗಿದೆ. ಅದೇ ರೀತಿ ಆಲಮಟ್ಟಿಯಲ್ಲಿ ಒಳನಾಡು ಜಲಸಾರಿಗೆಯಿಂದ ಪ್ರವಾಸೋದ್ಯಮ ದೋಣಿಯನ್ನು ಆರಂಭಿಸುವ ಉದ್ದೇಶ ಕೂಡ ಇದೆ. ಇದಕ್ಕೆ ಈಗಾಗಲೇ ಟೆಂಡರ್ ಕರೆಯುವ ಕಾರ್ಯ ನಡೆದಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಪಿಪಿಪಿ ಮಾದರಿಯಲ್ಲಿ 15ಕೋಟಿ ರೂ. ವೆಚ್ಚದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಅಕ್ವೇರಿಯಂ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಮಾ.10ರೊಳಗೆ ಪೂರ್ಣಗೊಳ್ಳಲಿದೆ. ಪ್ರಧಾನ ಮಂತ್ರಿ ಮತ್ಸಸಂಪದ ಯೋಜನೆಯಡಿಯಲ್ಲಿ ಮೀನಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕಾರ್ಯಪ್ರವೃತ್ತರಾಗುತ್ತಿದ್ದೇವೆ ಎಂದರು.

ಬಯೋ ಡಿಸೇಲ್ ಉತ್ಪಾದನೆ

ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ಮಾಡ ಲಾಗುತ್ತಿದೆ. ಒಳನಾಡು ಮೀನುಗಾರಿಕೆಯಲ್ಲಿ ಉತ್ಪಾದಿಸಿದ ಮೀನುಗಳಿಗೆ ಮಾರುಕಟ್ಟೆ ಒದಗಿಸುವ ಕುರಿತು ಜನರಲ್ಲಿ ಗೊಂದಲ ಇದೆ. ಈ ಹಿನ್ನೆಲೆಯಲ್ಲಿ ಒಳನಾಡು ಮೀನುಗಾರಿಕೆಯಲ್ಲಿ ಉತ್ಪಾದಿಸುವ ಎಲ್ಲ ರೀತಿಯ ಮೀನುಗಳನ್ನು ಇಲಾಖೆ ಖರೀದಿಸುವ ವ್ಯವಸ್ಥೆಯನ್ನು ತರಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಒಳನಾಡು ಮೀನುಗಾರಿಕೆಯ ಮೀನಿನಿಂದ ವಿವಿಧ ರೀತಿಯ ಪದಾರ್ಥ ಗಳನ್ನು ತಯಾರಿಸುವ ಮತ್ತು ಮೀನಿನ ತ್ಯಾಜ್ಯದಿಂದ ಬಯೋ ಡಿಸೇಲ್ ಉತ್ಪಾದಿಸುವ ಯೋಜನೆ ಕೂಡ ನಮ್ಮ ಮುಂದೆ ಇದೆ. ಈ ಮೂಲಕ ಒಳನಾಡು ಮತ್ತು ಸಮುದ್ರ ಮೀನುಗಾರಿಕೆಯಲ್ಲಿ ಸಾಕಷ್ಟು ಸುಧಾರಣೆ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದು ಅವರು ಹೇಳಿದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಕರಾವಳಿ ಕರ್ನಾಟಕದ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮೀನುಗಾರಿಕಾ ಇಲಾಖಾ ನಿರ್ದೇಶಕ ರಾಮಾಚಾರ್ಯ, ಉಡುಪಿ ಬಂದರು ಮತ್ತು ಮೀನುಗಾರಿಕಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೀನುಗಾರರಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೀನು ಗಾರಿಕೆ ಅಪರ ನಿರ್ದೇಶಕ ಕೆ.ಗಣೇಶ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಾಡದೋಣಿಗಳಿಗೆ ಸೀಮೆಎಣ್ಣೆ ಸಮಸೆ ಇದೆ. ಕೇಂದ್ರ ಸರಕಾರದಿಂದ ಪ್ರತಿತಿಂಗಳು ನಮಗೆ ಬೇಕಾದಷ್ಟು ಸೀಮೆಎಣ್ಣೆ ಬಿಡುಗಡೆಯಾಗುತ್ತಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಕೆಲವು ತಿಂಗಳಲ್ಲಿ ಸೀಮೆಎಣ್ಣೆ ಬಿಡುಗಡೆಯಾಗದಿದ್ದಾಗ ಮೀನುಗಾರಿಕೆ ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಚನೆ ಮಾಡಲಾಗುವುದು. ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಖ್ಯಮಂತ್ರಿಯ ಗಮನಕ್ಕೆ ತರಲಾಗುವುದು.
-ಎಸ್.ಅಂಗಾರ, ಸಚಿವರು

Similar News