ಲಕ್ನೋ ಕಟ್ಟಡ ದುರಂತ: ಆರು ವರ್ಷದ ಬಾಲಕನ ಪ್ರಾಣ ಉಳಿಸಲು ನೆರವಾದ ʼಕಾರ್ಟೂನ್‌ ಶೋʼ!

Update: 2023-01-26 15:02 GMT

ಲಕ್ನೋ: ಇಬ್ಬರು ಮಹಿಳೆಯರ ಸಾವಿಗೆಕಾರಣವಾದ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದ ಬಹುಮಹಡಿ ಕಟ್ಟಡ ದುರಂತದ ಪ್ರದೇಶದಲ್ಲಿ ಎರಡೂ ದಿನಗಳ ಬಳಿಕವೂ ರಕ್ಷಣಾ ಕಾರ್ಯ ಮುಂದುವರೆದಿದೆ. ಇದುವರೆಗೂ 14 ಮಂದಿಯನ್ನು ರಕ್ಷಿಸಲಾಗಿದ್ದು, ಅದರಲ್ಲಿ ಸಮಾಜವಾದಿ ಪಕ್ಷದ ವಕ್ತಾರರೊಬ್ಬರ ಆರು ವರ್ಷದ ಮಗುವೂ ಸೇರಿದೆ. ಮಗುವನ್ನು ಮುಸ್ತಫಾ ಎಂದು ಗುರುತಿಸಲಾಗಿದೆ. ಬಾಲಕ ಎಸ್‌ಪಿಎಂ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಬಾಲಕನ ಪ್ರಾಣ ಉಳಿಸಿದ ಡೊರೆಮನ್.!

ತಮ್ಮ ಅಪಾರ್ಟ್‌ಮೆಂಟ್ ಅಲುಗಾಡುತ್ತಿದ್ದಂತೆ ಮಂಚದ ಕೆಳಗೆ ಆಶ್ರಯ ಪಡೆದಿರುವುದಾಗಿ ಮುಸ್ತಫಾ ತಿಳಿಸಿದ್ದಾನೆ. ಹಾಗೂ ಈ ಅರಿವನ್ನು ಜನಪ್ರಿಯ ಕಾರ್ಟೂನ್ ಶೋನಿಂದ ಕಲಿತಿರುವುದಾಗಿ ತಿಳಿಸಿದ್ದಾನೆ. 

ಭೂಕಂಪದ ಸಮಯದಲ್ಲಿ ಕಟ್ಟಡವು ಅಲುಗಾಡುತ್ತಿದೆ ಎಂದು ಭಾವಿಸಿದ ತಕ್ಷಣ ಅವರು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳನ್ನು ನೆನಪಿಸಿಕೊಂಡೆ ಎಂದು ಮುಸ್ತಫಾ ಹೇಳದ್ದಾನೆ. ಇದು ಭೂಕಂಪ ಎಂದು ಭಾವಿಸಿದ್ದೆ ಎಂದು ಬಾಲಕ ಹೇಳಿದ್ದಾನೆ.

"ನಾನು ಭಯಭೀತನಾಗಿದ್ದೆ. ಆದರೆ ನೊಬಿತಾ (ಕಾರ್ಟೂನ್‌ ಸರಣಿಯ ಕೇಂದ್ರ ಪಾತ್ರ)  ವನ್ನು ನೆನಪಿಸಿಕೊಂಡೆ, ಇದರಲ್ಲಿ ನೊಬಿತಾ ಮಂಚದ ಕೆಳಗೆ ಆಶ್ರಯ ಪಡೆದು ತನ್ನನ್ನು ತಾನು ರಕ್ಷಿಸಿಕೊಂಡಿದ್ದ. ಅದರಂತೆಯೇ ನಾನು ಮಂಚದ ಕೆಳಗೆ ಆಶ್ರಯ ಪಡೆದೆ" ಎಂದು ಮುಸ್ತಫಾ timesofindia ಗೆ ತಿಳಿಸಿದ್ದಾನೆ.

ಕೆಲವೇ ಸಮಯದಲ್ಲಿ, ಇಡೀ ಕಟ್ಟಡವು ಕುಸಿದು, ಎಲ್ಲವೂ ಕತ್ತಲೆಯಾಯಿತು. ತನಗೆ ಉಸಿರುಗಟ್ಟಿದಂತೆ ಆಯಿತು. ನಂತರ ಏನಾಯಿತು ಎಂದು ನೆನಪಿಲ್ಲ ಎಂದು ಹೇಳಿದ್ದಾನೆ

ಸಮಾಜವಾದಿ ಪಕ್ಷದ ವಕ್ತಾರರಾಗಿರುವ ಮುಸ್ತಫಾ ಅವರ ತಂದೆ ಅಬ್ಬಾಸ್ ಹೈದರ್ ಘಟನೆಯ ವೇಳೆ ಮನೆಯಲ್ಲಿ ಇರಲಿಲ್ಲ. ಮುಸ್ತಫಾ ಅವರ ಅಜ್ಜ, ಹಿರಿಯ ಕಾಂಗ್ರೆಸ್ ನಾಯಕ ಅಮೀರ್ ಹೈದರ್ ಅವರು ಘಟನಾವೇಳೆ ಕಟ್ಟಡದಲ್ಲೇ ಇದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರೂ ಪ್ರಸ್ತುತ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯಲ್ಲಿ   ಮುಸ್ತಫಾ ಅವರ 30 ವರ್ಷದ ತಾಯಿ ಉಜ್ಮಾ ಹೈದರ್ ಮತ್ತು ಅವರ ಅಜ್ಜಿ ಬೇಗಂ ಹೈದರ್ ಮೃತಪಟ್ಟಿದ್ದಾರೆ.

Similar News