ಅದಾನಿ ಸಮೂಹದ ಬೆದರಿಕೆಗೆ ಬಗ್ಗಲ್ಲ, ಅಮೆರಿಕಾದಲ್ಲೂ ನಮ್ಮ ವಿರುದ್ಧ ಮೊಕದ್ದಮೆ ಹೂಡಲಿ: Hindenburg ಸಂಸ್ಥೆ ಸವಾಲು

Update: 2023-01-26 17:26 GMT

ವಾಶಿಂಗ್ಟನ್: ಹಿಂಡೆನ್‌ಬರ್ಗ್ ರಿಸರ್ಚ್ ವರದಿಯ ವಿರುದ್ಧ ಅಮೆರಿಕ ಮತ್ತು ಭಾರತೀಯ ಕಾನೂನುಗಳ ಅಡಿಯಲ್ಲಿ "ಪರಿಹಾರ ಮತ್ತು ದಂಡನಾತ್ಮಕ ಕ್ರಮ" ದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅದಾನಿ ಸಮೂಹ ಹೇಳಿದ ಬೆನ್ನಲ್ಲೇ  ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ತನ್ನ ವರದಿಯನ್ನು ಸಮರ್ಥಿಸಿದ್ದು, ಯಾವುದೇ ರೀತಿಯ ಕಾನೂನು ಕ್ರಮವನ್ನು ಎದುರಿಸಲು ಸಂಸ್ಥೆ ಸಿದ್ದವಿದೆ ಎಂದಿದೆ.

"ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ (ಅದಾನಿ) ಕಂಪನಿ ಒಡ್ಡಿದ ಬೆದರಿಕೆಗಳಿಗೆ ಸಂಬಂಧಿಸಿದಂತೆ, ಸ್ಪಷ್ಟವಾಗಿ ಹೇಳುವುದಾದರೆ, ನಾವು ಅದನ್ನು ಸ್ವಾಗತಿಸುತ್ತೇವೆ. ನಮ್ಮ ವರದಿಗೆ ನಾವು ಬದ್ದರಾಗಿದ್ದೇವೆ. ನಮ್ಮ ವಿರುದ್ಧ ಯಾವುದೇ ಕಾನೂನು ಕ್ರಮವು ಸಾಧ್ಯವಲ್ಲ ಎಂದು ನಂಬುತ್ತೇವೆ" ಎಂದು ಹೂಡಿಕೆ ಸಂಶೋಧನಾ ಸಂಸ್ಥೆಯಾದ  ಹಿಂಡೆನ್‌ಬರ್ಗ್ ರಿಸರ್ಚ್ ತನ್ನ  ಹೇಳಿಕೆಯಲ್ಲಿ ತಿಳಿಸಿದೆ. 
 
“ನಾವು ನಮ್ಮ ವರದಿಯನ್ನು ಬಿಡುಗಡೆ ಮಾಡಿದ 36 ಗಂಟೆಗಳಲ್ಲಿ, ಅದಾನಿ ನಾವು ಎತ್ತಿದ ಒಂದೇ ಒಂದು ಪ್ರಮುಖ ವಿಷಯವನ್ನು ಪ್ರಸ್ತಾಪಿಸಿಲ್ಲ. ನಮ್ಮ ವರದಿಯ ಕೊನೆಯಲ್ಲಿ, ಕಂಪನಿಯು ಪಾರದರ್ಶಕವಾಗಿರಲು ಅವಕಾಶವನ್ನು ನೀಡುತ್ತದೆ ಎಂದು ನಾವು ನಂಬುವ 88 ನೇರ ಪ್ರಶ್ನೆಗಳನ್ನು ಕೇಳಿದ್ದೇವೆ. ಇಲ್ಲಿಯವರೆಗೆ, ಅದಾನಿ ಈ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಬದಲಾಗಿ, ನಿರೀಕ್ಷೆಯಂತೆ, ಅದಾನಿ ಬೊಬ್ಬಿಡಲು ಮತ್ತು ಬೆದರಿಕೆಗಳನ್ನು ಆಶ್ರಯಿಸಿದ್ದಾರೆ. ಇಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಅದಾನಿ ನಮ್ಮ ವರದಿಯನ್ನು "ಸಂಶೋಧನೆ ಮಾಡದ" (ವರದಿ) ಎಂದು ಉಲ್ಲೇಖಿಸಿದ್ದಾರೆ ಮತ್ತು ಅದು ನಮ್ಮ ವಿರುದ್ಧ ಪರಿಹಾರ ಮತ್ತು ದಂಡನಾತ್ಮಕ ಕ್ರಮಕ್ಕಾಗಿ ಯುಎಸ್ ಮತ್ತು ಭಾರತೀಯ ಕಾನೂನುಗಳ ಅಡಿಯಲ್ಲಿ ಸಂಬಂಧಿತ ನಿಬಂಧನೆಗಳನ್ನು ಮೌಲ್ಯಮಾಪನ ಮಾಡುತ್ತಿದೆ ಎಂದು ಹೇಳಿದೆ.

ಕಂಪನಿಯ ಕಾನೂನು ಕ್ರಮದ ಬೆದರಿಕೆಗಳಿಗೆ ಸಂಬಂಧಿಸಿದಂತೆ, ಸ್ಪಷ್ಟವಾಗಿ ಹೇಳಬೇಕೆಂದರೆ, ನಾವು ಅದನ್ನು ಸ್ವಾಗತಿಸುತ್ತೇವೆ. ನಾವು ಸಂಪೂರ್ಣವಾಗಿ ನಮ್ಮ ವರದಿಗೆ ಬದ್ಧರಾಗಿರುತ್ತೇವೆ ಮತ್ತು ನಮ್ಮ ವಿರುದ್ಧ ಯಾವುದೇ ಕಾನೂನು ಕ್ರಮವು ಅರ್ಹವಲ್ಲ ಎಂದು ನಂಬುತ್ತೇವೆ. ಅದಾನಿ ಈ ವಿಚಾರದಲ್ಲಿ ಗಂಭೀರವಾಗಿದ್ದರೆ, ನಾವು ಕಾರ್ಯನಿರ್ವಹಿಸುವ ಅಮೆರಿಕದಲ್ಲಿಯೂ ಮೊಕದ್ದಮೆ ಹೂಡಬೇಕು.” ಎಂದು ತನ್ನ ಹೇಳಿಕೆಯಲ್ಲಿ ಸಂಸ್ಥೆಯು ಸವಾಲು ಹಾಕಿದೆ. 

ಅದಾನಿ ಗ್ರೂಪ್‌ ವಿರುದ್ಧ ಹಲವು ಆರೋಪಗಳನ್ನು ಹೊಂದಿರುವ ಹಿಂಡೆನ್‌ಬರ್ಗ್‌ ವರದಿ ಬಿಡುಗಡೆಯಾದ ಬೆನ್ನಲ್ಲೇ ಕಂಪೆನಿಯ ಷೇರುಗಳ ಮೇಲೆ ನೇರ ಪರಿಣಾಮ ಬೀರಿದ್ದು, ಅದಾನಿ ಗ್ರೂಪ್‌ ಷೇರು ಬೆಲೆಗಳು ಭಾರೀ ಕುಸಿತ ಕಂಡಿವೆ ಎಂದು ವರದಿಯಾಗಿತ್ತು.

ಅದಾನಿ ಗ್ರೂಪ್‌ನ ಏಳು ಕಂಪೆನಿಗಳ ಸ್ಟಾಕ್‌ಗಳು  ಒಂದೇ ದಿನ ರೂ. 46,086 ಕೋಟಿ ಕಳೆದುಕೊಂಡಿದೆ. ಅದಾನಿ ಟೋಟಲ್‌ ಗ್ಯಾಸ್‌ ರೂ. 12,366 ಕೋಟಿ ಕಳೆದುಕೊಂಡಿದ್ದರೆ ಅದಾನಿ ಪೋರ್ಟ್ಸ್‌ ರೂ 8,342 ಕೋಟಿ ಹಾಗೂ ಅದಾನಿ ಟ್ರಾನ್ಸ್‌ಮಿಷನ್‌ ರೂ 8,039 ಕೋಟಿ ಕಳೆದುಕೊಂಡಿದೆ.

ಈ ಬೆಳವಣಿಗೆಗೆ ಕಾರಣವಾದ ಹಿಂಡೆನ್‌ಬರ್ಗ್‌ ಸಂಶೋಧನಾ (Hindenburg Research) ವರದಿಯನ್ನು ಎರಡು ವರ್ಷಗಳ ಕೂಲಂಕಷ ಅಧ್ಯಯನ ಮತ್ತು ತನಿಖೆಯ ನಂತರ ಈ ಫೊರೆನ್ಸಿಕ್‌ ಫಿನಾನ್ಶಿಯಲ್ ರಿಸರ್ಚ್‌ ಸಂಸ್ಥೆ ಸಿದ್ಧಪಡಿಸಿದೆ. ಈ ಕುರಿತು ಹಿಂಡೆನ್‌ಬರ್ಗ್‌ ರಿಸರ್ಚ್‌ ತನ್ನ ಅಧಿಕೃತ ಹ್ಯಾಂಡಲ್‌ ಮೂಲಕ ಟ್ವೀಟ್‌ ಮಾಡಿದೆ.

ಇದನ್ನು ಓದಿ: ಶೇರು ಬೆಲೆಗಳಲ್ಲಿ ಹಸ್ತಕ್ಷೇಪ ಆರೋಪ: ಹಿಂಡೆನ್ ಬರ್ಗ್ ವಿರುದ್ಧ ಕಾನೂನು ಕ್ರಮಕ್ಕೆ ಅದಾನಿ ಗ್ರೂಪ್ ಚಿಂತನೆ

Similar News