ಕೆನಡಾದ ಪ್ರಥಮ ಇಸ್ಲಾಮೋಫೋಬಿಯಾ ವಿರೋಧಿ ಸಲಹೆಗಾರ್ತಿಯಾಗಿ ಅಮೀರಾ ನೇಮಕ

Update: 2023-01-27 09:30 GMT

ಮೋಂಟ್ರಿಯಲ್:‌ ಇಸ್ಲಾಮೋಫೋಬಿಯಾದ ವಿರುದ್ಧ ಹೋರಾಡುವ ಹಾಗೂ ಅದನ್ನು ನಿಭಾಯಿಸುವ ಉದ್ದೇಶದಿಂದ ಕೆನಡಾ (Canada) ಸರ್ಕಾರ ಗುರುವಾರ ತನ್ನ ಮೊತ್ತಮೊದಲ ಇಸ್ಲಾಮೋಫೋಬಿಯಾ ವಿರೋಧಿ ಸಲಹೆಗಾರರೊಬ್ಬರನ್ನು ನೇಮಕಗೊಳಿಸಿದೆ. ದೇಶದಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದ ಮಂದಿಯ ಮೇಲೆ ನಡೆದ ಹಲವು ದಾಳಿಗಳ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ವರದಿ ಮಾಡಿದೆ.

ಈ ಪ್ರಮುಖ ಹುದ್ದೆಗೆ ಸರ್ಕಾರವು ಪತ್ರಕರ್ತೆ ಮತ್ತು ಹೋರಾಟಗಾರ್ತಿ ಅಮೀರಾ ಎಲ್ಘವಾಬಿ (Amira Elghawaby) ಅವರನ್ನು ನೇಮಕಗೊಳಿಸಿದೆ ಹಾಗೂ ಇಸ್ಲಾಮೋಫೋಬಿಯಾ ವಿರುದ್ಧ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಬೆಂಬಲಿಸಲು, ಸಹಾಯ ಮಾಡಲು ಹಾಗೂ ಧಾರ್ಮಿಕ ಅಸಹಿಷ್ಣುತೆ ಹಾಗೂ ಜನಾಂಗೀಯ ತಾರತಮ್ಯದ ವಿರುದ್ಧದ ಸರಕಾರದ ಹೋರಾಟಕ್ಕೆ ಬೆಂಬಲವಾಗಿರಲು ಈ ನೇಮಕಾತಿ ಮಾಡಲಾಗಿದೆ ಎಂದು ಪ್ರಧಾನಿ ಕಾರ್ಯಾಲಯದಿಂದ ಬಿಡುಗಡೆಗೊಳಿಸಲಾದ ಹೇಳಿಕೆ ತಿಳಿಸಿದೆ.

ಸಕ್ರಿಯ ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಎಲ್ಘವಾಬಿ ಕೆನಡಿಯನ್‌ ರೇಸ್‌ ರಿಲೇಶನ್ಸ್‌ ಫೌಂಡೇಶನ್‌ ಇದರ ಸಂವಹನ ಮುಖ್ಯಸ್ಥೆಯಾಗಿದ್ದಾರೆ ಹಾಗೂ ಟೊರೊಂಟೋ ಸ್ಟಾರ್‌ ದಿನಪತ್ರಿಕೆಯ ಅಂಕಣಗಾರ್ತಿಯೂ ಆಗಿದ್ದಾರೆ. ಈ ಹಿಂದೆ ಆಕೆ ಒಂದು ದಶಕಕ್ಕೂ ಹೆಚ್ಚು ಕಾಲ ಸರಕಾರಿ ಸುದ್ದಿ ಸಂಸ್ಥೆ ಸಿಬಿಸಿ ಯಲ್ಲಿ ಕೆಲಸ ಮಾಡಿದ್ದಾರೆ.

ಆಕೆಯ ನೇಮಕಾತಿಯು ಇಸ್ಲಾಮೋಫೋಬಿಯಾ ಹಾಗೂ ಎಲ್ಲಾ ವಿಧದ ದ್ವೇಷದ ವಿರುದ್ಧದ ನಮ್ಮ ಹೋರಾಟದಲ್ಲಿ ಸರಿಯಾದ ಹೆಜ್ಜೆ ಎಂದು ನೇಮಕಾತಿಯನ್ನು ಪ್ರಧಾನಿ ಜಸ್ಟಿನ್‌ ಟ್ರುಡಿಯೋ ಶ್ಲಾಘಿಸಿದ್ಧಾರೆ.

ಇತ್ತೀಚಿನ ದಾಳಿಗಳಲ್ಲಿ ಮೃತರಾದವರ ಹೆಸರುಗಳನ್ನು ಸರಣಿ ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ ಎಲ್ಘವಾಬಿ,  ಇವುಗಳನ್ನು ಮರೆಯಬಾರದು ಎಂದಿದ್ದಾರೆ.

ಜೂನ್‌ 2021 ರಲ್ಲಿ ಸರಕಾರ ಆಯೋಜಿಸಿದ್ದ ಇಸ್ಲಾಮೋಫೋಬಿಯಾ ಕುರಿತಾದ ರಾಷ್ಟ್ರೀಯ ಸಭೆಯೊಂದರಲ್ಲಿ ಮಾಡಿದ ಶಿಫಾರಸಿನಂತೆ ಈ ಹೊಸ ಹುದ್ದೆ ಸೃಷ್ಟಿಸಲಾಗಿದೆ.

ಇದನ್ನೂ ಓದಿ: ಗದಗ | ವಿವಾಹ ಪೂರ್ವ ಆಚರಣೆಗಾಗಿ ದೇವಸ್ಥಾನಕ್ಕೆ ತೆರಳಿದ್ದ ದಲಿತ ಕುಟುಂಬಕ್ಕೆ ಪ್ರವೇಶ ನಿರಾಕರಣೆ: ಆರೋಪ

Similar News