ಇನ್ನಷ್ಟು ಕುಸಿದ ಅದಾನಿ ಶೇರುಗಳು, ಶುಕ್ರವಾರ ಬೆಳಿಗ್ಗೆಯೇ 2 ಲಕ್ಷ ಕೋಟಿ ರೂ. ಕರಗಿದ ಮಾರುಕಟ್ಟೆ ಬಂಡವಾಳ

ಹಿಂಡನ್ಬರ್ಗ್ ಹೊಡೆತ

Update: 2023-01-28 09:24 GMT

ಹೊಸದಿಲ್ಲಿ,ಜ.27: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರೀಸರ್ಚ್ (Hindenburg Research) ನ ವರದಿಯ ಹೊಡೆತ ಅದಾನಿ ಗ್ರೂಪ್ (Adani Group) ತತ್ತರಿಸುವಂತೆ ಮಾಡಿದೆ. ಶುಕ್ರವಾರ ಬೆಳಿಗ್ಗೆಯ ವಹಿವಾಟಿನಲ್ಲಿ ಗ್ರೂಪ್ ನ ಒಂಭತ್ತು ಲಿಸ್ಟೆಡ್ ಕಂಪನಿಗಳ ಶೇರುಗಳು ಇನ್ನಷ್ಟು ಕುಸಿದಿದ್ದು, ಗ್ರೂಪ್ ನ  ಮಾರುಕಟ್ಟೆ ಬಂಡವಾಳದಲ್ಲಿ ಎರಡು ಲ.ಕೋ.ರೂ.ಗಳು ಕರಗಿವೆ. ಇದರೊಂದಿಗೆ ಮಂಗಳವಾರದ ಮುಕ್ತಾಯದ ಬಳಿಕ ಮಾರುಕಟ್ಟೆ ಬಂಡವಾಳ 2.5 ಲ.ಕೋ.ರೂ.ಗೂ ಅಧಿಕ ಕರಗಿದೆ. ಗುರುವಾರ ಗಣರಾಜ್ಯ ದಿನದ ಪ್ರಯುಕ್ತ ಶೇರುಮಾರುಕಟ್ಟೆಗಳು ಮುಚ್ಚಿದ್ದವು.

ಶುಕ್ರವಾರ ಅಪರಾಹ್ನದ ವಹಿವಾಟಿನಲ್ಲಿ ಅದಾನಿ ಟೋಟಲ್ ಗ್ಯಾಸ್ (Adani Total Gas Limited)ಶೇ.20, ಅದಾನಿ ಗ್ರೀನ್ ಎನರ್ಜಿ (Adani Green Energy)ಶೇ.20, ಅಂಬುಜಾ ಸಿಮೆಂಟ್ (Ambuja Cement)ಶೇ.18.14, ಎಸಿಸಿ (ACC)ಶೇ.14.57, ಅದಾನಿ ಪವರ್(Adani Power)ಶೇ.5, ಅದಾನಿ ವಿಲ್ಮರ್ (Adani Wilmar) ಶೇ.5  ಮತ್ತು ಅದಾನಿ ಎಂಟರ್ಪ್ರೈಸ್ (Adani Enterprises)ಶೇ.15.55 ರಷ್ಟು ಕುಸಿದಿದ್ದವು.

ಹಿಂಡನ್ಬರ್ಗ್ ರೀಸರ್ಚ್ ನ ದುರುದ್ದೇಶಪೂರಿತ, ಕುಚೇಷ್ಟೆಯ ವರದಿಗಾಗಿ ಅದರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಅದಾನಿ ಗ್ರೂಪ್ ಗುರುವಾರ ಹೇಳಿತ್ತಾದರೂ ಶುಕ್ರವಾರ ಬೆಳಿಗ್ಗೆ ಕಂಪನಿಯ ಶೇರುಗಳು ನಷ್ಟದೊಂದಿಗೇ ವಹಿವಾಟನ್ನು ಆರಂಭಿಸಿದ್ದವು.

ಈ ನಡುವೆ ಅದಾನಿ ಗ್ರೂಪ್ ನಿಂದ ಕಾನೂನು ಬೆದರಿಕೆಗೆ ಪ್ರತಿಕ್ರಿಯಿಸಿರುವ ಹಿಂಡನ್ಬರ್ಗ್, ತಾನು ತನ್ನ ವರದಿಗೆ ಬದ್ಧನಾಗಿದ್ದೇನೆ ಮತ್ತು ತನ್ನ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಂಡರೂ ಅದು ವ್ಯರ್ಥ ಎಂದು ಹೇಳಿದೆ.

ತಾನು ತನ್ನ ವರದಿಯನ್ನು ಬಿಡುಗಡೆಗೊಳಿಸಿದ 36 ಗಂಟೆಗಳಲ್ಲಿ ಅದಾನಿ ತಾನು ಎತ್ತಿದ್ದ ಒಂದೇ ಒಂದು ಪ್ರಮುಖ ವಿಷಯಕ್ಕೂ ಉತ್ತರಿಸಿಲ್ಲ. ಬದಲಿಗೆ ನಿರೀಕ್ಷೆಯಂತೆ ಅದಾನಿ ಬಡಾಯಿ ಮತ್ತು ಬೆದರಿಕೆಗಳ ಮಾರ್ಗ ಅನುಸರಿಸುತ್ತಿದ್ದಾರೆ. ಎರಡು ವರ್ಷಗಳ ಕಾಲ ಶ್ರಮಿಸಿ ಸಿದ್ಧಪಡಿಸಲಾದ ತನ್ನ ವರದಿಯನ್ನು ಅವರು ‘ಸಂಶೋಧಿಸಲ್ಪಡದ ವರದಿ ’ಎಂದು ಇಂದು ನೀಡಿರುವ ಮಾಧ್ಯಮ ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ ಎಂದು ಹಿಂಡನ್ಬರ್ಗ್ ತಿಳಿಸಿದೆ.

ಇದನ್ನು ಓದಿ: ಶೇರು ಬೆಲೆಗಳಲ್ಲಿ ಹಸ್ತಕ್ಷೇಪ ಆರೋಪ: ಹಿಂಡೆನ್ ಬರ್ಗ್ ವಿರುದ್ಧ ಕಾನೂನು ಕ್ರಮಕ್ಕೆ ಅದಾನಿ ಗ್ರೂಪ್ ಚಿಂತನೆ

Similar News