ಗಂಭೀರ ಭದ್ರತಾ ಲೋಪ ಆರೋಪಿಸಿದ ಕಾಂಗ್ರೆಸ್ ನಾಯಕರು: ಭಾರತ್ ಜೋಡೊ ಯಾತ್ರೆ ರದ್ದು

Update: 2023-01-27 17:07 GMT

ಶ್ರೀನಗರ: ಭದ್ರತಾ ಲೋಪದ ಕಾರಣದಿಂದಾಗಿ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಆಡಳಿತದಿಂದ  "ಅತ್ಯಂತ ಗಂಭೀರ ಭದ್ರತಾ ಲೋಪ" ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಹುಲ್ ಗಾಂಧಿ ಇಂದು ಕಾಶ್ಮೀರದಲ್ಲಿ 20 ಕಿ.ಮೀ ನಡೆಯಬೇಕಿತ್ತು. ಆದರೆ ಸುಮಾರು ಒಂದು ಕಿ.ಮೀ‌ ನಡೆದ ಬಳಿಕ ಯಾತ್ರೆಯನ್ನು ನಿಲ್ಲಿಸಬೇಕಾಯಿತು. ಇಂದಿನ ಭಾರತ್‌ ಜೋಡೋ ಯಾತ್ರೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಕೂಡಾ ಸೇರಿದ್ದರು.

ರಾಹುಲ್ ಗಾಂಧಿ ಅವರು ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ಬನಿಹಾಲ್ ಸುರಂಗವನ್ನು ದಾಟುತ್ತಿದ್ದಂತೆ, ಅನಿರೀಕ್ಷಿತವಾಗಿ, ದೊಡ್ಡ ಜನಸಮೂಹ ಅವರಿಗಾಗಿ ಕಾಯುತ್ತಿದ್ದರು. ಜನಸಂದಣಿಯನ್ನು ನಿಯಂತ್ರಿಸಲು ರಾಹುಲ್‌ ಗಾಂಧಿ ಅವರ ಅಂಗರಕ್ಷಕರಿಗೆ ಸಾಧ್ಯವಾಗದ ಕಾರಣ ಯಾತ್ರೆಯನ್ನು ರದ್ದು ಪಡಿಸಲಾಯಿತು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ " ನಾವು ಬನಿಹಾಲ್ ಸುರಂಗ ದಾಟುತ್ತಿದ್ದಂತೆ ದೊಡ್ಡ ಜನ ಸಮೂಹ ನಮಗಾಗಿ ಕಾದಿತ್ತು. ಅಲ್ಲಿ ಪೊಲೀಸರು ಜನ ಸಮೂಹವನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಜನ ಹೆಚ್ಚಿದ್ದ ಕಾರಣ ನನ್ನ ಅಂಗರಕ್ಷಕರಿಗೂ ಕಾರ್ಯ ನಿರ್ವಹಿಸುವುದು ಕಷ್ಟವಾಯಿತು. ನನ್ನ ವೈಯಕ್ತಿಕ ಭದ್ರತಾ ಸಿಬ್ಬಂದಿಗಳ ಸಲಹೆ ಮೇರೆಗೆ ನಾನು ಇಂದಿನ ಯಾತ್ರೆಯನ್ನು ಕೊನೆಗೊಳಿಸಿದ್ದೇನೆ. ಇದು ಭದ್ರತೆ ಸಂಬಂಧಿಸಿದ ವಿಷಯ, ನಾನು ಅವರ ಮಾತು ತಳ್ಳಿಹಾಕುವಂತಿಲ್ಲ,'' ಎಂದು ತಿಳಿಸಿದರು.

"ಜನಸಂದಣಿ ನಿಯಂತ್ರಣವನ್ನು ಖಾತರಿಪಡಿಸುವುದು ಆಡಳಿತದ ಜವಾಬ್ದಾರಿಯಾಗಿದೆ" ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

"ಭದ್ರತಾ ಸಿಬ್ಬಂದಿಯ ಹಠಾತ್ ಹಿಂಪಡೆಯುವಿಕೆ" ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತವು ಜನಸಂದಣಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಹುಲ್ ಗಾಂಧಿ ಅವರು ಸುಮಾರು 30 ನಿಮಿಷಗಳ ಕಾಲ ಚಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಅವರನ್ನು ಭದ್ರತಾ ವಾಹನದಲ್ಲಿ ಕರೆದೊಯ್ಯಲಾಯಿತು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

"ನಾವು ಬನಿಹಾಲ್ ಸುರಂಗವನ್ನು ದಾಟಿದ ನಂತರ ಪೊಲೀಸರು ಹಿಂದೆ ಸರಿದರು. ಇದಕ್ಕೆ ಆದೇಶಿಸಿದವರು ಯಾರು? ಈ ಲೋಪಕ್ಕೆ ಜವಾಬ್ದಾರಿಯುತ ಅಧಿಕಾರಿಗಳು ಉತ್ತರಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು" ಎಂದು ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಹೇಳಿದರು. 15 ನಿಮಿಷಗಳ ಕಾಲ ಯಾವುದೇ ಭದ್ರತಾ ಅಧಿಕಾರಿಗಳು ಇರಲಿಲ್ಲ ಎಂದು ಅವರು ಹೇಳಿದರು.

"ಭಾರತ್ ಜೋಡೋ ಯಾತ್ರೆಯಲ್ಲಿ 15 ನಿಮಿಷಗಳ ಕಾಲ ಯಾವುದೇ ಭದ್ರತಾ ಅಧಿಕಾರಿಗಳು ಇರಲಿಲ್ಲ. ಇದು ಅತ್ಯಂತ ಗಂಭೀರವಾದ ಲೋಪವಾಗಿದೆ. ರಾಹುಲ್ ಗಾಂಧಿ ಮತ್ತು ಇತರ ಯಾತ್ರಿಗಳು ಭದ್ರತೆ ಇಲ್ಲದೆ ನಡೆಯಲು ಸಾಧ್ಯವಿಲ್ಲ" ಎಂದು ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.

  

Similar News