ದಾಖಲೆ ಸೃಷ್ಟಿಸಿದ ಪಠಾಣ್: ಬಿಡುಗಡೆಯ 2ನೇ ದಿನದ ಗಳಿಕೆ ಎಷ್ಟು ಗೊತ್ತೇ?

Update: 2023-01-28 02:22 GMT

ಮುಂಬೈ: ಶಾರೂಖ್ ಖಾನ್ ಅವರ ಹೊಸದಾಗಿ ಬಿಡುಗಡೆಯಾದ ಪಠಾಣ್ ಚಲನಚಿತ್ರ ಬಿಡುಗಡೆಯಾದ ಎರಡನೇ ದಿನ 68 ಕೋಟಿ ರೂಪಾಯಿ ಗಳಿಕೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ವಹಿವಾಟು ವಿಶ್ಲೇಷಕ ತರಣ್ ಆದರ್ಶ್ ಅವರ ಹೇಳಿಕೆ ಪ್ರಕಾರ, ಇದು ತವರಿನಲ್ಲಿ ಚಿತ್ರದ ಹಿಂದಿ ಅವತರಣಿಕೆಯ ಟಿಕೆಟ್ ಮಾರಾಟದ ಗಳಿಕೆಯಾಗಿದೆ.

ಚಿತ್ರ ಬಿಡುಗಡೆಯ ದಿನ ಪಠಾಣ್ ಸುಮಾರು 70 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಒಂದೇ ದಿನ ಇಷ್ಟು ದೊಡ್ಡ ಮೊತ್ತವನ್ನು ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ದಾಖಲೆಗೆ ಇದು ಪಾತ್ರವಾಗಿತ್ತು. ಮೊದಲ ದಿನ 55 ಕೋಟಿ ರೂಪಾಯಿ ಗಳಿಕೆ ದಾಖಲಿಸಿದ್ದ ಪಠಾಣ್ ಚಿತ್ರದ ದೇಶೀಯ ಗಳಿಕೆ 123 ಕೋಟಿ ತಲುಪಿದೆ. ತಮಿಳು ಹಾಗೂ ತೆಲುಗು ಡಬ್ಬಿಂಗ್ 4.5 ಕೋಟಿ ರೂಪಾಯಿ ಗಳಿಸಿದ್ದು, ವಿಶ್ವಾದ್ಯಂತ ಎರಡು ದಿನಗಳಲ್ಲಿ ಒಟ್ಟು ಗಳಿಕೆ 200 ಕೋಟಿ ರೂಪಾಯಿ ದಾಟಿದೆ.

"ಎಲ್ಲ ಬಾಕ್ಸ್ ಆಫೀಶ್ ದಾಖಲೆಗಳು ಧ್ವಂಸಗೊಂಡಿವೆ. ಪಠಾಣ್ 2ನೇ ದಿನವೂ ದಾಖಲೆ ಸೃಷ್ಟಿಸಿದೆ. ಒಂದೇ ದಿನ 70 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರ. ಹಿಂದಿ ಅವತರಣಿಕೆಗೆ ಬುಧವಾರ 55 ಕೋಟಿ, ಗುರುವಾರ 68 ಕೋಟಿ ಒಟ್ಟು 123 ಕೋಟಿ. ಭಾರತದ ವ್ಯವಹಾರ ಕಲ್ಪನೆಗೂ ನಿಲುಕದ್ದು. ಅಭೂತಪೂರ್ವ ಹಾಗೂ ತಡೆಯಲು ಅಸಾಧ್ಯ" ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಎರಡನೇ ಟ್ವೀಟ್‌ನಲ್ಲಿ ತಮಿಳು ಹಾಗೂ ತೆಲುಗು ಅವತರಣಿಕೆಯ ವಿವರಗಳಿವೆ.

ಪಠಾಣ್‌ನ ಮೊದಲ ದಿನದ ಗಳಿಕೆ 55 ಕೋಟಿ, ಇದು ಕೆಜಿಎಫ್: ಚಾಪ್ಟರ್-2 ಹಿಂದಿ ಅವತರಣಿಕೆ ಗಳಿಸಿದ ದಾಖಲೆ ಮುರಿದಿದೆ. ಶಾರೂಖ್ ಖಾನ್ ಅವರ ಈ ಚಿತ್ರ ಬಾಲಿವುಡ್‌ನ ಅತಿದೊಡ್ಡ ಓಪನರ್. ಸಾಗರೋತ್ತರ ಗಳಿಕೆ ಸೇರಿದಂತೆ ಪಠಾಣ್ ಮೊದಲ ದಿನದ ಗಳಿಕೆ 106 ಕೋಟಿ ರೂಪಾಯಿ ಆಗಿದೆ. ಎರಡನೇ ದಿನದ ಗಳಿಕೆಯೂ ಸೇರಿ ಚಿತ್ರದ ಒಟ್ಟು ಗಳಿಕೆ 219 ಕೋಟಿ ಆಗಿದೆ.

ಹಲವು ಇತರ ಪ್ರಥಮಗಳನ್ನೂ ಪಠಾಣ್ ದಾಖಲಿಸಿದೆ. ವಿಶ್ವಾದ್ಯಂತ 8000 ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಇದು ಯಾವುದೇ ಹಿಂದಿ ಚಿತ್ರಗಳ ಗರಿಷ್ಠ ಪ್ರದರ್ಶನವಾಗಿದೆ. ಮೊದಲ ಪ್ರದರ್ಶನದ ಬಳಿಕ 300 ಪ್ರದರ್ಶನಗಳು ಸೇರಿಕೊಂಡಿವೆ. ಮುಂಗಡ ಬುಕ್ಕಿಂಗ್‌ನಲ್ಲಿ 5.5 ಲಕ್ಷ ಟಿಕೆಟ್ ಕಾಯ್ದಿರಿಸಲಾಗಿತ್ತು. ಕೆಜಿಎಫ್:ಚಾಪ್ಟರ್-2 ಹೊರತುಪಡಿಸಿದರೆ ಇದು ಎರಡನೇ ಗರಿಷ್ಠ ಬುಕ್ಕಿಂಗ್ ಕಂಡ ಚಿತ್ರವಾಗಿದೆ.

Similar News