"ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಸಾಕ್ಷ್ಯಚಿತ್ರ ತಯಾರಿಸಿದ್ದ ಅಮೆರಿಕ ಪತ್ರಕರ್ತನನ್ನು ಗಡೀಪಾರು ಮಾಡಲಾಗಿತ್ತು"

ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರ

Update: 2023-01-28 07:39 GMT

ಹೊಸದಿಲ್ಲಿ: ಅಮೆರಿಕಾದ ವೆಬ್‌ಸೈಟ್‌ ʻವೈಸ್‌ ನ್ಯೂಸ್‌ʼ ನಲ್ಲಿ ಕೆಲಸ ಮಾಡುವ ಅಮೆರಿಕಾ ಮೂಲದ ಅಂಗದ್‌ ಸಿಂಗ್‌ ಎಂಬ ಪತ್ರಕರ್ತನ ಸಾಕ್ಷ್ಯಚಿತ್ರ ʼಇಂಡಿಯಾ ಬರ್ನಿಂಗ್ʼ ಭಾರತದ  ಜಾತ್ಯತೀತ ಸಂಸ್ಕೃತಿಯ ಬಗ್ಗೆ ಋಣಾತ್ಮಕ ದೃಷ್ಟಿಕೋನ ಹೊಂದಿರುವುದರಿಂದ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿದ ಕಾರಣ ದೇಶದಿಂದ ಗಡೀಪಾರು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ದಿಲ್ಲಿ ಹೈಕೋರ್ಟಿಗೆ ತಿಳಿಸಿದೆ.

ಭಾರತಕ್ಕೆ ಭೇಟಿ ನೀಡಲು ಸರ್ಕಾರ ಅನುಮತಿ ನೀಡದೇ ಇರುವುದನ್ನು ಪ್ರಶ್ನಿಸಿ ಸಿಂಗ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜಸ್ಟಿಸ್‌ ಪ್ರತಿಭಾ ಎಂ ಸಿಂಗ್‌ ಬುಧವಾರ ನಡೆಸುತ್ತಿದ್ದರು. ಸರ್ಕಾರದ ನಿರ್ಧಾರವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಹಾಗೂ ವಿಧಿ 21 (ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು)  ಮತ್ತು ವಿಧಿ 25 ( ಧಾರ್ಮಿಕ ಸ್ವಾತಂತ್ರ್ಯ) ಅನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಮೆರಿಕಾದ ಪೌರತ್ವ ಹೊಂದಿರುವ ಸಿಂಗ್‌ ಬಳಿ ಓವರ್‌ಸೀಸ್‌ ಸಿಟಿಜನ್‌ ಆಫ್‌ ಇಂಡಿಯಾ ಕಾರ್ಡ್‌ ಇದೆ.

ಯಾವುದೇ ವಿದೇಶಿ ನಾಗರಿಕನಿಗೆ ಕೇಂದ್ರ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ಯಾವುದೇ ಚಿತ್ರ ನಿರ್ಮಿಸುವುದನ್ನು ನಿಷೇಧಿಸುವ ಫಾರಿನರ್ಸ್‌ ಆರ್ಡರ್‌ 1948 ಇದರ ಸೆಕ್ಷನ್‌ 11ಎ ಅನ್ನು ಉಲ್ಲಂಘಿಸಿರುವುದರಿಂದ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ  ಎಂದು ನ್ಯಾಯಾಲಯದಲ್ಲಿ ಕೇಂದ್ರ ಗೃಹ ಸಚಿವಾಲಯದ ಪರ ಹಾಜರಿದ್ದ ವಕೀಲ ಅನುರಾಗ್‌ ಅಹ್ಲುವಾಲಿಯಾ ಹೇಳಿದರು.

ನ್ಯೂಯಾರ್ಕಿನಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್‌ ಸೂಚನೆಯನ್ವಯ ಸಿಂಗ್‌ ಅನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಫಾರಿನ್‌ ರೀಜನಲ್‌ ರಿಜಿಸ್ಟ್ರೇಶನ್‌ ಆಫೀಸ್‌ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಸಿಂಗ್ ಅವರು 2020 ರಲ್ಲಿ ಪತ್ರಕರ್ತ ವೀಸಾ ಪಡೆಯಲು ನಿಖರ ಮಾಹಿತಿ ನೀಡಿರಲಿಲ್ಲ ಹಾಗೂ ದೇಶಕ್ಕೆ ಕೆಟ್ಟ ಹೆಸರು ತರುವ ದೇಶ-ವಿರೋದಿ ಪ್ರಚಾರದಲ್ಲಿ ತೊಡಗಿದ್ದರು ಎಂದು ಅಫಿಡವಿಟ್‌ ಹೇಳಿದೆ.

ಓವರ್‌ಸೀಸ್‌ ಸಿಟಿಜನ್‌ ಆಫ್‌ ಇಂಡಿಯುಆ ಕಾರ್ಡ್‌ ಹೊಂದಿರುವವರು ಸೆಕ್ಷನ್‌ 7ಬಿ(2) ಅಡಿಯಲ್ಲಿರುವ ಹಕ್ಕುಗಳನ್ನು ಹೊರತುಪಡಿಸಿ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೂ ಅವರು ಒಸಿಐ ಕಾರ್ಡ್‌ ಈಗಲೂ ಮಾನ್ಯವಾಗಿದೆ, ರದ್ದುಗೊಂಡಿಲ್ಲ ಎಂದು ಸಿಂಗ್‌ ಪರ ವಕೀಲೆ ಸ್ವಾತಿ ಸುಕುಮಾರ್‌ ಹೇಳಿದರು.

ಸಿಂಗ್‌ ಅವರ ಒಸಿಐ ಕಾರ್ಡ್‌ ರದ್ದುಗೊಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿದೆಯೇ ಎಂದು ತಿಳಿಯಲು ಸರ್ಕಾರಿ ವಕೀಲರು ಸಮಯಾವಕಾಶ ಕೋರಿದರು.

ಇದಕ್ಕೆ ಅನುಮತಿ ನೀಡಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ನಿಗದಿಪಡಿಸಿದೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಸಿಂಗ್‌ ಅವರನ್ನು ನ್ಯೂಯಾರ್ಕ್‌ಗೆ ವಾಪಸ್‌ ಕಳುಹಿಸಲಾಗಿತ್ತು ಎಂದು ಅವರ ತಾಯಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಫೇಸ್ಬುಕ್‌ ಪೋಸ್ಟ್‌ ಒಂದರಲ್ಲಿ ತಿಳಿಸಿದ್ದರು.

Similar News