ಅಸ್ಸಾಂನ ಗೋಲ್ಪುರದ ದಿಗ್ಬಂಧನ ಕೇಂದ್ರಕ್ಕೆ ಶುಕ್ರವಾರ 68 ʻಅಕ್ರಮ ವಿದೇಶಿಗರʼ ಸ್ಥಳಾಂತರ

Update: 2023-01-28 09:16 GMT

ಗುವಹಾಟಿ: ಅಸ್ಸಾಂನ ಗೋಲ್ಪರ ಎಂಬಲ್ಲಿ ನಿರ್ಮಾಣಗೊಂಡಿರುವ ದಿಗ್ಬಂಧನ ಕೇಂದ್ರಕ್ಕೆ (ಅಧಿಕೃತವಾಗಿ ಇದನ್ನು ಟ್ರಾನ್ಸಿಟ್‌ ಕ್ಯಾಂಪ್ ಎನ್ನಲಾಗುತ್ತದೆ) ಶುಕ್ರವಾರ ಕನಿಷ್ಠ 68 ʼವಿದೇಶೀಯರ" ಮೊದಲ ಬ್ಯಾಚ್‌ ಅನ್ನು ಕೊಂಡೊಯ್ಯಲಾಗಿದೆ ಎಂದು ವರದಿಯೊಂದು ಹೇಳಿದೆ. ಗುವಹಾಟಿಯಿಂದ ಸುಮಾರು 150 ಕಿಮೀ ದೂರದಲ್ಲಿರುವ ಮಟಿಯಾ ಟ್ರಾನ್ಸಿಟ್‌ ಕ್ಯಾಂಪ್‌ಗೆ ʼವಿದೇಶಿಗರನ್ನು" ಹಂತಹಂತವಾಗಿ ಸ್ಥಳಾಂತರಿಸುವ ಪ್ರಸ್ತಾವಿತ ಪ್ರಕ್ರಿಯೆ ಇದರಿಂದ ಆರಂಭಗೊಂಡಂತಾಗಿದೆ.

ʻಅಕ್ರಮ ವಿದೇಶಿಗರನ್ನುʼ ಇರಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಾನುಸಾರ ನಿರ್ಮಾಣವಾದ ರಾಜ್ಯದ ಮೊದಲ ಕೇಂದ್ರ ಇದಾಗಿದೆ. ಇಲ್ಲಿಯ ತನಕ ಈ ಮಂದಿಯನ್ನು  ಅಸ್ಸಾಂನ ವಿವಿಧೆಡೆ ಜೈಲುಗಳೊಳಗೆ ಇರುವ ಆರು ದಿಗ್ಬಂಧನ ಕೇಂದ್ರಗಳಲ್ಲಿ ಇರಿಸಲಾಗಿತ್ತು.

ಅಸ್ಸಾಂನ ಫಾರಿನರ್ಸ್‌ ಟ್ರಿಬ್ಯುನಲ್‌ ಅಕ್ರಮ ವಿದೇಶಿಗರು ಎಂದು ಗುರುತಿಸಿದವರು ಹಾಗೂ ವೀಸಾ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕೆ ನ್ಯಾಯಾಲಯಗಳಿಂದ ದೋಷಿ ಎಂದು ಘೋಷಿತರಾದವರನ್ನು ಗೋಲ್ಪುರದ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಈ 68 ಜನರಲ್ಲಿ 45 ಪುರುಷರು, 21 ಮಹಿಳೆಯರು ಹಾಗೂ ಇಬ್ಬರು ಮಕ್ಕಳಿದ್ದಾರೆ, ಅವರನ್ನು ವಿದೇಶೀಯರು ಎಂದು ಗುರುತಿಸಲಾಗಿತ್ತು ಎಂದು ಅಸ್ಸಾಂ ಬಂದೀಖಾನೆ ಇಲಾಖೆಯ ಐಜಿ ಬರ್ನಾಲಿ ಶರ್ಮ ಹೇಳಿದ್ದಾರೆ.

ರಾಜ್ಯದಲ್ಲಿರುವ ಪ್ರಸಕ್ತ ಆರು ದಿಗ್ಬಂಧನಾ ಕೇಂದ್ರಗಳಲ್ಲಿ ಎರಡು ಕೊಕ್ರಾಜರ್‌ ಮತ್ತು ಗೋಲ್ಪುರ ಜಿಲ್ಲಾ ಕಾರಾಗೃಹಗಳಲ್ಲಿದ್ದರೆ ನಾಲ್ಕು ಇತರ ಕೇಂದ್ರಗಳು ತೇಜ್ಪುರ್‌, ದಿಬ್ರೂಘರ್‌ ಮತ್ತು ಜೋರ್ಹಟ್‌ ಕೇಂದ್ರ ಕಾರಾಗೃಹಗಳಲ್ಲಿವೆ. ಈ ಆರು ಕೇಂದ್ರಗಳಲ್ಲಿ ಒಟ್ಟು 195 ಮಂದಿ ಇದ್ದಾರೆಂದು ಸೆಪ್ಟೆಂಬರ್‌ 2022 ರ ಸರಕಾರಿ ಅಂಕಿಅಂಶ ತಿಳಿಸುತ್ತದೆ. ದಿಗ್ಬಂಧನ ಕೇಂದ್ರಕ್ಕೊಂದು ಮಾನವೀಯ ಮಖ ನೀಡಲು ಅವುಗಳ ಹೆಸರನ್ನು ದಿಗ್ಬಂಧನ ಉದ್ದೇಶದ ಟ್ರಾನ್ಸಿಟ್‌ ಕ್ಯಾಂಪ್ ಎಂದು ಅಸ್ಸಾಂ ಸರ್ಕಾರ ಬದಲಾಯಿಸಿತ್ತು.

ಗೋಲ್ಪುರದಲ್ಲಿರುವ ಮಟಿಯಾ ಟ್ರಾನ್ಸಿಟ್‌ ಕ್ಯಾಂಪ್‌  20 ಬಿಗಾ ಜಮೀನಿನಲ್ಲಿ ತಲೆಯೆತ್ತಿದ್ದು ಇದರ ನಿರ್ಮಾಣಕ್ಕೆ ರೂ 46 ಕೋಟಿ ವೆಚ್ಚ ಆಗಿದೆ. ಇದರಲ್ಲಿ 3000 ಮಂದಿಗೆ ಸ್ಥಳಾವಕಾಶವಿದೆ.

Similar News