ಸ್ಟಾರ್ಟ್ ಅಪ್: ಯುವ ಕನಸುಗಳಿಗೆ ರೆಕ್ಕೆ...

Update: 2023-01-29 09:24 GMT

2020 ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ನಿರಂತರವಾಗಿ ಹರಿದು ಬಂದ ಕೊರಿಯನ್ ಡ್ರಾಮ 'ಸ್ಟಾರ್ಟ್ ಅಪ್' ಹಲವು ಕಾರಣಗಳಿಂದ ಯುವ ಜನರನ್ನು ಸೆಳೆದಿತ್ತು. ಯುವ ಸಮೂಹವನ್ನು ಈಗಲೂ ತನ್ನೆಡೆಗೆ ಸೆಳೆಯುತ್ತಿದೆ. 'ಸ್ಟಾರ್ಟ್ ಅಪ್' ಹೆಸರೇ ಹೇಳುವಂತೆ ಉದ್ಯಮ ಶೀಲತೆಯ ಕಡೆಗೆ ಆಸಕ್ತಿ ಹೊಂದಿದ ತರುಣ ಸಮೂಹವನ್ನು ಕೇಂದ್ರೀಕರಿಸಿಕೊಂಡಿದೆ. ಸ್ಟೀವ್‌ಜಾಬ್ಸ್‌ನ ಯಶಸ್ಸಿನ ಚುಂಗು ಹಿಡಿದು ಸಾಗುವ ಯುವಕರ ಗುಂಪು, ತಾವು ಕೂಡ ಉದ್ಯಮ ಕ್ಷೇತ್ರದಲ್ಲಿ ಮಿಂಚುವುದಕ್ಕೆ ನಡೆಸುವ ಪ್ರಯತ್ನ, ಅದರ ಏಳು ಬೀಳುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಅಷ್ಟೇ ಲವಲವಿಕೆಯಿಂದ ಸರಣಿ ನಿರೂಪಿಸುತ್ತದೆ. ಒಂದು ತ್ರಿಕೋನ ಪ್ರೇಮಕತೆ ಮತ್ತು ಅದಕ್ಕೆ ತಳಕು ಹಾಕಿಕೊಂಡಿರುವ ಉದ್ಯಮಿಗಳಾಗುವ ಯುವಕರ ಕನಸು ಇವೆರಡೂ ಚಿತ್ರ ಕತೆಯ ಪ್ರಧಾನ ಅಂಶಗಳಾಗಿವೆ.

ಸಿಯೋ ದಾಲ್ಮಿ-ನಾಮ್ ದೂಸಾನ್- ಹಾನ್ ಜಿ ಪ್ಯೋಂಗ್ ಎನ್ನುವ ಮೂರು ಪಾತ್ರಗಳು ಸರಣಿಯ ಮೂರು ಪ್ರಮುಖ ಬಿಂದುಗಳು. ಉದ್ಯಮ ಕ್ಷೇತ್ರದ ಒಬ್ಬ ವಿಫಲ ತಂದೆಯ ಇಬ್ಬರು ಹೆಣ್ಣು ಮಕ್ಕಳು ಸಿಯೋ ದಾಲ್ಮಿ ಮತ್ತು ಸಿಯೋ ಇನ್ ಜೆ. ತಂದೆ ಸಿಯೋ ಚಂಗ್ ಇರುವ ವೃತ್ತಿಯನ್ನು ಬಿಟ್ಟು ಸ್ವಯಂ ಉದ್ಯೋಗ ಮಾಡುವ ನಿರ್ಧಾರ ತಳೆದಾಗ, ಆರ್ಥಿಕ ಅತಂತ್ರತೆಯ ಭಯದಿಂದ ಆತನ ಪತ್ನಿ ವಿಚ್ಛೇದನವನ್ನು ಬಯಸುತ್ತಾಳೆ. ಬಳಿಕ ಒಬ್ಬ ಶ್ರೀಮಂತ ಉದ್ಯಮಿಯನ್ನು ವರಿಸುತ್ತಾಳೆ. ಈ ಸಂದರ್ಭದಲ್ಲಿ ಸಿಯೋ ದಾಲ್ಮಿ ತಂದೆಯ ಜೊತೆಗೆ ಇರುವ ನಿರ್ಧಾರ ಮಾಡಿದರೆ, ಸಿಯೋ ಇನ್ ಜೆ ತಾಯಿಯನ್ನು ಆರಿಸಿಕೊಳ್ಳುತ್ತಾಳೆ. ಈ ಆಯ್ಕೆಗೆ ಅವರಿಬ್ಬರೂ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ತಮ್ಮ ಆಯ್ಕೆಯ ಸರಿ-ತಪ್ಪುಗಳನ್ನು ಭವಿಷ್ಯದಲ್ಲಿ ಒರೆಗೆ ಹಚ್ಚಿ ನೋಡುವ ಸ್ಥಿತಿ ನಿರ್ಮಾಣವಾಗುತ್ತದೆ. ತಾಯಿಯನ್ನು ಆಯ್ಕೆ ಮಾಡಿಕೊಂಡ ಸಿಯೋ ಇನ್ ಜೆ ಮುಂದೆ ದೊಡ್ಡವಳಾಗಿ ಉದ್ಯಮಿಯಾಗಿ ಗುರುತಿಸಿಕೊಳ್ಳುತ್ತಾಳೆ. ತಂದೆಯನ್ನು ಆಯ್ಕೆ ಮಾಡಿಕೊಂಡ ಸಿಯೋ ದಾಲ್ಮಿ ಬಳಿಕ ತನ್ನ ತಂದೆಯನ್ನು ಕಳೆದುಕೊಂಡು ಅಜ್ಜಿಯ ಪಾಲನೆಯಲ್ಲಿ ಬೆಳೆಯುತ್ತಾಳೆ. ಸಿಯೋ ದಾಲ್ಮಿಯ ಅಜ್ಜಿ ಚಾಯ್ ವೊನ್ ಸರಣಿಯುದ್ದಕ್ಕೂ ನಮ್ಮನ್ನು ಕಾಡುವ ಇನ್ನೊಂದು ಹೃದಯವಂತ ಪಾತ್ರ. ಕತೆಯ ಬೆಳವಣಿಗೆಯಲ್ಲಿ ಈ ಅಜ್ಜಿಯ ಪಾತ್ರ ಬಹುದೊಡ್ಡದು.

 ಸಣ್ಣದೊಂದು ಕ್ಯಾಂಟೀನ್ ನಡೆಸುವ ಈ ಅಜ್ಜಿ, ಬೀದಿಯಲ್ಲಿ ಅನಾಥನಾಗಿ ಆಕಸ್ಮಿಕವಾಗಿ ಸಿಗುವ ಒಬ್ಬ ವಿದ್ಯಾರ್ಥಿಯನ್ನು ತನ್ನಲ್ಲಿಟ್ಟು ಕೊಂಡು ಸಾಕುತ್ತಾಳೆ. ಈತನೇ ಹಾನ್ ಜಿ. ಪ್ರತಿಭಾವಂತನಾಗಿರುವ ಈ ವಿದ್ಯಾರ್ಥಿಯ ಬದುಕಿಗೆ ಈಕೆ ಆಸರೆಯಾಗುತ್ತಾಳೆ. ತನ್ನ ಮೊಮ್ಮಗಳು ಸಿಯೋ ದಾಲ್ಮಿಯಲ್ಲಿ ಆತ್ಮ ಸ್ಥೈರ್ಯ ಮೂಡಿಸುವುದಕ್ಕಾಗಿ ಈಕೆ ತಾನು ಆಸರೆ ನೀಡಿರುವ ವಿದ್ಯಾರ್ಥಿ ಹಾನ್ ಕೈಯಿಂದ 'ನಾಮ್ ದೂಸಾನ್' ಹೆಸರಿನಲ್ಲಿ ಪ್ರೇಮ ಪತ್ರಗಳನ್ನು ಗುಟ್ಟಾಗಿ ಬರೆಸುತ್ತಾಳೆ. ಈ ಪ್ರೇಮ ಪತ್ರಕ್ಕೆ ಸಿಯೋ ದಾಲ್ಮಿ ಮಾರು ಹೋಗುತ್ತಾಳೆ ಮಾತ್ರವಲ್ಲ, ನಾಮ್ ದೂಸಾನ್ ಎನ್ನುವ ತರುಣನ ಕುರಿತಂತೆ ಕಲ್ಪನೆಗಳನ್ನು ಕಟ್ಟಲು ಶುರು ಹಚ್ಚುತ್ತಾಳೆ. ಇದರ ನಡುವೆ ಅನಾಥ ವಿದ್ಯಾರ್ಥಿ ಹಾನ್ ಒಂದು ಹಂತದಲ್ಲಿ ಅಜ್ಜಿಯನ್ನು ತೊರೆದು ಹೋಗಬೇಕಾಗುತ್ತದೆ. ಅಜ್ಜಿಯ ಅಪಾರ ಋಣ ಭಾರವನ್ನು ಹೊತ್ತುಕೊಂಡು ಆತ ಹೊಸ ಬದುಕನ್ನು ಹುಡುಕಿಕೊಂಡು ಮುಂದೆ ಸಾಗುತ್ತಾನೆ. ಮುಂದೆ, ಉದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡುತ್ತಾನೆ.

ಬಂಡವಾಳ ಹೂಡಿಕೆದಾರರಿಗೆ ಈತ ಮಾರ್ಗದರ್ಶಿಯಾಗಿ ಖ್ಯಾತನಾಗುತ್ತಾನೆ. ಹೀಗಿರುವಾಗ ಒಂದು ದಿನ ತನ್ನನ್ನು ವಿದ್ಯಾರ್ಥಿ ಕಾಲದಲ್ಲಿ ಪೊರೆದ ಅಜ್ಜಿಯನ್ನು ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ಆಗ ಆತ ತಾನು ಬೇರೆ ಹೆಸರಲ್ಲಿ ಪ್ರೇಮ ಪತ್ರ ಬರೆಯುತ್ತಿದ್ದ ಸಿಯೋ ದಾಲ್ಮಿಯನ್ನೂ ಭೇಟಿ ಮಾಡಬೇಕಾಗುತ್ತದೆ. ಆಕೆ ನಾಮ್ ದೂಸಾನ್ ಎನ್ನುವ ಹುಡುಗನನ್ನು ಈಗಲೂ ಪ್ರೀತಿಸುತ್ತಿರುವುದು ಅವನ ಅರಿವಿಗೆ ಬರುತ್ತದೆ. ಒಂದು ನಿರ್ಣಾಯಕ ಸಂದರ್ಭದಲ್ಲಿ ಅಜ್ಜಿ ಮತ್ತು ಹಾನ್‌ಗೆ ತಾವು ಸೃಷ್ಟಿಸಿದ 'ನಾಮ್ ದೂಸಾನ್' ಎನ್ನುವ ಹುಡುಗನನ್ನು ಮರು ಸೃಷ್ಟಿಸುವ ಸಂದರ್ಭ ಎದುರಾಗುತ್ತದೆ. ನಾಮ್ ದೂಸಾನ್ ಎನ್ನುವ ಹೆಸರಿನ ಹುಡುಗನನ್ನು ಹುಡುಕಿ ಆತನಿಗೆ ಹಳೆಯ ಪ್ರೇಮ ಪತ್ರಗಳ ಕತೆಯನ್ನು ಹೇಳಿ, ಸಿಯೋ ದಾಲ್ಮಿಯಳ ಮುಂದೆ ಪ್ರೇಮಿ ನಾಮ್ ದೂಸಾನ್ ಆಗಿ ನಟಿಸಲು ಒತ್ತಾಯ ಮಾಡುತ್ತಾರೆ. ಹೀಗೆ ಸಿಯೋ ದಾಲ್ಮಿ ಬದುಕಿನಲ್ಲಿ , ಪತ್ರದ ರೂಪದಲ್ಲಿದ್ದ ನಾಮ್ ದೂಸಾನ್ ಯುವಕನಾಗಿ ಪ್ರವೇಶಿಸುತ್ತಾನೆ. ಅಲ್ಲಿಂದ ತ್ರಿಕೋನ ಪ್ರೇಮ ಕತೆಯೊಂದು ತೆರೆದುಕೊಳ್ಳುತ್ತದೆ. ಯುವಕ ನಾಮ್ ದೂಸಾನ್ ಸಿಯೋ ದಾಲ್ಮಿಯ ಹೃದಯಕ್ಕೆ ಹತ್ತಿರವಾಗುತ್ತಿದ್ದಂತೆಯೇ, ಸಿಯೋ ದಾಲ್ಮಿ ಕುರಿತಂತೆ ಉದ್ಯಮಿ ಹಾನ್‌ಗೆ ಅಸೂಯೆ ಆರಂಭವಾಗುತ್ತದೆ. ತಾನೂ ಸಿಯೋ ದಾಲ್ಮಿಯನ್ನು ಪ್ರೀತಿಸುತ್ತಿರುವುದು ಅರಿವಿಗೆ ಬರುತ್ತದೆ. ಸಿಯೋ ದಾಲ್ಮಿ ಯಾರನ್ನು ಆಯ್ಕೆ ಮಾಡುತ್ತಾಳೆ ಎನ್ನುವುದು ಸರಣಿಯ ಕ್ಲೈಮಾಕ್ಸ್ ಗಳಲ್ಲಿ ಒಂದು.

ಈ ತ್ರಿಕೋನ ಪ್ರೇಮ ಕತೆಯ ವೇದಿಕೆ, ದಕ್ಷಿಣ ಕೊರಿಯಾದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾಗಿರುವ, ಯುವ ಉದ್ಯಮಿಗಳ ಪಾಲಿಗೆ ಉದ್ಯಮ ಕ್ಷೇತ್ರದ ಹೆಬ್ಬಾಗಿಲಾಗಿರುವ 'ಸ್ಯಾಂಡ್ ಬಾಕ್ಸ್'. ಯುವ ಉದ್ಯಮಿಗಳಿಗೆ ವೇದಿಕೆಯಾಗಿ, ಅವರ ಸಾಹಸಗಳಿಗೆ ಕೈ ಚಾಚುವ ಸ್ಯಾಂಡ್ ಬಾಕ್ಸ್‌ನೊಳಗೆ ಪ್ರವೇಶ ಪಡೆಯುವ ಸಿಯೋ ದಾಲ್ಮಿ, ಸಿಯೋ ಇನ್ ಜೆ, ನಾಮ್ ದೂಸಾನ್ ಮತ್ತು ಆತನ ಗೆಳೆಯರು ಇಲ್ಲಿ ತಮ್ಮ ಕನಸುಗಳನ್ನು ಹೇಗೆ ಸಾಕಾರಗೊಳಿಸುತ್ತಾರೆ ಎನ್ನುವುದನ್ನು ಕುತೂಹಲಕರವಾಗಿ ಕಟ್ಟಿಕೊಡಲಾಗಿದೆ. ಇವರಿಗೆ ಮಾರ್ಗದರ್ಶಿಯಾಗಿ ನಿಲ್ಲುವ ಹಾನ್ ಪಾತ್ರ ಕೂಡ ಆಹ್ಲಾದಕರವಾಗಿ ನಮ್ಮನ್ನು ಆವರಿಸುತ್ತದೆ. 'ಸ್ಯಾಂಡ್ ಬಾಕ್ಸ್' ನೊಳಗೆ ಸಿಯೋ ದಾಲ್ಮಿ ಮತ್ತು ಆಕೆಯ ಅಕ್ಕ ಸಿಯೋ ಇನ್ ಜೆ ನಡುವಿನ ಪೈಪೋಟಿ ನಿಧಾನಕ್ಕೆ ಬೇರೆ ಬೇರೆ ತಿರುವುಗಳನ್ನು ಪಡೆಯುತ್ತಾ ಹೋಗುತ್ತದೆ. ಉದ್ಯಮ ಕ್ಷೇತ್ರದಲ್ಲಿ ನಡೆಯುವ ಸ್ಪರ್ಧೆ, ರಾಜಕೀಯ, ಸಂಚುಗಳು, ಯುವ ಉದ್ಯಮಿಗಳ ಮುಂದಿರುವ ತೊಡಕುಗಳು ಇವೆಲ್ಲವನ್ನು ಅತ್ಯಂತ ಪರಿಣಾಮಕಾರಿಯಾಗಿ ಸರಣಿಯಲ್ಲಿ ಕಟ್ಟಿಕೊಡಲಾಗಿದೆ.

ಉದ್ಯಮ ಕ್ಷೇತ್ರದ ಚದುರಂಗದಾಟಗಳು ಸರಣಿಯನ್ನು ಕುತೂಹಲಕರವಾಗಿ ಬೆಳೆಸುತ್ತದೆ. ಉದ್ಯಮಿಗಳ ಅಂತಿಮ ಗುರಿ ಏನು? ಹಣ ಸಂಪಾದನೆಯೋ? ಜನ ಸಂಪಾದನೆಯೋ? ಎನ್ನುವ ಪ್ರಶ್ನೆಯನ್ನು ಪದೇ ಪದೇ ಈ ಸರಣಿ ಚರ್ಚಿಸುತ್ತದೆ. ಸಾಫ್ಟ್‌ವೇರ್‌ಗಳ ಸಂಶೋಧನೆಯಿಂದಾಗಿ ಉದ್ಯೋಗ ಕಳೆದುಕೊಳ್ಳುತ್ತಿರುವ ಶ್ರೀಸಾಮಾನ್ಯರ ಸಂಕಟಗಳ ಬಗ್ಗೆಯೂ ಸರಣಿ ಧ್ವನಿಯೆತ್ತುತ್ತದೆ. ಉದ್ಯಮದ ಅಂತಿಮ ಗುರಿ ಜಗತ್ತನ್ನು ಬದಲಿಸುವುದು ಮಾತ್ರವಲ್ಲ, ಸಂಕಟದಲ್ಲಿರುವ ಜನಸಮೂಹಕ್ಕೆ ನೆರವಾಗುವುದು ಕೂಡ ಎನ್ನುವುದನ್ನು ಅಜ್ಜಿ ಚಾಯ್ ವನ್ ಮೂಲಕ ಸರಣಿ ಪ್ರತಿಪಾದಿಸುತ್ತದೆ. ಮೈ ಲವ್ ಫ್ರಮ್ ದ ಸ್ಟಾರ್, ವೈಲ್ ಯೂ ಆರ್ ಸ್ಲೀಪಿಂಗ್ ಮೂಲಕ ಗುರುತಿಸಿಕೊಂಡ ಒಹ್ ಚೂಂಗ್ ಹ್ವಾನ್ ಸರಣಿಯ ನಿರ್ದೇಶಕ. ಯುವ ತಲೆಮಾರನ್ನು ಕೇಂದ್ರವಾಗಿಟ್ಟುಕೊಂಡು ಸರಣಿಯನ್ನು ಹೆಣೆಯಲಾಗಿದೆ. ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಿರುವ ದಕ್ಷಿಣ ಕೊರಿಯಾದ ಸಿಲಿಕಾನ್ ಜಗತ್ತನ್ನು ಸ್ಫೂರ್ತಿದಾಯಕವಾಗಿ ಈ ಸರಣಿ ಪರಿಚಯಿಸುತ್ತದೆ. 16 ಕಂತುಗಳನ್ನು ಹೊಂದಿರುವ ಈ ಡ್ರಾಮವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

Writer - -ಮುಸಾಫಿರ್

contributor

Editor - -ಮುಸಾಫಿರ್

contributor

Similar News