​ಹಠಾತ್ ಸಾವುಗಳು ಹೆಚ್ಚಳ: ಕೋವಿಡ್ ಪರಿಣಾಮವೆ?

Update: 2023-01-29 12:36 GMT

2020ರ ಅಂಕಿಂಶಗಳ ಪ್ರಕಾರ, ಆ ವರ್ಷ ಪ್ರತಿದಿನವೂ 18ರೊಳಗಿನ ಕನಿಷ್ಠ ನಾಲ್ವರು ಹಠಾತ್ ಸಾವಿಗೆ ತುತ್ತಾಗಿದ್ದಾರೆ. ಎಲ್ಲ ವಯೋಮಾನದ ಸುಮಾರು 50 ಸಾವಿರ ಮಂದಿ ಹಾಗೆ ಸಾವನ್ನಪ್ಪಿದ್ದಾರೆ. ಗಂಟೆಗೆ ಸರಾಸರಿ 5 ಸಾವುಗಳ ಲೆಕ್ಕದಲ್ಲಿ ದಿಢೀರ್ ಸಾವು ಸಂಭವಿಸಿದೆ. ಇವುಗಳಲ್ಲಿ ಶೇ.57ರಷ್ಟು ಸಾವುಗಳಿಗೆ ಹೃದಯಾಘಾತವೇ ಮುಖ್ಯ ಕಾರಣ.

ಮೊನ್ನೆ ಇಂದೋರ್‌ನಲ್ಲಿ 16 ವರ್ಷದ ಬಾಲಕಿ ಶಾಲೆಯಲ್ಲಿ ಸ್ನೇಹಿತೆಯರೊಂದಿಗೆ ಆಟವಾಡುತ್ತಿದ್ದಾಗಲೇ ಮೈದಾನದಲ್ಲಿ ಕುಸಿದುಬಿದ್ದು ಪ್ರಾಣ ಕಳೆದುಕೊಂಡಳು. ಕಳೆದ ವಾರ ಉಡುಪಿಯಲ್ಲಿ 23 ವರ್ಷದ ಯುವತಿಯೊಬ್ಬರು ಕುಸಿದುಬಿದ್ದು ಹಠಾತ್ ಸಾವನ್ನಪ್ಪಿದರು. ಇದಕ್ಕೂ ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡದಲ್ಲಿಯೇ ಸುಮಾರು 20ರ ಯುವತಿ ಗೆಳತಿಯರೊಂದಿಗೆ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗಲೇ ಇದೇ ರೀತಿ ಕುಸಿದುಬಿದ್ದು ಕೊನೆಯುಸಿರೆಳೆದಿದ್ದರು. ಯಕ್ಷಗಾನ ಕಲಾವಿದರೊಬ್ಬರು ವೇಷ ಧರಿಸಿ ರಂಗಸ್ಥಳದ ಮೇಲಿರುವಾಗಲೇ ಇಂಥದೇ ಸಾವು ಕಂಡಿದ್ದರು. ಲಕ್ನೋದಲ್ಲಿ 20ರ ಯುವತಿ ತನ್ನ ಮದುವೆ ಸಮಾರಂಭದಲ್ಲಿ ವರನಿಗೆ ಹಾರ ಹಾಕುತ್ತಿರುವಾಗಲೇ ಕುಸಿದುಬಿದ್ದು ಪ್ರಾಣ ಕಳೆದುಕೊಂಡದ್ದು ವರದಿಯಾಗಿತ್ತು. ಉತ್ತರ ಪ್ರದೇಶದ ಕಾನ್ಪುರದಲ್ಲಿ ಕ್ರಿಕೆಟ್ ಆಡುತ್ತಿರುವಾಗ 16 ವರ್ಷದ ಹುಡುಗ ಹಠಾತ್ ಸಾವನ್ನಪ್ಪಿದ್ದ. ನೃತ್ಯ ಕಾರ್ಯಕ್ರಮವೊಂದರಲ್ಲಿ 35 ವರ್ಷದ ವ್ಯಕ್ತಿ ಹೀಗೆಯೇ ಸಾವಿಗೀಡಾಗಿದ್ದರು.

ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ಅಗಲುವಿಕೆ, ಅದಕ್ಕಿಂತ ಮೊದಲು ಚಿರಂಜೀವಿ ಸರ್ಜಾ ನಿಧನ ಎಲ್ಲರನ್ನೂ ಕಾಡಿತ್ತು. ಹಿಂದಿ ಕಿರುತೆರೆ ನಟ ಸಿದ್ಧಾರ್ಥ ಶುಕ್ಲಾ, ಸಿದ್ಧಾರ್ಥ ಸೂರ್ಯವಂಶಿ, ಕಾಮಿಡಿಯನ್ ರಾಜು ಶ್ರೀವಾಸ್ತವ ಆರೋಗ್ಯವಾಗಿಯೇ ಇದ್ದವರು ದಿಢೀರನೇ ಸಾವಿಗೀಡಾಗಿದ್ದು ಈಚೆಗೆ ವರದಿಯಾಗಿತ್ತು.

ಒಂದಲ್ಲ ಎರಡಲ್ಲ, ಇಂತಹ ಹಲವಾರು ಹಠಾತ್ ಸಾವುಗಳ ಬಗ್ಗೆ ಈಚಿನ ಕೆಲ ದಿನಗಳಲ್ಲಿ ದಿನಬೆಳಗಾದರೆ ಕೇಳುತ್ತಿದ್ದೇವೆ. ಈಗಿದ್ದವರು ಈಗಿಲ್ಲ ಎನ್ನುವಂಥ ಆಘಾತಕಾರಿ ರೀತಿಯಲ್ಲಿ ಸಾವುಗಳು ಹಠಾತ್ತಾಗಿ ಸಂಭವಿಸುವುದು ಜಾಸ್ತಿಯಾಗಿದೆ. ಹೃದಯಾಘಾತ, ಹೃದಯಸ್ತಂಭನ ಪ್ರಕರಣಗಳು, ಹಠಾತ್ ಕುಸಿದು ಸಂಭವಿಸುವ ಸಾವುಗಳು, ಬ್ರೈನ್ ಸ್ಟ್ರೋಕ್‌ನಂತಹ ಪ್ರಕರಣಗಳು ದೇಶಾದ್ಯಂತ ಭಾರೀ ದೊಡ್ಡ ಪ್ರಮಾಣದಲ್ಲಿ ವರದಿಯಾಗುತ್ತಿವೆ. ವಿದೇಶಗಳಲ್ಲೂ ಇದು ಸಂಭವಿಸುತ್ತಿದೆ. ಇವೆಲ್ಲವೂ ಯಾವ ಮುನ್ಸೂಚನೆಯೂ ಇಲ್ಲದೆ ಬರುತ್ತಿರುವ ಸಾವುಗಳು. ಆರೋಗ್ಯವಂತರು, ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದವರು ಸಾಯುವ ವಯಸ್ಸಲ್ಲದ ವಯಸ್ಸಿನಲ್ಲಿ ದಿಢೀರನೆ ಕುಸಿದು ಬಿದ್ದು ಸಾಯುತ್ತಿದ್ದಾರೆ.

ಸೆಲೆಬ್ರಿಟಿಗಳು ಅಕಾಲಿಕ ಸಾವಿಗೀಡಾದಾಗ, ಕೆಲವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಹೊತ್ತಲ್ಲಿ ಹಠಾತ್ ಸಾವನ್ನಪ್ಪಿದಾಗ, ದೇಹವನ್ನು ಅತಿಯಾಗಿ ದಂಡಿಸುವುದರಿಂದ ಹೀಗಾಗುತ್ತದೆಯೇ ಎಂಬ ಪ್ರಶ್ನೆಗಳೂ ಏಳುವುದುಂಟು. ಆದರೆ, ಅಂತಹ ಯಾವುದೇ ಚಟುವಟಿಕೆ ಮಾಡದ ಸಾಮಾನ್ಯರೂ ಅಲ್ಲಲ್ಲಿ ಹೀಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ವಯಸ್ಸಿನವರು, ಯಾವುದೇ ಗಂಭೀರ ಅರೋಗ್ಯ ಸಮಸ್ಯೆ ಇಲ್ಲದವರು ಹೀಗೆ ದಿಢೀರ್ ಸಾವಿಗೀಡಾಗುತ್ತಿರುವುದಕ್ಕೆ ಕಾರಣಗಳೇನೆಂಬುದೇ ಬಗೆಹರಿಯದ ಪ್ರಶ್ನೆ. ಸಾಮಾನ್ಯವಾಗಿ ಇಂತಹ ಸಾವುಗಳು ಹೃದಯಾಘಾತ, ಹೃದಯಸ್ತಂಭನದಿಂದಾಗಿ ಹೆಚ್ಚಾಗಿ ಸಂಭವಿಸುತ್ತವೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಮೆದುಳಿನ ರಕ್ತಸ್ರಾವ ಮತ್ತಿತರ ಸಾಮಾನ್ಯವಲ್ಲದ ಕೆಲವು ಕಾರಣಗಳೂ ಇರುವುದನ್ನು ವೈದ್ಯರು ಗಮನಿಸಿದ್ದಾರೆ.

ಕಳೆದ ಎರಡು ಮೂರು ವರ್ಷಗಳಲ್ಲಿ ಇಂತಹ ಸಾವು ಅತಿಯಾಗಿ ಆಗುತ್ತಿರುವುದರ ಹಿಂದೆ ದೀರ್ಘ ಕೋವಿಡ್ ಪರಿಣಾಮ ಇರಲೂಬಹುದು ಎಂಬ ಅನುಮಾನಗಳೂ ಇವೆ. ಕೆಲವರು ಕೋವಿಡ್ ಲಸಿಕೆಯ ಮೇಲೂ ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ಆ ಆರೋಪಗಳಿಗೆ ಕರಾರುವಾಕ್ಕಾದ ಆಧಾರಗಳಿಲ್ಲ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಎಲ್ಲವನ್ನೂ ಹೃದಯಾಘಾತ ಎನ್ನಲಾಗುತ್ತದಾದರೂ, ಹೃದಯಾಘಾತ ಮತ್ತು ಹೃದಯಸ್ತಂಭನ ಎರಡೂ ಬೇರೆ ಬೇರೆ. ಪರಿಣಿತರು ವಿವರಿಸುವಂತೆ, ಹೃದಯಾಘಾತ ಅನ್ನುವುದು ಹೃದಯಕ್ಕೆ ರಕ್ತಸಂಚಾರ ನಿಲ್ಲುವುದರಿಂದ ಸಂಭವಿಸುವುದು. ಇದರಲ್ಲಿ ಮುನ್ಸೂಚನೆಗಳಾದರೂ ಇರುತ್ತವೆ. ಆದರೆ ಹೃದಯಬಡಿತ ಅಸಮರ್ಪಕವಾಗಿ ಕಡೆಗೆ ಹಠಾತ್ತನೆ ನಿಂತುಹೋಗುವುದು ಹೃದಯಸ್ತಂಭನ. ಇದು ಯಾವ ಮುನ್ಸೂಚನೆಯೂ ಇಲ್ಲದೆ ಆಗಿಬಿಡುತ್ತದೆ. 10ರಲ್ಲಿ 9 ಮಂದಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಾವನ್ನಪ್ಪುವುದು ಈ ಕಾರಣದಿಂದಲೇ. ಹೃದಯಾಘಾತವಾದ ಕೆಲ ಹೊತ್ತಿನಲ್ಲಿ ಹೃದಯಸ್ತಂಭನವಾಗುವ ಸಂದರ್ಭಗಳೂ ಇವೆ.

2020ರ ಅಂಕಿಂಶಗಳ ಪ್ರಕಾರ, ಆ ವರ್ಷ ಪ್ರತಿದಿನವೂ 18ರೊಳಗಿನ ಕನಿಷ್ಠ ನಾಲ್ವರು ಹಠಾತ್ ಸಾವಿಗೆ ತುತ್ತಾಗಿದ್ದಾರೆ. ಎಲ್ಲ ವಯೋಮಾನದ ಸುಮಾರು 50 ಸಾವಿರ ಮಂದಿ ಹಾಗೆ ಸಾವನ್ನಪ್ಪಿದ್ದಾರೆ. ಗಂಟೆಗೆ ಸರಾಸರಿ 5 ಸಾವುಗಳ ಲೆಕ್ಕದಲ್ಲಿ ದಿಢೀರ್ ಸಾವು ಸಂಭವಿಸಿದೆ. ಇವುಗಳಲ್ಲಿ ಶೇ.57ರಷ್ಟು ಸಾವುಗಳಿಗೆ ಹೃದಯಾಘಾತವೇ ಮುಖ್ಯ ಕಾರಣ.

ಹಠಾತ್ ಸಾವುಗಳು 2020ರಲ್ಲಿ ಅದರ ಹಿಂದಿನ ವರ್ಷಕ್ಕಿಂತ ಶೇ.6ರಷ್ಟು ಹೆಚ್ಚಿದ್ದವು ಎಂದೂ ಅಂಕಿಅಂಶಗಳು ಹೇಳುತ್ತಿವೆ. 2019ರಲ್ಲಿ ಶೇ.2.8ರಷ್ಟಿದ್ದ ಹಠಾತ್ ಸಾವುಗಳು 2020ರಲ್ಲಿ ಎರಡು ಪಟ್ಟಿಗಿಂತ ಹೆಚ್ಚಾಗಿದ್ದವು. ಇಂತಹ ಹಠಾತ್ ಸಾವುಗಳು 2016ರಿಂದಲೇ ನಿಧಾನವಾಗಿ ಏರಿಕೆಯಾಗುತ್ತ ಬಂದವು ಎನ್ನುತ್ತದೆ ವರದಿ.

2016ರ ಜನವರಿ 1ರಿಂದ 2020ರ ಡಿಸೆಂಬರ್ 31ರವರೆಗೆ ಸುಮಾರು 2.3 ಲಕ್ಷ ಜನರು ಹಠಾತ್ ಸಾವಿಗೆ ತುತ್ತಾದರು. ಅವರಲ್ಲಿ ಶೇ.56ರಷ್ಟು ಅಂದರೆ 1.2 ಲಕ್ಷಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದು ಹೃದಯಾಘಾತದಿಂದ.

2020ರಲ್ಲಿ ಹಠಾತ್ ಸಾವಿಗೀಡಾದವರಲ್ಲಿ ಶೇ.3ರಷ್ಟು ಮಂದಿ 18 ವರ್ಷದೊಳಗಿನವರಾಗಿದ್ದರು. ಸುಮಾರು ಶೇ.2ರಷ್ಟು ಮಂದಿ 14ರೊಳಗಿನವರಾಗಿದ್ದರು.

2016ರಿಂದ 2020ರ ಅವಧಿಯಲ್ಲಿ ಹೆಚ್ಚಿನ ಹಠಾತ್ ಸಾವುಗಳು ವರದಿಯಾಗಿದ್ದು 45ರಿಂದ 59ರ ವಯೋಮಾನದವರಲ್ಲಿ. ಈ ಪ್ರಮಾಣ ಶೇ.35ರಷ್ಟಿತ್ತು. 30ರಿಂದ 44ರ ವಯೋಮಾನದವರ ಸಾವಿನ ಪ್ರಮಾಣ ಶೇ.29 ಇತ್ತು. 60 ಮತ್ತು ಮೇಲ್ಪಟ್ಟವರ ಹಠಾತ್ ಸಾವಿನ ಪ್ರಮಾಣ ಶೇ.20.5ರಷ್ಟಿತ್ತು.

ವರದಿಗಳ ಪ್ರಕಾರ 2016ರಿಂದ ಸಂಭವಿಸಿದ ಇಂತಹ ಹಠಾತ್ ಸಾವುಗಳಲ್ಲಿ ಮೂರನೇ ಎರಡರಷ್ಟು ಸಾವುಗಳು ಮಹಾರಾಷ್ಟ್ರ, ಕರ್ನಾಟಕ, ಕೇರಳ, ಮಧ್ಯಪ್ರದೇಶ ಮತ್ತು ಗುಜರಾತ್ ಈ ಐದು ರಾಜ್ಯಗಳಲ್ಲಿಯೇ ಸಂಭವಿಸಿದ್ದವು. ಮಹಾರಾಷ್ಟ್ರದಲ್ಲಿ 73,144 ಹಠಾತ್ ಸಾವುಗಳಾದರೆ, ಕರ್ನಾಟಕದಲ್ಲಿ 23,020, ಕೇರಳದಲ್ಲಿ 20,693, ಮಧ್ಯಪ್ರದೇಶದಲ್ಲಿ 18,546 ಹಾಗೂ ಗುಜರಾತ್‌ನಲ್ಲಿ 15,882 ಸಾವುಗಳು ಸಂಭವಿಸಿವೆ. ಇವುಗಳ ನಂತರದ ಸ್ಥಾನದಲ್ಲಿ ತಮಿಳುನಾಡು (12,494) ಮತ್ತು ರಾಜಸ್ಥಾನ(11,517) ಇದ್ದವು.

2020ರ ನಂತರದ ಈ ಕುರಿತ ಸ್ಪಷ್ಟ ಅಂಕಿ ಅಂಶಗಳು ಇನ್ನೂ ಲಭ್ಯವಿಲ್ಲ.

ಕೋವಿಡ್ ನಂತರದ ಅವಧಿಯಲ್ಲಿ ಇಂಥ ಹಠಾತ್ ಸಾವುಗಳು ಸಂಭವಿಸುತ್ತಿರುವುದು ಹೆಚ್ಚಿರುವುದರಿಂದ ಕೋವಿಡ್‌ಗೂ ಹಠಾತ್ ಸಾವುಗಳಿಗೂ ಸಂಬಂಧ ಇದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ಇತ್ತೀಚೆಗೆ ದಿಲ್ಲಿ ಮಹಿಳಾ ಆಯೋಗ ಈ ಬಗ್ಗೆ ಸೂಕ್ತ ಅಧ್ಯಯನಗಳು ಆಗಬೇಕು ಎಂದು ಸರಕಾರವನ್ನು ಕೇಳಿತ್ತು. ವೈದ್ಯರು ಅದರಲ್ಲೂ ವಿಶೇಷವಾಗಿ ಹೃದಯ ತಜ್ಞರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ಅಂಕಿ ಅಂಶಗಳು ಇಲ್ಲದಿದ್ದರೂ ಒಟ್ಟಾರೆ ಚಿತ್ರಣ ದಿಢೀರ್ ಸಾವುಗಳು ಬಹಳ ಹೆಚ್ಚಾಗಿರುವುದನ್ನೇ ತೋರಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಹೃದಯದ ಕಾಯಿಲೆಯ ಯಾವುದೇ ಲಕ್ಷಣಗಳಿಲ್ಲದ ಯುವಜನರು ದಿಢೀರ್ ಹೃದಯಾಘಾತವಾಗಿ ಮೃತಪಟ್ಟರೆ ಅವರ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಲು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ, ದಿಲ್ಲಿಯ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ. ಸುಧೀರ್ ಗುಪ್ತಾ. ಕೋವಿಡ್ ಸಮಯದಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾದ ಪರಿಣಾಮ ಹೃದಯಸ್ತಂಭನ ಅಥವಾ ಹೃದಯಾಘಾತದ ಅಪಾಯ ಹೆಚ್ಚಿತೆಂಬ ವಾದಗಳಿವೆ.

ರಾಜ್ಯದ 30ರಿಂದ 55 ವರ್ಷದೊಳಗಿನವರಲ್ಲಿ ಹೃದಯಾಘಾತ ಹೆಚ್ಚುತ್ತಿರುವುದು ಮತ್ತು ಅದನ್ನು ತಡೆಯಲು ಸರಕಾರ ಯಾವುದೇ ರಚನಾತ್ಮಕ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಗೆ ಪತ್ರ ಬರೆದಿದ್ದರು. ಕುಟುಂಬದ ಆಧಾರಸ್ತಂಭವಾಗಿದ್ದ ಆರೋಗ್ಯವಂತರು ಹೀಗೆ ದಿಢೀರನೆ ಅಗಲಿದರೆ ಸಾಮಾಜಿಕ ಆರ್ಥಿಕ ಕ್ಷೋಭೆಗೆ ಕಾರಣವಾಗುವ ಅಪಾಯವಿದೆ. ಈ ಸಾವುಗಳಿಗೆ ಕೋವಿಡ್‌ನ ದೀರ್ಘಕಾಲಿಕ ಪರಿಣಾಮಗಳು ಅಥವಾ ಕೋವಿಡ್ ಲಸಿಕೆ ಅಥವಾ ಮಾನಸಿಕ ಒತ್ತಡ ಕಾರಣವಿರಬಹುದು ಎಂದು ಜನರಲ್ಲಿ ಸಂಶಯಗಳು ಬೆಳೆಯುತ್ತಿವೆ. ಹಾಗಾಗಿ ಈ ಬಗ್ಗೆ ಗಂಭೀರ ಅಧ್ಯಯನ ನಡೆಯಬೇಕು ಎಂದು ಅವರು ಆಗ್ರಹಿಸಿದ್ದರು. ಆದರೆ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡ ವರದಿಗಳಿಲ್ಲ.

ಒಕ್ಕೂಟ ಸರಕಾರ ಹಾಗೂ ರಾಜ್ಯ ಸರಕಾರದ ಅರೋಗ್ಯ ಸಚಿವರಿಗೂ ಈ ಗಂಭೀರ ಸಮಸ್ಯೆಗೂ ಸಂಬಂಧವೇ ಇಲ್ಲವೇ? ದಿನಬೆಳಗಾದರೆ ಇಂತಹ ಸುದ್ದಿ ದೇಶಾದ್ಯಂತ, ಇಲ್ಲಿ ನಮ್ಮ ರಾಜ್ಯದಲ್ಲೂ ಬರುತ್ತಲೇ ಇದ್ದರೂ ಅವರು ಯಾಕೆ ಇದನ್ನು ಗಮನಿಸುವುದೇ ಇಲ್ಲ. ಆರೋಗ್ಯವಂತ ಪ್ರಜೆಗಳು ಹೀಗೆ ದಿಢೀರ್ ಅಂತ ಕುಸಿದು ಬಿದ್ದು ಪ್ರಾಣ ಕಳೆದುಕೊಳ್ಳುವುದು ನಮ್ಮ ಸಮಾಜಕ್ಕೆ, ನಮ್ಮ ಸರಕಾರಕ್ಕೆ ಪರಿಗಣನೆಗೆ ಅರ್ಹ ವಿಷಯವೇ ಅಲ್ಲವೆಂದರೆ ಅದು ಆರೋಗ್ಯಕರ ಸ್ಥಿತಿಯಂತೂ ಅಲ್ಲ. ಅದು ನಮ್ಮ ಒಟ್ಟು ಸಾಮಾಜಿಕ ವ್ಯವಸ್ಥೆ ಕುಸಿದು ಬಿದ್ದಿರುವುದರ ಸಂಕೇತ. ಮನಸ್ಸು ಕಾಯಿಲೆ ಪೀಡಿತವಾಗಿರುವ ಲಕ್ಷಣ ಅದು.

Similar News