ಶಿಕ್ಷಣ ಕ್ರಾಂತಿ

Update: 2023-01-29 06:41 GMT

ಸರಕಾರಿ ಶಾಲೆಗಳು ವರ್ಸಸ್ ಖಾಸಗಿ ಶಾಲೆಗಳು. ಈ ತಾರತಮ್ಯದ ಮೇಲೆ ಬೆಳಕು ಚೆಲ್ಲುವ ಸಿನೆಮಾಗಳು ನಮ್ಮಲ್ಲಿ ಈಗಾಗಲೇ ಬಂದುಹೋಗಿವೆ. ಅಂಥದ್ದೇ ಒಂದು ವಿಷಯ ಇಟ್ಟುಕೊಂಡು ಬಂದ ಸಿನೆಮಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’. ಗಣರಾಜ್ಯೋತ್ಸವದಂದು ಬಿಡುಗಡೆಯಾದ ಕ್ರಾಂತಿ, ಚಂದನವನದಲ್ಲಿ ಇತಿಹಾಸ ಸೃಷ್ಟಿಸುತ್ತದೆ ಅನ್ನೋ ನಂಬಿಕೆಯಿಂದಲೇ ಅಭಿಮಾನಿಗಳು ಕಾಯುತ್ತಿದ್ದರು. ಅದರಲ್ಲೂ ಸೆಲಬ್ರಿಟಿಗಳು ಎಂದು ನಾಯಕ ದರ್ಶನ್ ಕರೆಯುವ ಅಭಿಮಾನಿಗಳಂತೂ ‘ಕ್ರಾಂತಿ’ಯ ತೇರೆಳೆದರು. ಅಂದುಕೊಂಡ ಹಾಗೆ ಕ್ರಾಂತಿ ಸಿನೆಮಾ ಒಂದು ಸಾಮಾಜಿಕ ಸಂದೇಶ ಹೊತ್ತು ತಂದಿದೆ. ಶಿಕ್ಷಣ ಕ್ರಾಂತಿಯ ಮಹತ್ವ ತಿಳಿಸಿದೆ. ಸರಕಾರಿ ಶಾಲೆಗಳ ಸ್ಥಿತಿಗತಿ, ಸರಕಾರಿ ಶಾಲೆಗಳನ್ನು ಉಳಿಸಿ ಎನ್ನುವ ಅಭಿಯಾನ ಎಲ್ಲದರ ಮೇಲೂ ಬೆಳಕು ಚೆಲ್ಲಿದೆ.

ದರ್ಶನ್ ಸಿನೆಮಾಗಳು ಅಂದರೆ ಔಟ್ ಆ್ಯಂಡ್ ಔಟ್ ಮಾಸ್ ಸಬ್ಜೆಕ್ಟ್ ಇರುತ್ತದೆ. ಅಂಥ ಮಾಸ್ ನಾಯಕನಿಂದ ಮೆಸೇಜ್ ಓರಿಯೆಂಟೆಡ್ ಸಿನೆಮಾ ಮಾಡಿಸಿರುವುದು ಅವರ ಕೆಲವು ಅಭಿಮಾನಿಗಳಿಗೆ ಬೇಸರವಾಗಿದೆ. ಅದರಲ್ಲೂ ಒಳ್ಳೆಯ ಸಬ್ಜೆಕ್ಟ್ ಇರುವ ಕಥೆಯ ಬಗ್ಗೆ ಇನ್ನೂ ಸ್ವಲ್ಪಗಮನ ಕೊಟ್ಟಿದ್ದರೆ ಚಿತ್ರ, ಶಿಕ್ಷಣ ಕ್ರಾಂತಿಯನ್ನೇ ಆರಂಭಿಸುತ್ತಿತ್ತು ಅನ್ನಿಸದೆ ಇರುವುದಿಲ್ಲ. ಯಾಕೆಂದರೆ ಕಥೆ ಚೆನ್ನಾಗಿದೆ, ಪ್ರಸಕ್ತ ಶಿಕ್ಷಣ ವ್ಯವಸ್ಥೆಯನ್ನು ಬಿಂಬಿಸುತ್ತಿದೆ. ಆದರೆ ನಿರೂಪಣೆಯಲ್ಲಿ ನಿರ್ದೇಶಕ ಹರಿಕೃಷ್ಣ ಸ್ವಲ್ಪ ಜಾಗರೂಕತೆ ವಹಿಸಿದ್ದರೂ ಸಿನೆಮಾ ಇನ್ನೂ ಚೆನ್ನಾಗಿ ಮೂಡಿಬಂದಿರುತ್ತಿತ್ತು ಎಂದು ಅನ್ನಿಸದೆ ಇರುವುದಿಲ್ಲ.

ಎನ್‌ಆದರ್‌ಐ ಕ್ರಾಂತಿ ರಾಯಣ್ಣ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದಾರೆ. ತಾನು ಕಲಿತ ಶಾಲೆಯ ಸಮಾರಂಭಕ್ಕೆ ಬರುವ ನಾಯಕ, ಆ ಶಾಲೆಯ ಅಂದಿನ ಸ್ಥಿತಿಗೆ ಮರುಗುತ್ತಾನೆ. ಹೇಗಾದರೂ ಮಾಡಿ, ತಾನು ಕಲಿತ ಶಾಲೆಯನ್ನು ಉಳಿಸಿಕೊಳ್ಳಬೇಕೆಂದು ಪಣ ತೊಡುತ್ತಾನೆ. ತನ್ನ ಶಾಲೆಯ ವಿಷಯಕ್ಕೆ ಶುರುವಾದ ಶೈಕ್ಷಣಿಕ ಕ್ರಾಂತಿ, ಇಡೀ ಸರಕಾರಿ ಶಾಲೆಗಳತ್ತ ಹೊರಳುತ್ತದೆ. ನಾಯಕ ಕಲಿತ ಶಾಲೆಯಲ್ಲಿ ಎದುರಾಗಿರುವ ಸಮಸ್ಯೆ ಕೇವಲ ಅದೊಂದೇ ಶಾಲೆಗೆ ಸೀಮಿತವಾಗಿಲ್ಲ. ಬದಲಾಗಿ ಸರಕಾರಿ ಶಾಲೆಗಳ ಸಮಸ್ಯೆಯಿದು ಅನ್ನೋದನ್ನು ಅರಿತ ನಾಯಕ ಶಿಕ್ಷಣ ಮಾಫಿಯಾದ ವಿರುದ್ಧ ಸಿಡಿದು ನಿಲ್ಲುತ್ತಾನೆ.

ಪ್ರಾರಂಭದಲ್ಲಿ ಸಿನೆಮಾದ ಕಥೆಯ ಮೇಲೆ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ಮುಂದೇನಾಗಬಹುದು ಅನ್ನೋ ಕುತೂಹಲ ಹೆಚ್ಚಾಗುತ್ತಾ ಹೋಗುತ್ತದೆ. ಕಥೆ ಸಾಗುತ್ತಾ ಸಾಗುತ್ತಾ, ಕಮರ್ಷಿಯಲ್ ಎಲಿಮೆಂಟ್ಸ್ ಎಂಟ್ರಿಯಿಂದ ಸ್ವಲ್ಪ ದಾರಿತಪ್ಪಿದ ಅನುಭವವೂ ಆಗುತ್ತದೆ. ಇಂಟ್ರವಲ್ ಸಮಯಕ್ಕೆ ಪ್ರೇಕ್ಷಕರಿಗೆ ಸಿನೆಮಾದ ಬಗ್ಗೆ ಒಂದು ಚಿತ್ರಣ ಸಿಕ್ಕಿಬಿಡುತ್ತದೆ. ಒಳ್ಳೆಯ ಉದ್ದೇಶದಿಂದ ಮಾಡಿದ ಕಥೆಯಿದು ಅನ್ನುವ ಅಭಿಪ್ರಾಯದ ಜೊತೆ ಜೊತೆಗೆ ಇನ್ನೂ ಸ್ವಲ್ಪ ವರ್ಕೌಟ್ ಮಾಡಿದ್ದರೆ ಕಥೆಯ ಗತ್ತೇ ಬದಲಾಗುತ್ತಿತ್ತು ಅನ್ನುವ ಅಭಿಪ್ರಾಯ ಕೂಡ ಬಂದೇ ಬರುತ್ತದೆ. ಯಾಕೆಂದರೆ ದರ್ಶನ್‌ರಂತಹ ಮಾಸ್ ನಾಯಕನನ್ನು ಹಾಕಿಕೊಂಡು ಸಿನೆಮಾ ಮಾಡಿದ ಮೇಲೆ ಆ ನಿರೀಕ್ಷೆಯೇ ಬೇರೆ. ಸ್ವಲ್ಪ ಮಟ್ಟಿಗೆ ಆ ನಿರೀಕ್ಷೆ ನಿರಾಸೆ ಮೂಡಿಸುವುದಂತೂ ಸುಳ್ಳಲ್ಲ.

ಸರಕಾರಿ ಶಾಲೆಗಳ ಬಗ್ಗೆ ನಿರ್ದೇಶಕರಿಗೆ ಅರಿವಿದೆ. ಜೊತೆಗೆ ಖಾಸಗಿ ಶಾಲೆಗಳ ಮಾಫಿಯಾ ಬಗ್ಗೆಯೂ ಚೆನ್ನಾಗಿಯೇ ತಿಳಿದುಕೊಂಡು ಸಿನೆಮಾ ಮಾಡಿದ್ದಾರೆ. ಆದರೆ ಅದನ್ನು ನಿರೂಪಣೆ ಮಾಡುವಲ್ಲಿ ಇನ್ನೂ ಸ್ವಲ್ಪ ಗಮನ ಕೊಟ್ಟಿದ್ದರೆ ದರ್ಶನ್ ಅಭಿಮಾನಿಗಳಿಗೆ ಹಬ್ಬವೇ ಆಗುತ್ತಿತ್ತು. ಥಿಯೇಟರ್‌ನಿಂದ ಹೊರಬರುವಾಗ ಸಿನೆಮಾದ ಕಥೆಯನ್ನು ಮೆಲುಕು ಹಾಕಬಹುದಿತ್ತು. ಆದರೆ ಆ ವಿಷಯದಲ್ಲಿ ನಿರ್ದೇಶಕ ಹರಿಕೃಷ್ಣ ಸ್ವಲ್ಪಎಡವಿದ್ದಾರೆ. ಚಿತ್ರದ ಹಾಡುಗಳು ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡುತ್ತವೆ. ದರ್ಶನ್ ಅಭಿಮಾನಿಗಳು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ. ನಿರ್ದೇಶನದ ಜೊತೆಗೆ ಹರಿಕೃಷ್ಣ ಅವರೇ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಹರಿಕೃಷ್ಣಗೆ ಸಿನೆಮಾ ನಿರ್ದೇಶನಕ್ಕಿಂತ, ಸಂಗೀತ ನಿರ್ದೇಶನಕ್ಕೆ ಹೆಚ್ಚಿನ ಮಾರ್ಕ್ಸ್ ಸಿಗುತ್ತದೆ.

ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ನಾಯಕ ಕ್ರಾಂತಿ ತಂದೆಯ ಪಾತ್ರದಲ್ಲಿ ರವಿಚಂದ್ರನ್ ಗಮನ ಸೆಳೆಯುತ್ತಾರೆ. ಅಲ್ಲದೆ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿರುವ ಸುಮಲತಾ, ಚಿಕ್ಕ ಪಾತ್ರವಾದರೂ ಜೀವ ತುಂಬಿದ್ದಾರೆ. ನಾಯಕಿ ರಚಿತಾರಾಮ್, ಚಿತ್ರದ ಗ್ಲಾಮರ್ ಹೆಚ್ಚಿಸಿದ್ದಾರೆ. ಬಿ. ಸುರೇಶ್, ಅಚ್ಯುತ್ ಕುಮಾರ್, ಉಮಾಶ್ರೀ, ಸಾಧುಕೋಕಿಲಾ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರವಿಶಂಕರ್ ಪಾತ್ರ ಎಲ್ಲರ ಗಮನ ಸೆಳೆಯುತ್ತದೆ. ನ್ಯೂನತೆಗಳು ಏನೇ ಇದ್ದರೂ ಕ್ರಾಂತಿ ಒಂದು ಒಳ್ಳೆಯ ಉದ್ದೇಶ ಮತ್ತು ಒಳ್ಳೆಯ ಕಥೆಯ ಜೊತೆ ತೆರೆಗೆ ಬಂದ ಸಿನೆಮಾ ಅನ್ನುವುದರಲ್ಲಿ ಅನುಮಾನವಿಲ್ಲ.

Similar News