ಶ್ರೀನಗರದಿಂದ ಭಾರತ್ ಜೋಡೊ ಯಾತ್ರೆ ಪುನರಾರಂಭ; ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರಾಹುಲ್ ಗಾಂಧಿ

Update: 2023-01-29 07:23 GMT

ಶ್ರೀನಗರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಕಾಶ್ಮೀರದಲ್ಲಿ ಕೊನೆಯ ಸುತ್ತು ಪ್ರವೇಶಿಸಿದ್ದು, ನಾಳೆ (ಸೋಮವಾರ) ಮುಕ್ತಾಯಗೊಳ್ಳಲಿದೆ. ಸೆಪ್ಟೆಂಬರ್ 7 ರಂದು ಆರಂಭವಾದ ಪಾದಯಾತ್ರೆಯ ಅಂತ್ಯವಾಗುತ್ತಿರುವ ಸಂಕೇತವಾಗಿ  ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಹುಲ್ ಗಾಂಧಿ ಮಧ್ಯಾಹ್ನ 12 ಗಂಟೆಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ರಾಹುಲ್ ಗೆ ಸಹೋದರಿ ಪ್ರಿಯಾಂಕಾ ಗಾಂಧಿ ಸಾಥ್ ನೀಡಿದರು.

ಬೆಳಿಗ್ಗೆ 10 ಗಂಟೆಗೆ ಶ್ರೀನಗರದ ಪಂಥಾ ಚೌಕ್‌ನಿಂದ ಯಾತ್ರೆ ಪುನರಾರಂಭವಾಯಿತು ಹಾಗೂ  ಸೋನ್ವಾರ್ ಚೌಕ್‌ನಲ್ಲಿ ವಿರಾಮಕ್ಕಾಗಿ ನಿಲ್ಲಲಿದೆ.

ರಾಹುಲ್ ಗಾಂಧಿಯವರು ತಮ್ಮ ಸಹೋದರಿ ಹಾಗೂ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 10:45 ಕ್ಕೆ ತಮ್ಮ ಟ್ರೇಡ್‌ಮಾರ್ಕ್ ಬಿಳಿ ಟಿ-ಶರ್ಟ್‌ನಲ್ಲಿ ಯಾತ್ರೆಯನ್ನು ಆರಂಭಿಸಿದರು. ತ್ರಿವರ್ಣ ಧ್ವಜ ಹಾಗೂ  ಪಕ್ಷದ ಧ್ವಜಗಳನ್ನು ಹಿಡಿದುಕೊಂಡಿದ್ದ ಮಹಿಳೆಯರು ಸೇರಿದಂತೆ ನೂರಾರು ಕಾಂಗ್ರೆಸ್ ಬೆಂಬಲಿಗರು  ರಾಹುಲ್ ರೊಂದಿಗೆ ಸೇರಿಕೊಂಡರು.

 ಲಾಲ್ ಚೌಕ್ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶವನ್ನು ಮುಚ್ಚಲಾಗಿದೆ ಹಾಗೂ  ನಗರ ಕೇಂದ್ರದ ಸುತ್ತಲೂ ಬಹು-ಪದರದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

ರಾಹುಲ್ ಅವರು ಸೋಮವಾರ ಎಸ್‌ಕೆ ಸ್ಟೇಡಿಯಂನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ 23 ವಿರೋಧ ಪಕ್ಷಗಳನ್ನು ಆಹ್ವಾನಿಸಲಾಗಿದೆ. ಆದಾಗ್ಯೂ, ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ 12 ವಿರೋಧ ಪಕ್ಷಗಳು ಭಾಗವಹಿಸಲಿವೆ ಎಂದು ವರದಿಗಳು ತಿಳಿಸಿವೆ.

Similar News