ಪಾತಾಳಕ್ಕೆ ಶೇರು ದರ: ಮುಖ್ಯವಾಹಿನಿ ಪತ್ರಿಕೆಗಳಿಗೆ ಪೂರ್ಣಪುಟದ ಜಾಹೀರಾತು ನೀಡಿದ ಅದಾನಿ ಸಂಸ್ಥೆ !

Update: 2023-01-29 08:28 GMT

ಹೊಸದಿಲ್ಲಿ: ಅಮೆರಿಕಾದ ಹಿಂಡೆನ್ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹ ಸಂಸ್ಥೆಗಳ (Adani group) ವಿರುದ್ಧ ಹಲವು ಆರೋಪಗಳನ್ನು ಹೊರಿಸಿ ಹೊರ ತಂದ ಅಧ್ಯಯನ ವರದಿಯ ನಂತರ ಅದಾನಿ ಸಂಸ್ಥೆಯ ಕಂಪೆನಿಗಳ ಷೇರು ಬೆಲೆಗಳು ಭಾರೀ ಇಳಿಕೆ ಕಂಡ ಬೆನ್ನಲ್ಲೇ ಅದಾನಿ ಸಮೂಹವು, ತಮ್ಮ ವ್ಯವಹಾರಗಳ ಪರವಾಗಿ ಮುಖ್ಯವಾಹಿನಿ ಪತ್ರಿಕೆಗಳಿಗೆ ಪೂರ್ಣ ಪುಟದ ಮುಖಪುಟ ಜಾಹೀರಾತು ನೀಡಿದೆ. ಈ ಜಾಹೀರಾತು ಶನಿವಾರದಂದು 'Times of India, Indian Express ಮತ್ತು The Hinduವಿನಂತಹ ಹಲವಾರು ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ ಎಂದು thenewsminute.com ವರದಿ ಮಾಡಿದೆ.

ಅದಾನಿ ಸಮೂಹವು ಹಸಿರು ಇಂಧನ, ವಿಮಾನ ನಿಲ್ದಾಣಗಳು, ರಸ್ತೆಗಳು, ದತ್ತಾಂಶ ಕೇಂದ್ರಗಳು ಮತ್ತು ಡಿಜಿಟಲ್ ವಲಯ ಹಾಗೂ ಸುಸ್ಥಿರ ಮೌಲ್ಯ ವೃದ್ಧಿ ಮತ್ತು ಜೀವನ ಉನ್ನತೀಕರಣದಂತಹ ವ್ಯವಹಾರಗಳಲ್ಲಿ ಬಂಡವಾಳ ಹೂಡಿಕೆ ಮಾಡಿದೆ ಎಂದು ಜಾಹೀರಾತಿನಲ್ಲಿ ಪ್ರತಿಪಾದಿಸಲಾಗಿದೆ.

ಮುಂದುವರಿದು, "ಅದಾನಿ ಸಮೂಹದ ಭಾಗವಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ ಭಾರತದ ಬೃಹತ್ ವ್ಯಾಪಾರ ಸಂಸ್ಥೆಗಳ ಪೈಕಿ ಒಂದಾಗಿದ್ದು, "ಉತ್ತಮಿಕೆಯೊಂದಿಗೆ ಬೆಳವಣಿಗೆ" ಎಂಬ ಮಾರ್ಗದರ್ಶಿ ತತ್ವದೊಂದಿಗೆ ಸುಸ್ಥಿರ ಮೂಲಸೌಕರ್ಯ ವೃದ್ಧಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಇದರೊಂದಿಗೆ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್, ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್, ಅದಾನಿ ಪವರ್ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಮತ್ತು ಅದಾನಿ ವಿಲ್ಮರ್ ಲಿಮಿಟೆಡ್‌‌ನಂತಹ ಖಾಸಗಿ ನವೋದ್ಯಮಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇದಲ್ಲದೆ ಹಸಿರು ಇಂಧನ, ವಿಮಾನ ನಿಲ್ದಾಣಗಳು, ರಸ್ತೆಗಳು, ದತ್ತಾಂಶ ಕೇಂದ್ರಗಳು ಮತ್ತು ಡಿಜಿಟಲ್ ವಲಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅದಾನಿ ಸಮೂಹವು ರಾಷ್ಟ್ರ ನಿರ್ಮಾಣದತ್ತ ತನ್ನ ಗಮನವನ್ನು ಕೇಂದ್ರೀಕರಿಸುವುದನ್ನು ಮುಂದುವರಿಸಲಿದೆ ಮತ್ತು ಭಾರತದ ಸ್ವಾವಲಂಬಿ ಭಾರತದಿಂದ ಭಾರತದ ಮೇಲೆ ಅವಲಂಬನೆ ಸ್ಥಿತಿಗೆ ತಲುಪುವ ಮಹಾತ್ವಾಕಾಂಕ್ಷೆಯೊಂದಿಗೆ ಒಗ್ಗೂಡಿದೆ" ಎಂದು ಜಾಹೀರಾತಿನಲ್ಲಿ ಪ್ರತಿಪಾದಿಸಲಾಗಿದೆ.

ಶನಿವಾರ ತೀವ್ರ ಮಾರಾಟದ ಒತ್ತಡ ಅನುಭವಿಸಿದ ಅದಾನಿ ಸಮೂಹದ ಶೇರುಗಳು ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದವು. ಈ ಕುಸಿತವು ಅದಾನಿ ಎಂಟರ್‌ಪ್ರೈಸಸ್ ಶುಕ್ರವಾರ ಎಫ್‌ಪಿಒ ಚಂದಾದಾರಿಕೆಯನ್ನು ಪ್ರಾರಂಭಿಸಿದಂದೇ ಆಗಿದ್ದು, ಶೇರು ದರ ಕುಸಿತವು ಮತ್ತಷ್ಟು ತೀವ್ರವಾಗುವ ಆತಂಕ ಸೃಷ್ಟಿಸಿದೆ. ಈ ಕುಸಿತವನ್ನು ನಿಯಂತ್ರಿಸಲು ಅದಾನಿ ಸಮೂಹವು ಜಾಹೀರಾತಿನ ಮೊರೆ ಹೋಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಅದಾನಿ ಕಂಪೆನಿಗಳ ಷೇರು ಮೌಲ್ಯಗಳ ಕುಸಿತದಿಂದ ಎರಡೇ ದಿನದಲ್ಲಿ LICಗೆ 18,000 ಕೋಟಿ ರೂ. ನಷ್ಟ

Similar News