ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್: ಭಾರತ ಚಾಂಪಿಯನ್

ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಜಯ

Update: 2023-01-29 14:42 GMT

ಜೋಹಾನ್ಸ್‌ಬರ್ಗ್, ಜ.29: ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿ ಮೊದಲ ಆವೃತ್ತಿಯ ಅಂಡರ್-19 ಟ್ವೆಂಟಿ-20 ವಿಶ್ವಕಪ್‌ನ್ನು ಎತ್ತಿ ಹಿಡಿದಿದೆ.

ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ಎದುರಾಳಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ತಿತಾಸ್ ಸಾಧು(2-6), ಪಾರ್ಶ್ವಿ ಚೋಪ್ರಾ(2-13) ಹಾಗೂ ಅರ್ಚನಾ ದೇವಿ(2-17)ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 17.1 ಓವರ್‌ಗಳಲ್ಲಿ ಕೇವಲ 68 ರನ್‌ಗೆ ಆಲೌಟಾಯಿತು. ಇಂಗ್ಲೆಂಡ್ ಪರ ರಿಯಾನಾ ಮೆಕ್‌ಡೊನಾಲ್ಡ್ (19 ರನ್)ಗರಿಷ್ಠ ಸ್ಕೋರ್ ಗಳಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದ ಭಾರತವು 14 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 69 ರನ್ ಗಳಿಸಿ ಗೆಲುವಿನ ದಡ ಸೇರಿತು.ಸೌಮ್ಯಾ ತಿವಾರಿ(ಔಟಾಗದೆ 24) ಹಾಗೂ ತ್ರಿಶಾ(24 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ಸೌಮ್ಯಾ ಇನ್ನೂ 36 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ರನ್ ದಾಖಲಿಸಿದರು. ಕೇವಲ 6 ರನ್ ನೀಡಿ 2 ವಿಕೆಟ್ ಪಡೆದ ತಿತಾಸ್ ಸಾಧು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Similar News