ಬ್ರಿಟನ್ ನಿರ್ಗಮನ ಐರೋಪ್ಯ ಒಕ್ಕೂಟಕ್ಕೆ ಸವಾಲು: ರಾಬರ್ಟ್ ಇನಾನ್ಸ್

ತೆಂಕನಿಡಿಯೂರು ಕಾಲೇಜಿನಲ್ಲಿ ಅಂ.ರಾ. ವಿಚಾರ ಸಂಕಿರಣ

Update: 2023-01-29 16:02 GMT

ಉಡುಪಿ: ಬ್ರಿಟನ್ ಇತ್ತೀಚೆಗೆ ಐರೋಪ್ಯ ಒಕ್ಕೂಟದಿಂದ ಹೊರ ಬಂದಿರುವುದು ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸುವಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ ಎಂದು ಐರೋಪ್ಯ ಒಕ್ಕೂಟದ ಪಾರ್ಲಿಮೆಂಟಿನ ಮಾಜಿ ಸಂಸದರಾದ ರಾಬರ್ಟ್ ಇನಾನ್ಸ್ ಅಭಿಪ್ರಾಯ ಪಟ್ಟಿದ್ದಾರೆ.

ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ, ಇತಿಹಾಸ ವಿಭಾಗ ಹಾಗೂ ರಾಜಕೀಯ ಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ಭಾರತ ಮತ್ತು ಐರೋಪ್ಯ ಒಕ್ಕೂಟದ ಸಂಬಂಧಗಳು’ ವಿಷಯದ ಕುರಿತ ವಿಚಾರ ಸಂಕಿರಣ ದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ಭಾರತದ ಕುರಿತು ಇರುವ ಅಭಿಪ್ರಾಯದ ಬಗ್ಗೆ ಉಲ್ಲೇಖಿಸಿದ ಇನಾನ್ಸ್, ಯುರೋಪ್‌ನಲ್ಲಿರುವಂತೆ ಭಾರತದಲ್ಲೂ ಸಾಕಷ್ಟು ವೈವಿಧ್ಯತೆ ಇದ್ದು, ಸ್ವಾತಂತ್ರ್ಯಾ ನಂತರ ತನ್ನದೇ ಸಂಸದೀಯ ಪ್ರಜಾಪ್ರಭುತ್ವ ಅಳವಡಿಸಿಕೊಂಡು ಜಗತ್ತಿನ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯ ಹೊಂದಿದೆ ಎಂದರು.

ವಿಚಾರಸಂಕಿರಣದಲ್ಲಿ ಇನ್ನಿಬ್ಬರು ಸಂಪನ್ಮೂಲ ವ್ಯಕ್ತಿಗಳಾದ ಮಣಿಪಾಲ ವಿವಿಯ ಯುರೋಪಿಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ನೀತಾ ಇನಾಂದಾರ್ ಹಾಗೂ ಮಾನವಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಶೆಟ್ಟಿ, ಜಿಯೋಪಾಲಿಟಿಕ್ಸ್ ದೃಷ್ಟಿಕೋನದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ಸಂಬಂದ ಹಾಗೂ ಯುರೋಪ್ ನಲ್ಲಾಗುತ್ತಿರುವ ಬದಲಾವಣೆಗಳ ಕುರಿತು ವಿಚಾರ ಮಂಡಿಸಿದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ., ಅಪಾರ ಮಾನವ ಸಂಪನ್ಮೂಲ ಹೊಂದಿರುವ ಭಾರತದಂತ ರಾಷ್ಟ್ರದ ಜೊತೆಗೆ ಸಂಬಂಧ ಬಲಗೊಳಿಸಲು ಬಹುತೇಕ ರಾಷ್ಟ್ರಗಳು ಉತ್ಸುಕ ರಾಗಿದ್ದು ಐರೋಪ್ಯ ಒಕ್ಕೂಟವೂ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಹೆಜ್ಜೆ ಇಡುವುದರಲ್ಲಿ ಸಂಶಯವಿಲ್ಲ ಎಂದರು.

ಐಕ್ಯೂಎಸಿ ಸಂಚಾಲಕ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್, ರಾಧಾಕೃಷ್ಣ, ತಿಮ್ಮಣ್ಣ ಜಿ. ಭಟ್ ಉಪಸ್ಥಿತರಿದ್ದರು.

ಪ್ರಶಾಂತ್ ನೀಲಾವರ ವಿಚಾರ ಸಂಕಿರಣವನ್ನು ಆಯೋಜಿಸಿದರೆ, ಶ್ರೀ ಕೃಷ್ಣ ಸಾಸ್ತಾನ, ಡಾ. ವೆಂಕಟೇಶ್ ಹೆಚ್.ಕೆ., ರವಿ ಚಿತ್ರಾಪುರ, ಡಾ. ಮಹೇಶ್ ಕುಮಾರ್ ಕೆ.ಇ. ಸಹಕರಿಸಿದರು.

Similar News