ಭಾವನಾ ‘ಜನಪದ’ ದೇಶೀಯ ಕಲಾ ಕಾರ್ಯಾಗಾರ ಉದ್ಘಾಟನೆ

Update: 2023-01-29 16:04 GMT

ಉಡುಪಿ: ಭಾವನಾ ಫೌಂಡೇಷನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸಿರುವ ‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಕ್ರಮಕ್ಕೆ ನಗರದ ಬಡಗುಪೇಟೆಯಲ್ಲಿರುವ ಭಾಸ ಗ್ಯಾಲರಿಯಲ್ಲಿ ಉಡುಪಿ ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕ ಡಾ.ನಿರಂಜನ್ ಯು.ಸಿ.ಉದ್ಘಾಟಿಸಿದರು.

ಭಾರತದಲ್ಲಿ ವಿಪುಲ ಸಂಖ್ಯೆಯಲ್ಲಿರುವ ದೇಶೀಯ ಕಲೆಗಳನ್ನು ಉಳಿಸಿ, ಬೆಳೆಸುವ ತುರ್ತು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಕಾರ್ಯಾಗಾರ ಒಂದು ಉತ್ತಮ ಹೆಜ್ಜೆಯಾಗಿದೆ. ಅಳಿವಿನಂಚಿನಲ್ಲಿರುವ ದೇಶೀಯ ಕಲೆಗಳಿಗೆ ಪ್ರಚಾರ ಹಾಗೂ ಪ್ರೋತ್ಸಾಹದ ಅಗತ್ಯವಿದೆ ಎಂದು ಡಾ.ನಿರಂಜನ್ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಆರ್ಟಿಸ್ಟ್ ಫೋರಂನ ಅಧ್ಯಕ್ಷ ಹಿರಿಯ ಕಲಾವಿದ ರಮೇಶ್ ರಾವ್ ಮಾತನಾಡಿ, ಯಾವುದೇ ಅಕಾಡೆಮಿ ಮಾಡಿ ತೋರಿಸದ ಕಾರ್ಯಗಳನ್ನು ಪ್ರತಿಷ್ಠಾನ ಮಾಡುತ್ತಿದೆ.ಕಲೆ ಮತ್ತುಕಲಾವಿದರೊಂದಿಗಿನ ಭಾವನಾತ್ಮಕ ಸಂಬಂಧವನ್ನು ಬೆಸೆಯಲು ಈ ಕಾರ್ಯಾಗಾರಗಳು ಪರಿಣಾಮಕಾರಿಯಾಗಿದೆಯಲ್ಲದೇ ಸಮಕಾಲೀನ ಕಲಾಕಾರರು ಹಾಗೂ ಜನಪದೀಯ ಕಲಾಕಾರರ ನಡುವಿನ ಕೊಡು- ಕೊಂಡು ಕೊಳ್ಳುವಿಕೆಯ ಬಗೆಗೆ ಇಲ್ಲಿ ಚಿಂತನೆ ನಡೆಯುವುದು ಬಹು ಮಹತ್ವದ ವಿಚಾರ ಎಂದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ, ನಾಟಕ ನಿರ್ದೇಶಕ ರವಿರಾಜ್ ಹೆಚ್.ಪಿ., ಭಾವನಾ ಪ್ರತಿಷ್ಠಾನದ ನಿರ್ದೇಶಕ ಯಕ್ಷಗುರು ಹಾವಂಜೆ ಮಂಜುನಾಥ ರಾವ್, ಕಾರ್ಯಾಗಾರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಹಾಗೂ ಸಂತೋಷ ಪೈ ಉಪಸ್ಥಿತರಿದ್ದರು.

ಹಾವಂಜೆಯಂತಹ ಗ್ರಾಮೀಣ ಭಾಗದಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಬೆಳೆಸುತ್ತಿರುವ ಭಾವನಾ ಕಲಾಶಾಲೆಯ ವಿಂಶತಿ ಸಂಭ್ರಮದ ಹೊಸ್ತಿಲಲ್ಲಿ ಈ ಕಾರ್ಯಾಗಾರಗಳನ್ನು ಆಯೋಜಿಸಲಾಗಿದ್ದು, ಭಾರತದ ತುಂಬೆಲ್ಲ ಹರಡಿ ಕೊಂಡಿರುವ ನಾನಾ ವಿಧದ ಕಲಾಪ್ರಕಾರಗಳನ್ನು ಉಡುಪಿಗೆ ಪರಿಚಯಿಸುವ ಮೂಲಕ ಕಲಾಸಕ್ತರು ಅದನ್ನು ರಚಿಸುವಲ್ಲಿ ತೊಡಗಿಸಿಕೊಳ್ಳುವುದು ಮತ್ತು ಕಲಾಪ್ರದರ್ಶನ ಮತ್ತು ಮಾರಾಟಗಳಿಂದ ಅಳಿನಂಚಿನಲ್ಲಿರುವ ದೇಶೀಯ ಕಲೆಗಳಿಗೆ ಉತ್ತೇಜನ ನೀಡುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಜನಾರ್ದನ ಹಾವಂಜೆ ತಿಳಿಸಿದ್ದಾರೆ.

ಬಿಹಾರದ ಮಧುಬನಿ, ಮಹಾರಾಷ್ಟ್ರದ ವಾರ್ಲಿ ಕಲೆ, ಟಿಬೆಟ್‌ನ ಟಂಕಾ ಚಿತ್ರಕಲೆ, ಮೈಸೂರು ಹಾಗೂ ತಂಜಾವೂರು ಚಿತ್ರಕಲೆ, ಒರಿಸ್ಸಾ ಪಟಚಿತ್ರ, ಮಧ್ಯಪ್ರದೇಶದ ಗೋಂದ್ ಗಿರಿಜನರ ಕಲೆ ಹಾಗೂ ಪ್ರಾಂತೀಯ ಕಾವಿ ಭಿತ್ತಿ ಚಿತ್ರಕಲೆಗಳೇ ಮುಂತಾಗಿ ಸುಮಾರು ಹದಿನೈದಕ್ಕೂ ಮಿಕ್ಕಿದ ಕಲಾಪ್ರಕಾರಗಳ ಪ್ರದರ್ಶನವನ್ನೂಏರ್ಪಡಿಸಲಾಗಿದೆ.

ಮೊದಲ ಕಾರ್ಯಾಗಾರದಲ್ಲಿ ಉತ್ತರಕನ್ನಡ ಜಿಲ್ಲೆಯ ಹಸೆ ಚಿತ್ತಾರ ಜನಪದ ಕಲೆಯ ಕಾರ್ಯಾಗಾರವನ್ನು ಸಾಗರದ ಭಾಗೀರಥಿಯಮ್ಮ ಹಾಗೂ ಸುಶೀಲಮ್ಮ ನಡೆಸಿಕೊಟ್ಟು, ಹಸೆ ಚಿತ್ರಗಳ ಪಾರಂಪರಿಕ ರಚನಾಕ್ರಮ, ತಾಂತ್ರಿಕತೆಗಳನ್ನು ಕಲಿಸಿಕೊಟ್ಟರು. ಮೂವತ್ತಕ್ಕೂ ಅಧಿಕ ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಇನ್ನು ಮುಂದೆ ಪ್ರತಿ ತಿಂಗಳು ಒಂದೊಂದು ಕಲೆಯ ಕಾರ್ಯಾಗಾರವನ್ನು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು  ಸಂಯೋಜಕ ಕಲಾವಿದ ಜನಾರ್ದನ ಹಾವಂಜೆ ತಿಳಿಸಿದರು. ವಿವಿಧ ಕಲಾಪ್ರಕಾರಗಳ ಈ ಪ್ರದರ್ಶನವು ಸೋಮವಾರ ಅಪರಾಹ್ನದವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.

Similar News