ಅಜ್ಮೀರ್ ವಿವಿ: ಮೋದಿ ಸಾಕ್ಷಚಿತ್ರ ವೀಕ್ಷಿಸಿದ 11 ವಿದ್ಯಾರ್ಥಿಗಳ ಅಮಾನತು

Update: 2023-01-29 17:08 GMT

ಹೊಸದಿಲ್ಲಿ,ಜ.29: ಉತ್ತರಪ್ರದೇಶದ ಅಜ್ಮೇರ್‌(Ajmer)ನ ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾನಿಲಯವು ಮೋದಿ ಕುರಿತ ಬಿಬಿಸಿ(BBC) ಸಾಕ್ಷಚಿತ್ರವನ್ನು ವೀಕ್ಷಿಸಿದ ಕನಿಷ್ಠ 11 ಮಂದಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.

ಈ ಹನ್ನೊಂದು ಮಂದಿ ವಿದ್ಯಾರ್ಥಿಗಳನ್ನು ಜನವರಿ 27ರಿಂದ 14 ದಿನಗಳ ಅವಧಿಗೆ ತರಗತಿಗಳು ಹಾಗೂ ಹಾಸ್ಟೆಲ್‌ನಿಂದ ಅಮಾನತುಗೊಳಿಸಲಾಗಿದೆ. ಬಿಬಿಸಿ ಸಾಕ್ಷಚಿತ್ರ ಇಂಡಿಯಾ: ದಿ ಮೋದಿ ಕ್ವೆಶ್ಚನ್(India: The Modi Question) ವೀಕ್ಷಿಸಿದ್ದರೆನ್ನಲಾದ 11 ಮಂದಿ ವಿದ್ಯಾರ್ಥಿಗಳ ಪಟ್ಟಿಯನ್ನು ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬಿಡುಗಡೆಗೊಳಿಸಿತ್ತು ಹಾಗೂ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿತ್ತು.

ವಿವಿಯಿಂದ ಶಿಸ್ತುಕ್ರಮವನ್ನು ಎದುರಿಸಿದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದಾರೆ. ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಒತ್ತಡಕ್ಕೆ ವಿವಿ ಅಧಿಕಾರಿಗಳು ಮಣಿದಿದ್ದಾರೆಂದು ಅಮಾನತುಗೊಂಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಗುರುವಾರ ಸಂಜೆ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳ ಗುಂಪೊಂದು ವಿಶ್ವವಿದ್ಯಾನಿಲಯದಲ್ಲಿ ದಾಂಧಲೆ ನಡೆಸಿತು ಹಾಗೂ ಬಿಬಿಸಿ ಸಾಕ್ಷಚಿತ್ರವನ್ನು ವೀಕ್ಷಿಸುತ್ತಿದ್ದರೆನ್ನಲಾದವರ ಹಾಸ್ಟೆಲ್ ಕೊಠಡಿಗಳಿಗೆ ಬಲವಂತವಾಗಿ ನುಗ್ಗಲು ಯತ್ನಿಸಿರುವುದಾಗಿ ವರದಿಯಾಗಿತ್ತು.

ಈ ಮಧ್ಯೆ ಬಿಬಿಸಿ ವಿವಾದಿತ ಸಾಕ್ಷಚಿತ್ರವನ್ನು ಯಾವುದೇ ರೂಪದಲ್ಲಿ ಪ್ರದರ್ಶಿಸುವುದಕ್ಕೆ ಅಜ್ಮೇರ್ ವಿವಿಯು ಸಂಪೂರ್ಣ ನಿಷೇಧವನ್ನು ವಿಧಿಸಿದೆ ಹಾಗೂ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತೆ ತನ್ನ ಎಲ್ಲಾ ವಿಭಾಗಗಳ ವರಿಷ್ಠರಿಗೆ ತಿಳಿಸಿದೆ. ಕಾನೂನು ಮತ್ತು ಶಿಸ್ತನ್ನು ಕಾಪಾಡಲು ಹಾಗೂ ವಿದ್ಯಾರ್ಥಿ ಸಮುದಾಯದ ಸುರಕ್ಷತೆಯ ದೃಷ್ಟಿಯಿಂದ ಸಾಕ್ಷಚಿತ್ರಕ್ಕೆ ನಿಷೇಧವನ್ನು ಹೇರಲಾಗಿದೆಯೆಂದು ಅದು ಹೇಳಿದೆ.

ವಿವಾದಿತ ಬಿಬಿಸಿ ಸಾಕ್ಷಚಿತ್ರ ಇಂಡಿಯಾ: ದಿ ಮೋದಿ ಕ್ವೆಶ್ವನ್. 2002ರ ಗುಜರಾತ್ ಹಿಂಸಾಚಾರದ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಗಲಭೆಕೋರರನು ನಿಯಂತ್ರಿಸುವುದಕ್ಕೆ ಪೊಲೀಸರನ್ನು ತಡೆದಿದ್ದರು.

Similar News