ಶ್ರೀನಗರ: ಎನ್ಐಎಯಿಂದ ಹುರಿಯುತ್ ಕಚೇರಿ ಮುಟ್ಟುಗೋಲು

Update: 2023-01-29 17:22 GMT

ಶ್ರೀನಗರ, ಜ. 29: ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ವಿಶೇಷ ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಲ್ಲಿನ ರಾಜ್ಬಾಗ್ ಪ್ರದೇಶದಲ್ಲಿರುವ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ (APHC) ಕಚೇರಿಯನ್ನು ರವಿವಾರ ಮುಟ್ಟುಗೋಲು ಹಾಕಿಕೊಂಡಿದೆ.  

ಎನ್ಐಎ ತಂಡ ರಾಜ್ಬಾಗ್ ನಲ್ಲಿರುವ ಹುರಿಯತ್ ಕಚೇರಿಗೆ ಆಗಮಿಸಿ ಗೋಡೆಗೆ ಮುಟ್ಟುಗೋಲು ನೋಟಿಸು ಅಂಟಿಸಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಹೊಸದಿಲ್ಲಿಯ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದ್ರ ಮಲಿಕ್(Shailender Malik) ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ ನ ಕಚೇರಿಯ ಕಟ್ಟಡ ಸೇರಿದಂತೆ ಸ್ಥಿರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಶನಿವಾರ ಆದೇಶಿಸಿತ್ತು.

ಭಯೋತ್ಪಾದನೆ, ಪ್ರತ್ಯೇಕತಾವಾದಿ ಚಟುವಟಿಕೆಗಳ ಯೋಜನೆ ರೂಪಿಸಲು, ಅದನ್ನು ಕಾರ್ಯಗತಗೊಳಿಸಲು ಹಾಗೂ ಇತರ ಅಪರಾಧಗಳಿಗಾಗಿ ಈ ಆಸ್ತಿಯನ್ನು ಬಳಸಲಾಗುತ್ತಿದೆ. ಆದುದರಿಂದ ಯುಎಪಿಎಯ ಸೆಕ್ಷನ್ 33 (1) ಅನುಗುಣವಾಗಿ ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡುವಂತೆ ಎನ್ಐಎ ನ್ಯಾಯಾಲಯದಲ್ಲಿ ಕೋರಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ನಯೀಮ್ ಅಹ್ಮದ್ ಖಾನ್(Ahmed Khan)  ಬಂಧಿಸಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಇದುವರೆಗೆ 12 ಮಂದಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ. ಆರೋಪಿ ನಯೀಮ್ ಖಾನ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಕ್ಷಚಿತ್ರಗಳು, ಇಲೆಕ್ಟ್ರಾನಿಕ್ ಹಾಗೂ ವೌಕಿಕ ರೂಪದ ಪುರಾವೆಗಳು ಸಾಕಷ್ಟಿವೆ ಎಂದು ಎನ್ಐಎ ತಿಳಿಸಿದೆ. ಈ ಕಟ್ಟಡವನ್ನು ಎಪಿಎಚ್ಸಿಯ ಸದಸ್ಯರು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಎನ್ಐಎ ತಿಳಿಸಿತ್ತು.

Similar News