ರಾಹುಲ್ ಗಾಂಧಿ ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸುವಂತಹ ಪರಿಸ್ಥಿತಿ ನಿರ್ಮಿಸಿದ್ದು ಕೇಂದ್ರ ಸರಕಾರ: ಬಿಜೆಪಿ

Update: 2023-01-30 04:42 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi ) ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಂತಹ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಾಶ್ಮೀರದಲ್ಲಿ ಸೃಷ್ಟಿಸಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ರವಿವಾರ ಹೇಳಿದೆ.

 ಎಎನ್‌ಐ ಜೊತೆ ಮಾತನಾಡಿದ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ಪ್ರಧಾನಿ ಮೋದಿ ಅವರು 370 ನೇ ವಿಧಿಯನ್ನು ರದ್ದುಗೊಳಿಸಿದ್ದರಿಂದ ರಾಹುಲ್  ಗಾಂಧಿ ಅವರು ಲಾಲ್ ಚೌಕದಲ್ಲಿ ಧ್ವಜಾರೋಹಣ ಮಾಡಲು ಸಾಧ್ವವಾಯಿತು ಎಂದರು.

"ರಾಹುಲ್ ಗಾಂಧಿಯವರು ಇಂದು ಶ್ರೀನಗರದ ಲಾಲ್ ಚೌಕ್‌ನಲ್ಲಿ ಶಾಂತಿಯುತವಾಗಿ ತ್ರಿವರ್ಣ ಧ್ವಜವನ್ನು ಹೇಗೆ ಹಾರಿಸಿದರು? ಪ್ರಧಾನಿ ಮೋದಿ ಅವರು 370 ನೇ ವಿಧಿಯನ್ನು ರದ್ದುಗೊಳಿಸಿದ್ದರಿಂದಲೇ  ಇದು ಸಾಧ್ಯವಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹೋಗುತ್ತಿದ್ದಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ  ಭಯದ ವಾತಾವರಣ ಇತ್ತು"  ಎಂದು ಪ್ರಸಾದ್ ಆರೋಪಿಸಿದರು.

"ರಾಹುಲ್ ಗಾಂಧಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿದರು, ಇಂದು ಮೋದಿ ಸರಕಾರ ಕಾಶ್ಮೀರದಲ್ಲಿ ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ, ಈಗ ಯಾವುದೇ ಭಾರತೀಯ ನಾಗರಿಕರು ಕಾಶ್ಮೀರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬಹುದು" ಎಂದು ಬಿಜೆಪಿ ಸಂಸದ ರಾಜ್ಯವರ್ಧನ್ ರಾಥೋಡ್ ಹೇಳಿದ್ದಾರೆ.

70 ವರ್ಷಗಳ ನಂತರ ನೆಹರು-ಗಾಂಧಿ ಕುಟುಂಬದ ಸದಸ್ಯರೊಬ್ಬರು ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನುಹಾರಿಸಿದರು. ರಾಹುಲ್ ಗಾಂಧಿ ತ್ರಿವರ್ಣ ಧ್ವಜ ಹಾರಿಸಿದ ಕೀರ್ತಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಸಲ್ಲುತ್ತದೆ ಎಂದು ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹೇಳಿದ್ದಾರೆ.

Similar News