ಪ್ರತಿಕೂಲ ಹವಾಮಾನದ ನಡುವೆಯೂ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭ ಆರಂಭ

Update: 2023-01-30 07:42 GMT

ಹೊಸದಿಲ್ಲಿ: ಪ್ರತಿಕೂಲ ಹವಾಮಾನದ ನಡುವೆಯೂ ಸೋಮವಾರ  ಜಮ್ಮು-ಕಾಶ್ಮೀರದ ಶ್ರೀನಗರದ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭವು ಧ್ವಜಾರೋಹಣದೊಂದಿಗೆ ಆರಂಭವಾಯಿತು.

ಶ್ರೀನಗರದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತ್ರಿವರ್ಣ ಧ್ವಜವನ್ನು ಹಾರಿಸಿದರು. ಅವರೊಂದಿಗೆ ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ಗಾಂಧಿ ಕೂಡ ಸೇರಿಕೊಂಡರು.

ಕಾಶ್ಮೀರದ ಪ್ರಮುಖ ನಾಯಕರಾದ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಹಾಗೂ  ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ  ಮೆಹಬೂಬಾ ಮುಫ್ತಿ ಅವರು ಭಾರೀ ಹಿಮಪಾತದ ನಡುವೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್‌ನ ಪ್ಯಾನ್-ಇಂಡಿಯಾ ಪಾದಯಾತ್ರೆಯ ಸಮಾರೋಪ ಸಮಾರಂಭದ ಭಾಗವಾಗಿ, 135 ದಿನಗಳ ಸುದೀರ್ಘ ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರೆಯ ಮುಕ್ತಾಯದ ಅಂಗವಾಗಿ  ಶೇರ್-ಐ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಮೆಗಾ ರ್ಯಾಲಿಯನ್ನು ಆಯೋಜಿಸಿದೆ.

ಈ ಪ್ರದೇಶದಲ್ಲಿ ಭಾರೀ ಮಳೆ ಹಾಗೂ  ಹಿಮಪಾತದಿಂದಾಗಿ ಇಂದು ನಿಗದಿಯಾಗಿದ್ದ ಶ್ರೀನಗರಕ್ಕೆ ಹೋಗುವ ಹೆಚ್ಚಿನ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುವ ಪ್ರಯಾಣ ಈಗಾಗಲೇ ರದ್ದಾಗಿದೆ.

Similar News