ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ಮುಂಬೈನಲ್ಲಿ ಪ್ರತಿಭಟನೆ: 36 ಜನರ ವಿರುದ್ಧದ ಪ್ರಕರಣ ಹಿಂಪಡೆದ ಪೊಲೀಸರು

Update: 2023-01-31 05:12 GMT

ಮುಂಬೈ: ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲಿ (Jawaharlal Nehru University ) ವಿದ್ಯಾರ್ಥಿಗಳ  ಮೇಲೆ ಜನವರಿ 2020 ರಲ್ಲಿ ನಡೆದ ದಾಳಿಯ ನಂತರ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ 36 ಜನರ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಮುಂಬೈ ಪೊಲೀಸರು ಸಲ್ಲಿಸಿರುವ  ಮನವಿಯನ್ನು ಇಲ್ಲಿನ ನ್ಯಾಯಾಲಯವು ಅಂಗೀಕರಿಸಿದೆ.

ಆರೋಪಿಗಳು ಯಾವುದೇ "ವೈಯಕ್ತಿಕ ಹಿತಾಸಕ್ತಿ ಅಥವಾ  ವೈಯಕ್ತಿಕ ಪ್ರಯೋಜನಗಳಿಲ್ಲದೆ" ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಎಸ್‌ಪ್ಲೇನೇಡ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ವಿ. ಡಿಂಡೋಕರ್ ಅವರು ಈ ತಿಂಗಳ ಆರಂಭದಲ್ಲಿ ಪ್ರಕರಣವನ್ನು ಹಿಂಪಡೆಯಲು ಅರ್ಜಿಯನ್ನು ಅನುಮತಿಸಿದರು. ಸೋಮವಾರ ಆದೇಶದ ಪ್ರತಿ ಲಭ್ಯವಾಗಿದೆ.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೌತಮ್ ಗಾಯಕ್ವಾಡ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ಆರೋಪಿಗಳು "ಯಾವುದೇ ವೈಯಕ್ತಿಕ ಹಿತಾಸಕ್ತಿ ಅಥವಾ ಪ್ರಯೋಜನಗಳಿಲ್ಲದೆ" ಪ್ರತಿಭಟನೆ ಮಾಡಿದ್ದಾರೆ. ಯಾವುದೇ ಪ್ರಾಣಹಾನಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 2020 ರಲ್ಲಿ ದಿಲ್ಲಿಯ ಜೆಎನ್‌ಯುನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಲು ಮುಂಬೈನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇಲ್ಲಿನ ಕೊಲಾಬಾ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, 2020ರ ಡಿಸೆಂಬರ್‌ನಲ್ಲಿ 36 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

Similar News