ಸಿಬ್ಬಂದಿ ಜತೆ ಜಗಳ: ವಿಮಾನದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಓಡಾಡಿದ ಮಹಿಳೆ

Update: 2023-01-31 17:24 GMT

ಮುಂಬೈ, ಜ. 31: ಅಬುಧಾಬಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿಸ್ತಾರ ಏರ್ಲೈನ್ಸ್ ವಿಮಾನದಲ್ಲಿ ಸಿಬ್ಬಂದಿಗೆ ಹಲ್ಲೆಗೈದ ಆರೋಪದಲ್ಲಿ 45 ವರ್ಷದ ಇಟಲಿಯ ಮಹಿಳೆಯನ್ನು ಸೋಮವಾರ ಬಂಧಿಸಲಾಗಿದೆ.ಪವೋಲಾ ಪೆರುಶಿಯೊ ಎಂಬ ಮಹಿಳೆ ಎಕಾನಮಿ ದಜೆರ್ಯ ಟಿಕೆಟ್ ಹೊಂದಿದ್ದರು. ಅವರು ಸೋಮವಾರ ಮುಂಜಾನೆ 2 ಗಂಟೆಗೆ ವಿಮಾನ ಹತ್ತಿದರು.

ಬಳಿಕ, ತನಗೆ ಬಿಝ್ನೆಸ್ ದರ್ಜೆಯ ವಿಭಾಗದಲ್ಲಿ ಆಸನ ನೀಡಬೇಕೆಂದು ಒತ್ತಾಯಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಬಿಝ್ನೆಸ್ ದರ್ಜೆಯ ಆಸನದಲ್ಲಿ ಕುಳಿತುಕೊಳ್ಳಲು ಹೋದ ಮಹಿಳೆಯನ್ನು ಸಿಬ್ಬಂದಿ ತಡೆದಾಗ ಆಕೆ ಅವರ ಮೇಲೆ ಹಲ್ಲೆ ನಡೆಸಿದಳು ಎಂದು ಅವರು ಹೇಳಿದರು. ಬಳಿಕ ಆಕೆ ತನ್ನ ಕೆಲವು ಬಟ್ಟೆಗಳನ್ನು ಕಳಚಿ ಅರೆನಗ್ನಾವಸ್ಥೆಯಲ್ಲಿ ವಿಮಾನದ ಆಸನಗಳ ನಡುವಿನ ದಾರಿಯಲ್ಲಿ ಅಡ್ಡಾಡಿದಳು ಎನ್ನಲಾಗಿದೆ.‘‘ನಿಯಂತ್ರಣರಹಿತ ಮತ್ತು ಹಿಂಸಾತ್ಮಕ ವರ್ತನೆಗಾಗಿ’’ ವಿಮಾನ ಸಿಬ್ಬಂದಿಯು ಮಹಿಳೆಯನ್ನು ನಿರ್ಬಂಧಿಸಿದರು ಹಾಗೂ ನಿಯಮಗಳಂತೆ ಈ ವಿಷಯವನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ತಿಳಿಸಲಾಗಿದೆ ಎಂದು ಹೇಳಿಕೆಯೊಂದರಲ್ಲಿ ವಿಸ್ತಾರ ತಿಳಿಸಿದೆ.

ದುರ್ವರ್ತನೆ ತೋರಿದ ಮಹಿಳೆಯನ್ನು ತಡೆಯಲು ಯತ್ನಿಸಿದಾಗ ಆಕೆ ಓರ್ವ ಸಿಬ್ಬಂದಿಯ ಮುಖಕ್ಕೆ ಗುದ್ದಿದಳು ಹಾಗೂ ಇನ್ನೋರ್ವ ಸಿಬ್ಬಂದಿಯ ಮೇಲೆ ಉಗಿದಳು ಎಂದು ಪೊಲೀಸ್ ಅಧಿಕಾರಿ ಹೇಳಿದರು.ವಿಮಾನವು ಮುಂಬೈಯಲ್ಲಿ ಇಳಿದ ಬಳಿಕ, ಮಹಿಳೆಯನ್ನು ಪೊಲೀಸರು ಬಂಧಿಸಿದರು.

Similar News