ಏರ್‌ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರಿಸಿದ್ದ ಆರೋಪಿಗೆ ಜಾಮೀನು

Update: 2023-01-31 11:51 GMT

ಹೊಸದಿಲ್ಲಿ: ತೀರ್ಪನ್ನು ಕಾಯ್ದಿರಿಸಿದ ಒಂದು ದಿನದ ನಂತರ,  ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ಹೊಸದಿಲ್ಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಆರೋಪಿ ಶಂಕರ್ ಮಿಶ್ರಾಗೆ ದಿಲ್ಲಿ ನ್ಯಾಯಾಲಯ ಇಂದು ಜಾಮೀನು ನೀಡಿದೆ ಎಂದು ANI ವರದಿ ಮಾಡಿದೆ.

ಶಂಕರ್ ಮಿಶ್ರಾ ವಿರುದ್ಧದ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಹೆಸರಿಸಿರುವ ಸಾಕ್ಷಿಗಳು ಪ್ರಾಸಿಕ್ಯೂಷನ್ ಪರವಾಗಿ ಹೇಳಿಕೆ ನೀಡುತ್ತಿಲ್ಲ ಎಂದು ಪಟಿಯಾಲ ಹೌಸ್ ಕೋರ್ಟ್ ಸೋಮವಾರ ಗಮನಿಸಿತ್ತು.

"ನೀವು (ತನಿಖಾ ಸಂಸ್ಥೆ) ಹೆಸರಿಸಿರುವ ಸಾಕ್ಷಿ ನಿಮ್ಮ ಪರವಾಗಿ ಹೇಳಿಕೆ ನೀಡುತ್ತಿಲ್ಲ... ದೂರುದಾರರ ಹೇಳಿಕೆ ಮತ್ತು ಇಲಾ ಬೆನರ್ಜಿ (ಸಾಕ್ಷಿ) ಹೇಳಿಕೆಯಲ್ಲಿ ವಿರೋಧಾಭಾಸವಿದೆ" ಎಂದು ನಿನ್ನೆ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಗಮನಿಸಿದರು.

ದಿಲ್ಲಿ ಪೊಲೀಸರು ಜಾಮೀನು ಅರ್ಜಿಯನ್ನು ವಿರೋಧಿಸಿದರು, "ಘಟನೆಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನನಷ್ಟವಾಗಿದೆ" ಎಂದು ಹೇಳಿದರು, ಅದಕ್ಕೆ ನ್ಯಾಯಾಧೀಶರು, "ಇದು ಅಸಹ್ಯಕರವಾಗಿರಬಹುದು, ಆದರೆ ಅದು ಬೇರೆ ವಿಷಯ, ನಾವು ಅದರೊಳಗೆ ಹೋಗಬೇಕೆಂದಿಲ್ಲ. ಕಾನೂನು ಅದರೊಂದಿಗೆ ವ್ಯವಹರಿಸುತ್ತದೆ" ಎಂದರು. ಮಿಶ್ರಾ ಅವರು ತನಿಖೆಗೆ ಸಹಕರಿಸಲಿಲ್ಲ ಮತ್ತು ಅವರು ತಮ್ಮ ಎಲ್ಲಾ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.

Similar News