ಶಿಷ್ಯೆ ಮೇಲೆ ಅತ್ಯಾಚಾರ: ಆಸಾರಾಂ ಬಾಪುಗೆ ಎರಡನೇ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

Update: 2023-01-31 15:19 GMT

ಅಹಮದಾಬಾದ್:‌ 2013ರಲ್ಲಿ ತನ್ನ ಶಿಷ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ವಘೋಷಿತ ದೇವಮಾನವ ಆಸಾರಾಂ ಬಾಪು ಅವರಿಗೆ ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.

16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಆಸಾರಾಂ ಈಗಾಗಲೇ ಜೋಧ್‌ಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 2018 ರಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ (ಪೋಕ್ಸೋ) ಕಾಯ್ದೆಯಡಿಯಲ್ಲಿ ಅವರನ್ನು ಅಪರಾಧಿ ಎಂದು ಘೋಷಿಸಲಾಗಿತ್ತು.

ಅಕ್ಟೋಬರ್ 2013 ರಲ್ಲಿ, ಸೂರತ್ ಮೂಲದ ಮಹಿಳೆಯೊಬ್ಬರು ಆಸಾರಾಂ ಮತ್ತು ಅವರ ಪತ್ನಿ, ಮಗ ಮತ್ತು ಮಗಳು ಸೇರಿದಂತೆ ಇತರ ಏಳು ಜನರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಿದ್ದರು. ಆರೋಪಿಗಳ ಪೈಕಿ ಒಬ್ಬರು ವಿಚಾರಣೆ ವೇಳೆ ಮೃತಪಟ್ಟಿದ್ದರು.

ಸೋಮವಾರ, ಗಾಂಧಿನಗರ ನ್ಯಾಯಾಲಯವು 2013 ರ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿತ್ತು. ಆದರೆ ಅವರ ಪತ್ನಿ, ಮಗ ಮತ್ತು ಮಗಳನ್ನು ದೋಷಮುಕ್ತಗೊಳಿಸಿತ್ತು.

Similar News