ಚಿರತೆ ಮತ್ತು ಮನುಷ್ಯರ ನಡುವೆ ಹೆಚ್ಚುತ್ತಿರುವ ಸಂಘರ್ಷ

Update: 2023-02-01 18:42 GMT

ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಕಾಡಿನಲ್ಲಿಯೇ ಉಳಿಸಲು ಏನು ಮಾಡಬೇಕು? ಆಭಿವೃದ್ಧಿ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ಹಾಳಾಗಿರುವ ಕಾಡು ಪ್ರಾಣಿಗಳ ನೆಲೆಯನ್ನು ಸರಿಪಡಿಸುವುದು ಹೇಗೆ? ಮುಂತಾದ ವಿಷಯಗಳ ಕುರಿತು ಇಂದು ಗಂಭೀರ ಚರ್ಚೆಗಳು ನಡೆಯಬೇಕಾಗಿರುವ ಜೊತೆಗೆ ಈ ಚರ್ಚೆಗಳಿಂದ ಬರುವ ಫಲಿತಾಂಶಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಒಂದಂತೂ ಸತ್ಯ, ಕಾಡು ಸರಿ ಹೋದರೆ ಮಾತ್ರ ಮನುಷ್ಯ ನಾಡಿನಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯ. ಇಲ್ಲದಿದ್ದರೆ ಕಾಡು ಪ್ರಾಣಿಗಳ ಮತ್ತು ಮನುಷ್ಯರ ನಡುವಿನ ಸಂಘರ್ಷಗಳು ಮತ್ತಷ್ಟು ಹೆಚ್ಚಾಗಲಿವೆ.


ಎರಡು ತಿಂಗಳ ಅವಧಿಯಲ್ಲಿ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಾಲ್ಕು ಜನರನ್ನು ಬಲಿ ತೆಗೆದುಕೊಂಡ ನರಹಂತಕ ಚಿರತೆಯನ್ನು ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿಯುವ ಮೂಲಕ ಆ ಭಾಗದ ಜನರಲ್ಲಿ ತಲೆದೋರಿದ್ದ ಆತಂಕ ಸ್ವಲ್ಪಮಟ್ಟಿಗೆ ನಿವಾರಣೆಯಾಗಿದೆ. ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ ಮಾತ್ರ ನಡೆಯುತ್ತಿದ್ದ ಕಾಡು ಪ್ರಾಣಿಗಳ ಹಾವಳಿ ಇತ್ತೀಚೆಗೆ ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಿಗೂ ವ್ಯಾಪಿಸಿದ್ದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಇದುವರೆಗೂ ಆನೆಗಳ ದಾಳಿಯೇ ಆಧಿಕ ಎಂದು ಹೇಳಲಾಗುತ್ತಿತ್ತು. ಆದರೆ ಆನೆ ಹಾವಳಿಗಿಂತ ಚಿರತೆಗಳ ಹಾವಳಿ ಅತ್ಯಂತ ಹೆಚ್ಚಳವಾಗುತ್ತಿದೆ. ಅರಣ್ಯ ಅತಿಕ್ರಮಣಗಳು, ಕಡಿಮೆಯಾಗುತ್ತಿರುವ ಅರಣ್ಯ ಪ್ರದೇಶ, ಪರಿಸರ ಅಸಮತೋಲನಗಳು ಈ ಚಿರತೆ ದಾಳಿಗಳಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶೀಲವಂತಪುರ, ಕೊಡಸೋಗೆ ಮತ್ತು ದೇವಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಗಳು ಕಾಣಿಸಿಕೊಂಡಿವೆ. ಇನ್ನೊಂದೆಡೆ ಕೋಲಾರ ಜಿಲ್ಲೆಯ ಓಬಟ್ಟಿ ಗ್ರಾಮದ ವ್ಯಾಪ್ತಿಯಲ್ಲಿಯೂ ಚಿರತೆ ಅಲ್ಲಿನ ಜನರನ್ನು ಕಾಡುತ್ತಿದೆ.

ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನವನ್ನು ಕೂಡ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಬಂದ್ ಮಾಡಲಾಗಿತ್ತು. ಅತ್ತ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಅರಣ್ಯದಂಚಿನ ಪ್ರದೇಶಗಳಲ್ಲಿ ಚಿರತೆ ದಾಳಿ ವಿಷಯ ಆಗಾಗ ಕೇಳಿಬರುತ್ತಿದೆ. ಇಷ್ಟು ಸಾಲದೆಂಬಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಲವು ಗ್ರಾಮಗಳಲ್ಲಿಯೂ ಚಿರತೆಗಳು ಜನರಲ್ಲಿ ಭಯವನ್ನು ಹುಟ್ಟಿಸಿವೆ. ಶಿವಮೊಗ್ಗದಲ್ಲಿಯೂ ಚಿರತೆ ಹಾವಳಿಯ ಸುದ್ದಿ ಕೇಳಿ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಕರಡಿಗಳು ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡಿವೆ. ಒಟ್ಟಿನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಕಾಡು ಪ್ರಾಣಿಗಳು ಜನರನ್ನು ಭಯಭೀತರನ್ನಾಗಿಸಿವೆ.

ಹಾಗೆ ನೋಡಿದರೆ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ದಾಳಿ ಹೊಸತೇನೂ ಅಲ್ಲ. ಚಿರತೆಗಳು ನೇರವಾಗಿ ರೈತರ ಕೊಟ್ಟಿಗೆಗಳಿಗೆ ಹೋಗಿ ಕುರಿ, ಮೇಕೆ, ಕರುಗಳನ್ನು ತಿಂದು ಹಾಕುತ್ತಿವೆ. ವರ್ಷಗಳು ಕಳೆದಂತೆ ಮಾನವ ಮತ್ತು ವನ್ಯ ಜೀವಿ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಕಾಡು ಪ್ರಾಣಿಗಳು ವಾಸಿಸುತ್ತಿದ್ದ ಜಾಗವನ್ನು ನಿಧಾನವಾಗಿ ಮಾನವರು ಅತಿಕ್ರಮಣ ಮಾಡಿಕೊಳ್ಳುತ್ತಿರುವುದು. ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶಗಳಲ್ಲಿ ರೆಸಾರ್ಟ್‌ಗಳು, ವಸತಿ ಗೃಹಗಳು ಅಣಬೆಗಳಂತೆ ಏಳುತ್ತಿವೆ. ಅರಣ್ಯದಂಚಿನಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸುವುದಷ್ಟೇ ಪ್ರವಾಸೋದ್ಯಮ ಎಂಬ ವಾತಾವರಣ ಆರಂಭವಾಗಿದೆ. ಅಣೆಕಟ್ಟುಗಳು, ಹೈಟೆನ್ಷನ್ ವೈರುಗಳು, ಪ್ರವಾಸಿ ತಾಣಗಳು ಮುಂತಾದ ಹೆಸರಿನಲ್ಲಿ ಅರಣ್ಯದಲ್ಲಿ ನಡೆಸುತ್ತಿರುವ ಅತಿಕ್ರಮಣ ಅವ್ಯಾಹತವಾಗಿ ಮುಂದುವರಿದಿದೆ. ಕಾಡಿನ ಮೇಲಿನ ಒತ್ತಡದಿಂದಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದೆ.

ಈ ಅತಿಕ್ರಮಣದ ಫಲವಾಗಿ ಕಾಡು ಪ್ರಾಣಿಗಳು ಕಾಡು ಬಿಟ್ಟು ವಿಧಿಯಿಲ್ಲದೆ ನಾಡಿಗೆ ಬರುತ್ತಿವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿಲ್ಲ ಬದಲಾಗಿ ಮರಗಳನ್ನು ಕಡಿದು ಕಾಡನ್ನೇ ನಾಡನ್ನಾಗಿ ಮಾಡಲಾಗುತ್ತಿದೆ. ನಾಗರಹೊಳೆ, ಬಂಡೀಪುರ, ಪಶ್ಚಿಮ ಘಟ್ಟಗಳ ಅರಣ್ಯಗಳಲ್ಲಿ ಹುಲಿ, ಚಿರತೆ, ಆನೆ, ಕರಡಿ, ಕಾಡುಕೋಣ, ಕಾಡೆಮ್ಮೆ, ಜಿಂಕೆಗಳು ಸೇರಿದಂತೆ ಅನೇಕ ಬಗೆಯ ವನ್ಯಜೀವಿಗಳು ನೆಲೆಸಿವೆ. ಇವುಗಳಿಗೆ ಆಹಾರ, ನೀರು ಮತ್ತು ಸಂತಾನ ಅಭಿವೃದ್ಧಿಗೆ ಸಾಕಷ್ಟು ಸ್ಥಳಾವಕಾಶದ ಅಗತ್ಯವಿದೆ. ಮುಖ್ಯವಾಗಿ ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯದ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ಇದರ ಮುಖ್ಯ ಪರಿಣಾಮವೆಂದರೆ ಒಂದು ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಸಂಪರ್ಕವೇ ಇಲ್ಲದಂತಾಗಿದೆ. ಈ ರೀತಿಯ ಸಂಪರ್ಕದ ಕೊರತೆಯೇ ಕಾಡು ಪ್ರಾಣಿಗಳು ಊರಿಗೆ ಬರಲು ಪ್ರಮುಖ ಕಾರಣವಾಗಿದೆ. ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರಲು ಕಾಡಿನಲ್ಲಿ ಆಹಾರದ ಕೊರತೆಯೊಂದೇ ಕಾರಣವಲ್ಲ. ಕಾಡಿನಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗಲೂ ಕಾಡು ಪ್ರಾಣಿಗಳು ಹೊಸ ಜಾಗವನ್ನು ಹುಡುಕುವ ಬರದಲ್ಲಿ ನಾಡಿಗೆ ಬರುತ್ತವೆ. ಕಾಡು ಮತ್ತು ನಾಡಿನ ಗಡಿಗಳನ್ನು ಸೃಷ್ಟಿಸಿದವರು ಮನುಷ್ಯರೇ ಹೊರತು ಪ್ರಾಣಿಗಳಲ್ಲ. ಪ್ರಾಣಿಗಳು ಈ ರೀತಿಯ ಅವೈಜ್ಞಾನಿಕವಾದ ಗಡಿಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಅವುಗಳಿಗೆ ಇವುಗಳ ಗೋಡವೆಯೇ ಇರುವುದಿಲ್ಲ. ಕಂಡದ್ದೆಲ್ಲವನ್ನು ಕಾಡು ಪ್ರಾಣಿಗಳು ಪರಿಸರದ ಒಂದು ಭಾಗವಾಗಿಯೇ ಅರ್ಥೈಸಿಕೊಳ್ಳುತ್ತವೆ.

ಉಳಿದ ಪ್ರಾಣಿಗಳಿಗೆ ಹೋಲಿಸಿದರೆ ಚಿರತೆಗಳು ಹೆಚ್ಚಾಗಿ ನಾಡಿಗೆ ಬರುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ. ಆದರೆ ಚಿರತೆಗಳು ಕಾಡಿನಿಂದ ನಾಡಿಗೆ ಬರುವುದು ಸಾಮಾನ್ಯವಾದ ವಿಷಯ. ಅವುಗಳು ಹೆಚ್ಚಾಗಿ ಇತ್ತೀಚೆಗೆ ಜನರ ಕಣ್ಣಿಗೆ ಬೀಳುತ್ತಿರುವುದು ಮತ್ತು ಜನರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಜನರಲ್ಲಿ ಭಯ ಹುಟ್ಟಿದೆ. ಸಾಮಾನ್ಯವಾಗಿ ಇತ್ತೀಚೆಗೆ ರಾತ್ರಿ ವೇಳೆ ಹಲವು ಕಾಡು ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ಜನವಸತಿ ಪ್ರದೇಶ ಅಥವಾ ರೈತರ ಜಮೀನುಗಳಿಗೆ ಮೊದಲಿಗಿಂತ ಹೆಚ್ಚಾಗಿ ಬರುತ್ತಿವೆ. ಹೀಗೆ ಬಂದ ಪ್ರಾಣಿಗಳಲ್ಲಿ ಹಲವು ವಾಪಸ್ ಹೋಗುತ್ತವೆ. ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಬ್ಬನ್ನು ಸ್ಪಲ್ಪ ಹೆಚ್ಚಾಗಿ ಬೆಳೆಯುವುದರಿಂದ ರಾತ್ರಿ ಬಂದ ಚಿರತೆಗಳು ಈ ಕಬ್ಬಿನ ಗದ್ದೆಗಳಲ್ಲಿ ಸೇರಿಕೊಳ್ಳುತ್ತಿವೆ ಮತ್ತು ಕಬ್ಬಿನ ಗದ್ದೆಗಳಲ್ಲಿಯೇ ಮರಿಗಳನ್ನು ಹಾಕುತ್ತಿರುವ ಹಲವು ಘಟನೆಗಳು ನಡೆದಿವೆ. ಕಬ್ಬಿನ ಗದ್ದೆಗಳು ಕಾಡಿನಿಂದ ನಾಡಿಗೆ ಬರುವ ಚಿರತೆಗಳಿಗೆ ನೆಚ್ಚಿನ ತಾಣಗಳಾಗಿ ಪರಿವರ್ತನೆಯಾಗಿವೆ.

ಚಿರತೆ, ಹುಲಿ, ಸಿಂಹಗಳು ದೊಡ್ಡ ಮಾಂಸಾಹಾರಿ ಪ್ರಾಣಿಗಳಾದರೂ ಪ್ರತಿಯೊಂದು ಪ್ರಾಣಿಯ ಸ್ವಭಾವ ಭಿನ್ನವೇ ಆಗಿದೆ. ಹುಲಿ ಮತ್ತು ಸಿಂಹಗಳಿಗೆ ಹೋಲಿಸಿದರೆ ಚಿರತೆ ಸ್ವಲ್ಪಭಿನ್ನ. ಅದಕ್ಕೆ ಹೊಂದಾಣಿಕೆ ಮತ್ತು ಮೋಸದ ಸ್ವಭಾವ ಜಾಸ್ತಿ. ಅರಣ್ಯದಲ್ಲಿ ಬದುಕುವಷ್ಟೇ ನಿರಾಳವಾಗಿ ಚಿರತೆ ರೈತರ ಕಬ್ಬಿನ ಗದ್ದೆಗಳಲ್ಲಿ, ದೊಡ್ಡ ದೊಡ್ಡ ಪೊದೆಗಳಲ್ಲಿ, ಹುಲ್ಲುಗಾವಲಿನಲ್ಲಿ, ದಟ್ಟ ಕುರುಚಲು ಗಿಡಗಳ ನಡುವೆ ನಿರಾತಂಕವಾಗಿ ಬದುಕು ಸಾಗಿಸುತ್ತದೆ. ಊರಿನಲ್ಲಿದ್ದ ನಾಯಿಗಳನ್ನು ತಿನ್ನಲು ಆರಂಭಿಸಿದ ಚಿರತೆಗಳು ಈಗ ಸೀದಾ ರೈತರ ಕೊಟ್ಟಿಗೆಗಳಿಗೆ ಪ್ರವೇಶಿಸಿ ಕುರಿ, ಮೇಕೆ ಮತ್ತು ಹಸು-ಎಮ್ಮೆಯ ಕರುಗಳನ್ನು ಹಿಡಿದು ತಿನ್ನಲು ಆರಂಭಿಸಿವೆ. ಇದಕ್ಕೆ ಅಡ್ಡ ಬಂದಾರು ಎಂಬ ಭಯದಿಂದ ಮನುಷ್ಯರು ಕಂಡರೆ ಮನುಷ್ಯರ ಮೇಲೂ ದಾಳಿ ನಡೆಸುತ್ತಿವೆ. ಈ ರೀತಿ ಮನುಷ್ಯರ ಮೇಲೆ ಚಿರತೆಗಳು ನಡೆಸುವ ದಾಳಿಗಳ ಘಟನೆಗಳು ಹೆಚ್ಚಾಗಿಯೇ ಸಂಭವಿಸುತ್ತಿವೆ.

ಬದಲಾಗುತ್ತಿರುವ ಗ್ರಾಮೀಣ ಪ್ರದೇಶಗಳ ಬೌಗೋಳಿಕ ಪರಿಸ್ಥಿತಿ ಕೂಡ ಚಿರತೆಗಳು ನಾಡಿಗೆ ಆಗಮಿಸಲು ಕಾರಣವಾಗಿವೆ. ಮೊದಲೆಲ್ಲ ಊರಿಂದಾಚೆಗೆ ಹೊಲ, ತೋಟ, ಜಮೀನುಗಳಿದ್ದವು, ಊರ ಒಳಗೆ ಗುಂಪು ಗುಂಪಾಗಿ ಮನೆಗಳಿರುತ್ತಿದ್ದವು. ಜಮೀನುಗಳಿಗೆ ಕತ್ತಲಾದ ನಂತರ ಜನರು ಹೋಗುವುದು ತೀರಾ ಕಡಿಮೆ ಇತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ ಇದೆ. ಊರ ಒಳಗಿದ್ದವರೆಲ್ಲಾ ಹೊಸದಾಗಿ ಮನೆಗಳನ್ನು ತಮ್ಮ ತಮ್ಮ ಹೊಲ, ತೋಟ ಮತ್ತು ಜಮೀನುಗಳಲ್ಲಿ ಕಟ್ಟಿಕೊಂಡು ಊರ ಹೊರಗಿದ್ದಾರೆ. ಕೃಷಿ ಭೂಮಿ ಕೂಡ ಚಿರತೆಗಳು ವಾಸ ಸ್ಥಾನಗಳಾಗಿದ್ದವು. ರೈತರು ತಮ್ಮ ಜಮೀನುಗಳಲ್ಲಿಯೇ ಮನೆಗಳನ್ನು ಕಟ್ಟಿಕೊಂಡು, ಹಗಲಿನ ವೇಳೆ ವಿದ್ಯುತ್ ಸರಿಯಾಗಿ ನೀಡದಿರುವುದರಿಂದ ರಾತ್ರಿ ವೇಳೆ ಮೋಟಾರು ಹಾಕಲು, ನೀರು ಹಾಯಿಸಲು ತಮ್ಮ ಜಮೀನುಗಳಲ್ಲಿ ಸಂಚರಿಸುತ್ತಾರೆ. ಈ ರೀತಿ ಮನುಷ್ಯನ ಸಂಚಾರ ಯಾವಾಗ ಹಗಲಿರುಳೆನ್ನದೆ ಅವ್ಯಾಹತವಾಗಿ ನಡೆಯಿತೋ ಆಗ ಚಿರತೆಗಳು ಜನ ಸಾಮಾನ್ಯರ ಕಣ್ಣಿಗೆ ಬೀಳುವುದು ಮತ್ತು ಅವುಗಳ ಉಪಟಳ ಹೆಚ್ಚಾಯಿತು. ಜಮೀನುಗಳಲ್ಲಿ ಚಿರತೆ ಕಂಡ ತಕ್ಷಣ ಎಲ್ಲರೂ ಚಿರತೆಯನ್ನು ಸೆರೆ ಹಿಡಿಯಿರಿ ಎಂದು ಗಲಾಟೆ ಆರಂಭಿಸುತ್ತಾರೆ. ಇವರ ಒತ್ತಾಯಕ್ಕೆ ಮಣಿದು ಅರಣ್ಯ ಇಲಾಖೆಯವರು ಬೋನುಗಳನ್ನು ಇಟ್ಟು ಚಿರತೆಯನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಬೋನಿಗೆ ಬಿದ್ದ ಚಿರತೆಯನ್ನು ಎಲ್ಲಿಗೆ ಬಿಡುತ್ತಾರೆ? ಮತ್ತೆ ಪಕ್ಕದ ಅರಣ್ಯಕ್ಕಲ್ಲದೆ ಮತ್ತೆಲ್ಲಿ ಬಿಡಲು ಸಾಧ್ಯ? ಚಿರತೆಯನ್ನು ಹಿಡಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿಲ್ಲ. ಇಂತಹ ಚಿರತೆಗಳನ್ನು ಬೇರೆ ಅರಣ್ಯಕ್ಕೆ ಬಿಟ್ಟರೆ ಅಲ್ಲಿ ಮತ್ತೆ ಸಂಘರ್ಷ ಆರಂಭವಾಗುತ್ತದೆ. ಹೀಗೆ ಹೊಸ ಪ್ರದೇಶಕ್ಕೆ ಹೊಂದಿಕೊಳ್ಳದ ಚಿರತೆ ತನ್ನ ಹಳೆಯ ಸ್ಥಳಕ್ಕೆ ಬರಲು ಪ್ರಯತ್ನಿಸುತ್ತದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ರೈತರು ತಮ್ಮ ಹೊಲಗಳಲ್ಲಿ ಕೆಲಸ ಮಾಡಲು ಹೆದರುತ್ತಾರೆ, ಆದರೆ ಚಿರತೆಗಳು ಮತ್ತು ಅವುಗಳ ಮರಿಗಳು ತಮ್ಮದಲ್ಲದ ತಪ್ಪಿಗೆ ಜನರ ಆಕ್ರೋಶಕ್ಕೆ ಗುರಿಯಾಗುತ್ತಿವೆ. ರಾಜ್ಯದಲ್ಲಿ ಚಿರತೆ-ಮಾನವ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚಿರತೆ ದಾಳಿಯಲ್ಲಿ ಸಾವನ್ನಪ್ಪಿದವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲು ಕರ್ನಾಟಕ ಸರಕಾರ ಮುಂದಾಗಿದೆ.

ಅರಣ್ಯ ಇಲಾಖೆ, ಸರಕಾರೇತರ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷಗಳು ಹೆಚ್ಚುತ್ತಿರುವ ಪ್ರದೇಶಗಳ ವ್ಯಾಪ್ತಿಯ ಜನರಿಗೆ ಸರಿಯಾದ ಅರಿವು ಮೂಡಿಸಬೇಕಾಗಿದೆ. ವನ್ಯ ಜೀವಿಗಳು ನಾಡಿಗೆ ಬರದಂತೆ ತಡೆಯುವ ಕ್ರಮಗಳನ್ನು ತೆಗೆದುಕೊಳ್ಳುವಾಗ ಕಾಡು ಪ್ರಾಣಿಗಳಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ಅರಣ್ಯದಂಚಿನಲ್ಲಿ ಪ್ರಾಣಿಗಳು ಹೊರಬರದಂತೆ ದೊಡ್ಡ ದೊಡ್ಡ ಹಳ್ಳಗಳನ್ನು ತೋಡಬೇಕು. ಸೌರಬೇಲಿಗಳ ನಿರ್ಮಾಣ ಮಾಡಬೇಕು. ಈಗ ಇರುವ ಸೌರಬೇಲಿ ವ್ಯವಸ್ಥೆ ಅಷ್ಟು ವ್ಯವಸ್ಥಿತವಾಗಿಲ್ಲ ಮತ್ತು ದುರಸ್ತಿ ಕಾರ್ಯಗಳು ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ.

ಅಂಕಿಅಂಶಗಳ ವಿಶ್ಲೇಷಣೆಯ ಪ್ರಕಾರ, ಚಿರತೆಗಳ ಸಾವಿನಲ್ಲಿ ಶೇ. 50ಕ್ಕಿಂತ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತಗಳಿಂದ ನಡೆದಿವೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಸೊಸೈಟಿ ಆಫ್ ಇಂಡಿಯಾ (ಡಬ್ಲ್ಯುಪಿಎಸ್‌ಐ) ಪ್ರಕಾರ, 2022ರಲ್ಲಿ ಭಾರತದಲ್ಲಿ ಒಟ್ಟು 502 ಚಿರತೆಗಳು ವಿವಿಧ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಈ ಪೈಕಿ, ದೇಶಾದ್ಯಂತ 159 ಕಳ್ಳಬೇಟೆ ಮತ್ತು 343 ಸಾವುಗಳು ರೋಗಗ್ರಸ್ತವಾಗಿ ಸರಿಯಾದ ಚಿಕಿತ್ಸೆ ದೊರೆಯದಿದ್ದುದರಿಂದ ಆಗಿವೆ. ಈ ಅಂಕಿಅಂಶಗಳು ಚಿರತೆಗಳ ಭೀಕರ ಸ್ಥಿತಿಯನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ. ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಕಾಡಿನಲ್ಲಿಯೇ ಉಳಿಸಲು ಏನು ಮಾಡಬೇಕು? ಆಭಿವೃದ್ಧಿ ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ಹಾಳಾಗಿರುವ ಕಾಡು ಪ್ರಾಣಿಗಳ ನೆಲೆಯನ್ನು ಸರಿಪಡಿಸುವುದು ಹೇಗೆ? ಮುಂತಾದ ವಿಷಯಗಳ ಕುರಿತು ಇಂದು ಗಂಭೀರ ಚರ್ಚೆಗಳು ನಡೆಯಬೇಕಾಗಿರುವ ಜೊತೆಗೆ ಈ ಚರ್ಚೆಗಳಿಂದ ಬರುವ ಫಲಿತಾಂಶಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಒಂದಂತೂ ಸತ್ಯ, ಕಾಡು ಸರಿ ಹೋದರೆ ಮಾತ್ರ ಮನುಷ್ಯ ನಾಡಿನಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯ. ಇಲ್ಲದಿದ್ದರೆ ಕಾಡು ಪ್ರಾಣಿಗಳ ಮತ್ತು ಮನುಷ್ಯರ ನಡುವಿನ ಸಂಘರ್ಷಗಳು ಮತ್ತಷ್ಟು ಹೆಚ್ಚಾಗಲಿವೆ.

Similar News