ಬಿಬಿಸಿ ಸ್ವತಂತ್ರ ಸಂಸ್ಥೆಯಾಗಿದೆ: ಮೋದಿ ಕುರಿತ ಸಾಕ್ಷ್ಯಚಿತ್ರದ ಬಗ್ಗೆ ರಿಷಿ ಸುನಾಕ್‌ ವಕ್ತಾರರ ಹೇಳಿಕೆ

Update: 2023-02-02 14:26 GMT

ಲಂಡನ್: 2002 ರ ಗುಜರಾತ್ ಗಲಭೆ‌ ಮತ್ತು ಪ್ರಧಾನಿ ಮೋದಿಯ ಪಾತ್ರದ ಕುರಿತ ಸಾಕ್ಷ್ಯಚಿತ್ರದ ವಿರುದ್ಧ ಭಾರತದಲ್ಲಿ ವ್ಯಾಪಕ ಕೋಲಾಹಲವೆದ್ದಿರುವ ನಡುವೆ "ಬಿಬಿಸಿ ಸ್ವತಂತ್ರ ಸಂಸ್ಥೆಯಾಗಿದೆ" ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರ ವಕ್ತಾರರು ಬುಧವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

India: The Modi Question ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರದ ಎರಡು ಸಂಚಿಕೆಗಳು ಜನವರಿ 17 ಮತ್ತು ಜನವರಿ 24 ರಂದು ಬಿಡುಗಡೆಯಾಯಿತು. ಸಾಕ್ಷ್ಯಚಿತ್ರವು 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ಮತ್ತು ನಂತರದ ದಾಖಲೆಯನ್ನು ಪರಿಶೀಲಿಸಿದೆ.

"ಬಿಬಿಸಿ ತನ್ನ ಪ್ರಕಟನೆಯಲ್ಲಿ ಸ್ವತಂತ್ರವಾಗಿದೆ ಮತ್ತು ನಾವು ಭಾರತವನ್ನು ಪ್ರಮುಖ ಅಂತರರಾಷ್ಟ್ರೀಯ ಪಾಲುದಾರ ಎಂದು ಪರಿಗಣಿಸುವುದನ್ನು ಮುಂದುವರಿಸುತ್ತೇವೆ ಎಂದು ಒತ್ತಿಹೇಳುತ್ತೇವೆ" ಎಂದು ವಕ್ತಾರರು ಸಾಕ್ಷ್ಯಚಿತ್ರದ ವಿರುದ್ಧ ಭಾರತದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದರು. "ಮುಂಬರುವ ದಶಕಗಳಲ್ಲಿ ನಾವು ಭಾರತದೊಂದಿಗಿನ ನಮ್ಮ ಸಂಬಂಧದಲ್ಲಿ ಹೆಚ್ಚು ಹೂಡಿಕೆ ಮಾಡಲಿದ್ದೇವೆ ಮತ್ತು ಅದು ಸರಿಯಾದ ನಿರ್ಧಾರ ಎಂಬುವುದರ ಬಗ್ಗೆ ನಮಗೆ ವಿಶ್ವಾಸವಿದೆ." ಎಂದು ಹೇಳಿದ್ದಾರೆ.

BBC ಭಾರತದಲ್ಲಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡದಿದ್ದರೂ, ಜನವರಿ 21 ರಂದು ಕೇಂದ್ರವು ಯೂಟ್ಯೂಬ್ ಮತ್ತು ಟ್ವಿಟರ್‌ಗೆ ಸಾಕ್ಷ್ಯಚಿತ್ರದ ನಿರ್ದಿಷ್ಟ ಭಾಗಗಳನ್ನು ಹಂಚಿಕೊಳ್ಳುವ ಲಿಂಕ್‌ಗಳನ್ನು ತೆಗೆದುಹಾಕಲು ನಿರ್ದೇಶಿಸಿದೆ. ಹೀಗಿದ್ದರೂ, ಸಾಕ್ಷ್ಯಚಿತ್ರದ ಪೈರೇಟೆಡ್ ಆವೃತ್ತಿಗಳನ್ನು ಪ್ರದರ್ಶಿಸುವ ಪ್ರಯತ್ನಗಳನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಅಂಬೇಡ್ಕರ್ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳು ಹಾಗೂ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಕೋಲ್ಕತ್ತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಮಾಡಲಾಯಿತು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಕ್ಷ್ಯಚಿತ್ರವು ವಸ್ತುನಿಷ್ಠತೆಯನ್ನು ಹೊಂದಿಲ್ಲ ಮತ್ತು "ವಸಾಹತುಶಾಹಿ ಮನಸ್ಥಿತಿಯನ್ನು" ಚಿತ್ರಿಸುತ್ತದೆ ಎಂದು ಹೇಳಿತ್ತು.

Similar News