ತನ್ನ ನಾಯಕರ ಲಾಭಕ್ಕಾಗಿ ಎಲ್ಐಸಿ, ರಾಷ್ಟ್ರೀಕೃತ ಬ್ಯಾಂಕ್ ಗಳ ಹಣವನ್ನು ಬಿಜೆಪಿ ಬಳಸುತ್ತಿದೆ: ಬ್ಯಾನರ್ಜಿ
Update: 2023-02-02 22:14 IST
ಹೊಸದಿಲ್ಲಿ, ಫೆ. 2: ತನ್ನ ಪಕ್ಷದ ಕೆಲವು ನಾಯಕರ ಲಾಭಕ್ಕಾಗಿ ಎಲ್ಐಸಿ(LIC) ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಜನರ ಠೇವಣಿಯನ್ನು ಬಿಜೆಪಿ(BJP) ಬಳಸುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಗುರುವಾರ ಹೇಳಿದ್ದಾರೆ.
ಪೂರ್ವ ವರ್ಧಮಾನ್ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ವರಿಷ್ಠೆ ಬ್ಯಾನರ್ಜಿ, ಬಜೆಟ್ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಬಜೆಟ್ ಮಂಡನೆಯಾದ ಬಳಿಕ ಶೇರು ಮಾರುಕಟ್ಟೆ ಭಾರೀ ಕುಸಿತಕ್ಕೆ ಸಾಕ್ಷಿಯಾಯಿತು... ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ಹಲವರು ಕರೆ ಮಾಡಿ ನನಗೆ ತಿಳಿಸಿದರು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಬಜೆಟ್ ಸುಳ್ಳುಗಳಿಂದ ತುಂಬಿದೆ ಎಂದು ವಿವರಿಸಿದ ಬ್ಯಾನರ್ಜಿ, 2024ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರಕಾರ ದೊಡ್ಡ ದೊಡ್ಡ ಪ್ರತಿಪಾದನೆ ಮಾಡುತ್ತಿದೆ ಎಂದರು.