ಹೊಸ ತೆರಿಗೆ ವ್ಯವಸ್ಥೆ: ಒಂದು ಕೋಟಿ ಮಂದಿಗೆ ಲಾಭ

Update: 2023-02-03 04:39 GMT

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ ಹೊಸ ತೆರಿಗೆ ವ್ಯವಸ್ಥೆಯಡಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಏಳು ಲಕ್ಷ ರೂಪಾಯಿಗೆ ಹೆಚ್ಚಿಸಿರುವುದರಿಂದ 5-7 ಲಕ್ಷ ರೂಪಾಯಿ ಆದಾಯ ಹೊಂದಿರುವ ಸುಮಾರು ಒಂದು ಕೋಟಿ ಮಂದಿಗೆ ಲಾಭವಾಗುತ್ತದೆ ಎಂದು ಹಣಕಾಸು ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ನಿರ್ದಿಷ್ಟಪಡಿಸಿದ ಉಳಿತಾಯ ಸಾಧನಗಳಾದ ಪಿಪಿಎಫ್ ಅಥವಾ 5 ವರ್ಷ ಅವಧಿಯ ನಿಶ್ಚಿತ ಠೇವಣಿಯ ಸೌಲಭ್ಯವನ್ನು ಬಳಸಿಕೊಳ್ಳಲು ಈ ಪೈಕಿ ಬಹಳಷ್ಟು ಮಂದಿ ಸಾಧ್ಯವಾಗದ ಹಿನ್ನಲೆಯಲ್ಲಿ ಅವರ ತೆರಿಗೆ ಹೊಣೆಗಾರಿಕೆ ಅಧಿಕವಾಗಿತ್ತು ಎಂದು ಉನ್ನತ ಮೂಲಗಳು ಹೇಳಿವೆ.

"ಹೊಸ ವ್ಯವಸ್ಥೆಯಲ್ಲಿ ಇಂಥ ವ್ಯಕ್ತಿಗಳು ಉಳಿತಾಯದ ಕಾರಣದಿಂದ ತೆರಿಗೆ ಕಡಿತಕ್ಕೆ ಕ್ಲೇಮ್ ಸಲ್ಲಿಸದಿದ್ದರೂ, ತೆರಿಗೆ ಪಾವತಿಸಬೇಕಿಲ್ಲ. ವಿಲೇವಾರಿ ಮಾಡುವ ಆದಾಯ ಹೆಚ್ಚಳದಿಂದಾಗಿ ಆದಾಯ ಮಟ್ಟ ಹೆಚ್ಚಿದಂತೆ ಉಳಿತಾಯ ಕೂಡಾ ಹೆಚ್ಚುತ್ತದೆ" ಎಂದು ಮೂಲಗಳು ತಿಳಿಸಿವೆ.

ನಿರ್ಮಲಾ ಸೀತಾರಾಮನ್ ಬುಧವಾರ ಮಂಡಿಸಿದ ತಮ್ಮ ಐದನೇ ಬಜೆಟ್‌ನಲ್ಲಿ, ಹೊಸ ತೆರಿಗೆ ವ್ಯವಸ್ಥೆಯನ್ನು ಪ್ರಕಟಿಸಿದ್ದರು. ತೆರಿಗೆ ವಿನಾಯ್ತಿ ಮಟ್ಟವನ್ನು 2.5 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿರುವುದು ಕೂಡಾ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ.

ಎಲ್ಲ ಆದಾಯ ಹಂತಗಳಲ್ಲಿ ಕೂಡಾ ಒಟ್ಟು ತೆರಿಗೆ ಕಡಿಮೆಯಾಗಿದೆ ಎನ್ನುವುದು ಸರ್ಕಾರದ ವಾದ. ದೇಶದಲ್ಲಿ ಸುಮಾರು ಆರು ಕೋಟಿ ಆಆಯ ತೆರಿಗೆ ಪಾವತಿದಾರರಿದ್ದು, ಇದೀಗ ವಿನಾಯ್ತಿ ಮಟ್ಟ 3 ಲಕ್ಷ ರೂಪಾಯಿ ಆಗಿರುವುದರಿಂದ, ಇವರು ಯಾವುದೇ ಹೊಣೆಗಾರಿಕೆ ಹೊಂದಿಲ್ಲದಿದ್ದರೂ, ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. 2022ರ ಮಾರ್ಚ್‌ವರೆಗೆ 6.4 ಕೋಟಿ ಮಂದಿ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರು.

Similar News