ಸವದತ್ತಿಯ ರಂಗ ನಾಯಕ ಝಕೀರ್ ನದಾಫ್

ರಂಗ ಪ್ರಸಂಗ

Update: 2023-02-03 05:33 GMT

‘ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ’ಗೆ ಬೆನ್ನೆಲುಬಾದ 54 ವರ್ಷ ವಯಸ್ಸಿನ ಝಕೀರ್ ನದಾಫ್ ರಂಗ ಸಂಸ್ಕಾರದ ಮೂಲಕ ಸವದತ್ತಿಯಲ್ಲಿ ಬದಲಾವಣೆ ತಂದಿದ್ದಾರೆ. ಅವರಿಗೆ ವಂದನೆ, ಅಭಿವಂದನೆ.

ಅವರು ಓದಿದ್ದು ಧಾರವಾಡದ ಎನ್‌ಟಿಟಿಎಫ್‌ನಲ್ಲಿ ಟೂಲ್ ಡಿಸೈನ್ ಡ್ರಾಯಿಂಗ್ ಡಿಪ್ಲೊಮಾ ಕೋರ್ಸ್. ಆದರೆ ವೃತ್ತಿ ಕೋಳಿ ಸಾಕಣೆ. ಅಪ್ಪಿಕೊಂಡಿದ್ದು ರಂಗಭೂಮಿಯನ್ನು. ಹಾಗೆ ರಂಗದ ನಂಟು ಬೆಳೆದುದು ಅನೇಕ ವರ್ಷಗಳಿಂದ. ಇದರ ಪರಿಣಾಮ; ಪರಸಗಡ ನಾಟಕೋತ್ಸವವನ್ನು ಪ್ರತೀ ವರ್ಷ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಆಯೋಜಿಸುತ್ತಾರೆ. ಅದು ‘ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ’ ಮೂಲಕ. ಅವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಝಕೀರ್ ನದಾಫ್. ಕಳೆದ ವಾರ ಸವದತ್ತಿಯ ಕೋಟೆ ಆವರಣದಲ್ಲಿ ಪರಸಗಡ ನಾಟಕೋತ್ಸವ ಹಮ್ಮಿಕೊಂಡಿದ್ದರು. ನಾಟಕಕ್ಕೆ ಮುಂಚೆ ವೇದಿಕೆ ಕಾರ್ಯಕ್ರಮ ಇರಲಿಲ್ಲ. ನಾಟಕ ಮುಗಿದ ನಂತರವೂ ಇಂತಹ ಕಾರ್ಯಕ್ರಮವಿಲ್ಲ. ನೇರ ನಾಟಕ ಆರಂಭವಾಗುತ್ತಿತ್ತು. ತಡವಾಯಿತೆಂದು ಏದುಸಿರು ಬಿಡುತ್ತ ಪ್ರೇಕ್ಷಕರು ಧಾವಿಸಿ ಬರುತ್ತಿದ್ದರು. ಹೀಗೆ 26 ವರ್ಷಗಳಿಂದ ‘ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ’ಯು ಸವದತ್ತಿಯಲ್ಲಿ ಗಟ್ಟಿಯಾಗಿ ಬೇರು ಬಿಟ್ಟ ಪರಿಣಾಮ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಝಕೀರ್ ಅವರ ತಂಡಕ್ಕೆ ಹೊಸಬರು ಸೇರಿಕೊಳ್ಳುತ್ತಿದ್ದಾರೆ. ಅವರ ಹಾಗೆ ಬೇರೆ ಬೇರೆ ವೃತ್ತಿಯಲ್ಲಿರುವವರು ಅವರ ತಂಡದಲ್ಲಿದ್ದಾರೆ. ಈ ಸಂಘಟನೆಯ ಅಧ್ಯಕ್ಷರಾದ ಶ್ರೀನಿವಾಸ ಗದಗ ಅವರು ಪುರೋಹಿತರು. ಕಾರ್ಯದರ್ಶಿ ಶಿವಾನಂದ ತಾರಿಹಾಳ ಅವರು ಶಿಕ್ಷಕರು. ಸಂಘಟನೆಯ ನಿರ್ದೇಶಕ ಮಯೂರ ಶಿಂಧೆ ಅವರು ಬ್ಯಾಂಕ್ ಉದ್ಯೋಗಿ. ಇನ್ನೊಬ್ಬ ನಿರ್ದೇಶಕ ಗೋಪಾಲ ಫಾಸಲಕರ ಅವರು ಖಾಸಗಿ ಬ್ಯಾಂಕ್ ನೌಕರ. ನಿತ್ಯ ಬೆಳಗ್ಗೆ ತಮ್ಮ ತಮ್ಮ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಅವರು ಸಂಜೆ ಸೇರಿ ರಂಗ ಚಟುವಟಕೆಗಳನ್ನು ನಡೆಸುತ್ತಾರೆ. ಕಳೆದ ವರ್ಷ ಸಂಘಟನೆಯ ಬೆಳ್ಳಿಹಬ್ಬದ ಅಂಗವಾಗಿ ರಾಜ್ಯದ ವಿವಿಧ ತಂಡಗಳ 25 ನಾಟಕಗಳ ಉತ್ಸವವನ್ನು ಸವದತ್ತಿಯ ಕೋಟೆಯ ಆವರಣದಲ್ಲಿ ಸಂಘಟಿಸಿದ್ದರು. ಪರಸಗಡ ಎನ್ನುವುದು ಸವದತ್ತಿಯ ಮೂಲ ಹೆಸರು. ಸೌಗಂಧಿಪುರ- ಸೌಗಂಧವರ್ತಿಯಾಗಿ ನಂತರ ಸವದತ್ತಿಯಾಯಿತು ಎನ್ನಲಾಗುತ್ತಿದೆ. ಇದಕ್ಕಾಗಿ ಪರಸಗಡ ನಾಟಕೋತ್ಸವ ಎಂದು ಹೆಸರಿಡಲು ಕಾರಣ; ಕುತೂಹಲಕ್ಕಾದರೂ ಸವದತ್ತಿಯ ಮೊದಲಿನ ಹೆಸರು ಕೇಳಲಿ ಎನ್ನುವ ಆಶಯ ಅವರದು.

ಇಂತಹ ರಂಗ ಸಂಘಟನೆ ಶುರುವಾಗಿದ್ದು 1987ರಲ್ಲಿ. ಜಾರ್ಮ್ಸ್ ಕಲಾ ತಂಡ ಎಂದು ವೃತ್ತಿ ನಾಟಕಗಳನ್ನು ಝಕೀರ್ ಆಡುತ್ತಿದ್ದರು. ನಂತರ 1997ರಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಮೂಲಕ ಹವ್ಯಾಸಿ ನಾಟಕಗಳತ್ತ ವಾಲಿದರು. 1997ರಲ್ಲಿ ರಂಗಕರ್ಮಿ ವಿನೋದ ಅಂಬೇಕರ ಅವರು ಈ ಸಂಘಟನೆಗೆ ರಂಗ ತರಬೇತಿ ಶಿಬಿರ ನಡೆಸಿ, ‘ಮೃಚ್ಛಕಟಿಕ’ ನಾಟಕ ನಿರ್ದೇಶಿಸಿದರು. ಮರುವರ್ಷ ಮತ್ತೊಂದು ರಂಗ ತರಬೇತಿ ಶಿಬಿರವನ್ನು ವಿನೋದ ಅಂಬೇಕರ ಅವರೇ ಸಾರಥ್ಯ ವಹಿಸಿಕೊಂಡು, ಬಿ.ವಿ. ವೈಕುಂಠರಾಜು ಅವರ ‘ಉದ್ಭವ’ ನಾಟಕ ನಿರ್ದೇಶಿಸಿದರು. 1999ರಲ್ಲಿ ರಂಗಕರ್ಮಿ ಜಯತೀರ್ಥ ಜೋಶಿ ಅವರು ಎಂ.ಎಸ್.ಕೆ. ಪ್ರಭು ರಚಿತ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕವನ್ನು ನಿರ್ದೇಶಿಸಿ ಸವದತ್ತಿಯ ಕೋಟೆ ಆವರಣದಲ್ಲಿ ಪ್ರದರ್ಶಿಸಿದರು. ಅಲ್ಲಿಂದ ಶುರುವಾದ ನಾಟಕಗಳ ಪ್ರದರ್ಶನ ಈಗಲೂ ಮುಂದುವರಿದಿದೆ. ತಮ್ಮ ತಂಡಕ್ಕೆ ಬೇರೆ ಬೇರೆ ನಿರ್ದೇಶಕರನ್ನು ನಾಟಕ ನಿರ್ದೇಶಿಸಲು ಆಹ್ವಾನಿಸುತ್ತಾರೆ. ಇದರಿಂದ 30ಕ್ಕೂ ಅಧಿಕ ನಾಟಕಗಳನ್ನು ಆಡಿದ್ದಾರೆ ಜೊತೆಗೆ ರಾಜ್ಯದಾದ್ಯಂತ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ನಾಟಕೋತ್ಸವ ಹಮ್ಮಿಕೊಳ್ಳುವ ಮೂಲಕ ಬೇರೆ ಬೇರೆ ತಂಡಗಳನ್ನೂ ಆಹ್ವಾನಿಸುತ್ತಾರೆ. ನೀನಾಸಂ, ಸಾಣೇಹಳ್ಳಿ, ಜಮುರಾ ಅಲ್ಲದೆ ಮೈಸೂರು, ಧಾರವಾಡ ಹಾಗೂ ಕಲಬುರಗಿ ರಂಗಾಯಣಗಳ ನಾಟಕಗಳನ್ನು ಆಯೋಜಿಸಿದ್ದಾರೆ. ಹೀಗೆ ನಾಟಕಗಳನ್ನು ಆಡುತ್ತ, ಆಡಿಸುತ್ತ ಅವರು ರಂಗಾಸಕ್ತರನ್ನು ಹೆಚ್ಚಿಸುವುದರ ಜೊತೆಗೆ ತಂಡದವರೂ ಬದಲಾಗಿದ್ದಾರೆ. ಗೋಪಾಲ ಫಾಸಲಕರ ಅವರು ಬದುಕಿನಲ್ಲಿ ಹೇಗೆ ಇರಬೇಕು ಅಂತ ಅರಿತರು. ಶಿಂಧೆ ಅವರು ಈ ತಂಡಕ್ಕೆ ಸೇರುವ ಮೊದಲು ಊಟದ ತಾಟಿನಲ್ಲಿ ಊಟ ಬಿಡುತ್ತಿದ್ದರು. ಈಗ ಬಿಡುವುದಿಲ್ಲ. ಸಿಟ್ಟು, ಸೆಡವು ಕಡಿಮೆಯಾಗಿದೆ. ಸುಮ್ಮನಿರುವುದನ್ನು ಕಲಿತಿದ್ದಾರೆ. ಜೊತೆಗೆ ತಮ್ಮ ತಂದೆ ರುದ್ರಪ್ಪರಾಜಪ್ಪಶಿಂಧೆ ಹೆಸರಲ್ಲಿ ರಂಗ ಆರಾಧಕ ಪ್ರಶಸ್ತಿಯ ಪ್ರಾಯೋಜಕರಾಗಿದ್ದಾರೆ. ಹೀಗೆಯೇ ತಳ್ಳುಗಾಡಿಯಲ್ಲಿ ಹೊಟೇಲ್ ನಡೆಸುವ ಗಣೇಶ ಬಜೇರಿ ಗುಟ್ಕಾ ತಿನ್ನುವುದನ್ನು ಬಿಟ್ಟಿದ್ದಾರೆ. ಕಾಳಿನ ವ್ಯಾಪಾರಿ ಮಂಜು ಬೆಳವಡಿ ‘ನಾ ಕಂಡ ಕನಸು’ ಎಂಬ ಟೆಲಿಫಿಲ್ಮ್‌ನಲ್ಲಿ ನಟಿಸಿದ್ದಾರೆ. ಹೀಗೆ ವಿವಿಧ ವೃತ್ತಿಗಳಲ್ಲಿರುವ 30 ಸದಸ್ಯರಿದ್ದಾರೆ. ಮದುವೆಗೆ ಮೊದಲು ಈ ತಂಡದಲ್ಲಿದ್ದ ಅನಿತಾ ದಿನ್ನಿಮಣಿ ಅವರು ಮದುವೆ ನಂತರ ದುಬೈನಲ್ಲಿದ್ದಾರೆ. ಒಬ್ಬರೇ ದುಬೈಗೆ ಹೋಗಲು ಅವರಿಗೆ ಧೈರ್ಯ ಬಂದಿದ್ದು ತಂಡದಲ್ಲಿ ನಾಟಕವಾಡಿದ್ದಕ್ಕೆ. ಹೀಗೆಯೇ ರೇಣುಕಾ ಹುಡದೇಮನಿ ಅವರು ಮದುವೆ ನಂತರ ಅಮೆರಿಕದಲ್ಲಿದ್ದಾರೆ. ಈ ತಂಡ ಶುರುವಾದಾಗ ಶ್ರೀನಿವಾಸ ಗದಗ ಅವರು ನಿರುದ್ಯೋಗಿಯಾಗಿದ್ದರು. ನಂತರ ಪುರೋಹಿತರಾದರು. ಕಳೆದ ವರ್ಷ ತಂಡದ ಬೆಳ್ಳಿಹಬ್ಬಕ್ಕೆ 25 ಸಾವಿರ ರೂಪಾಯಿ ನೆರವಾಗಿದ್ದಾರೆ. ಇವರ ಹಾಗೆ ನಾಟಕೋತ್ಸವಕ್ಕೆ ನೆರವಾಗುತ್ತಾರೆ ಸವದತ್ತಿಯವರು. ಅಂದರೆ ಸರಕಾರದ ಅನುದಾನ ನೆಚ್ಚಿ ನಾಟಕ ಆಡದ ಅವರು, ನಾಟಕೋತ್ಸವಕ್ಕಾಗಿ ಊರಲ್ಲಿ ದೇಣಿಗೆ ಸಂಗ್ರಹಿಸುತ್ತಾರೆ. ನಂತರ ಖರ್ಚುವೆಚ್ಚದ ಲೆಕ್ಕಾಚಾರವನ್ನು ಪತ್ರ ಮುಖೇನ ದೇಣಿಗೆದಾರರ ಮನೆಗಳಿಗೆ ಕಳುಹಿಸುತ್ತಾರೆ. ಈಮೂಲಕ ಪಾರದರ್ಶಕತೆ ಮೆರೆಯುತ್ತಾರೆ. ಇದರಿಂದ ದೇಣಿಗೆದಾರರೇ ಫೋನ್ ಮಾಡಿ ‘ಯಾಕ್ರಿ ಇನ್ನೂ ರೊಕ್ಕಾ ಇಸಗೊಳ್ಳಾಕ ಬಂದಿಲ್ಲ’ ಎಂದು ತಂಡದವರನ್ನೇ ಕೇಳುತ್ತಾರೆ. ಅಷ್ಟರಮಟ್ಟಿಗೆ ದೇಣಿಗೆದಾರರು ಈ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇಂಥದೊಂದು ರಂಗತಂಡಕ್ಕೆ ಬೆನ್ನೆಲುಬಾದ 54 ವರ್ಷ ವಯಸ್ಸಿನ ಝಕೀರ್ ನದಾಫ್ ರಂಗ ಸಂಸ್ಕಾರದ ಮೂಲಕ ಸವದತ್ತಿಯಲ್ಲಿ ಬದಲಾವಣೆ ತಂದಿದ್ದಾರೆ. ಅವರಿಗೆ ವಂದನೆ, ಅಭಿವಂದನೆ.

Similar News