ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ʻನಿರ್ಬಂಧʼ ವಿರೋಧಿಸಿ 500ಕ್ಕೂ ಅಧಿಕ ಗಣ್ಯರಿಂದ ಹೇಳಿಕೆ ಬಿಡುಗಡೆ

Update: 2023-02-03 10:09 GMT

ಹೊಸದಿಲ್ಲಿ:ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ- "ಇಂಡಿಯಾ: ದಿ ಮೋದಿ ಕ್ವೆಶ್ಚನ್‌ʼ" ಗೆ ಸರ್ಕಾರ ಹೇರಿರುವ ʻನಿರ್ಬಂಧʼ ವನ್ನು ವಿರೋಧಿಸಿ 500ಕ್ಕೂ  ಅಧಿಕ ಭಾರತೀಯ ವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ಬಿಬಿಸಿ ಭಾರತದಲ್ಲಿ ಬಿಡುಗಡೆಗೊಳಿಸದೇ ಇದ್ದರೂ ಕೇಂದ್ರ ಸರ್ಕಾರ ತನ್ನ ಜನವರಿ 21 ರ ಆದೇಶದಲ್ಲಿ ಈ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕುವಂತೆ ಯುಟ್ಯೂಬ್‌ ಹಾಗೂ ಟ್ವಿಟ್ಟರ್‌ಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತೀಯ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರ ಜಂಟಿ ಹೇಳಿಕೆಯನ್ನು ಜನವರಿ 31 ರಂದು ಬಿಡುಗಡೆಗೊಳಿಸಲಾಗಿದ್ದು ಇಲ್ಲಿಯ ತನಕ ಅದಕ್ಕೆ 522 ಮಂದಿ ಸಹಿ ಹಾಕಿದ್ದಾರೆ.

ಈ ಸಾಕ್ಷ್ಯಚಿತ್ರ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆಯಲ್ಲದೆ ಸಾಕ್ಷ್ಯಚಿತ್ರದ ಮೇಲೆ ಹೇರಿರುವ ನಿರ್ಬಂಧವು "ಭಾರತೀಯರಾಗಿ ನಮ್ಮ ಸಮಾಜ ಮತ್ತು ಸರ್ಕಾರದ ಕುರಿತಂತೆ ಪ್ರಮುಖ ಮಾಹಿತಿಯನ್ನು ಪಡೆದು ಅದರ ಕುರಿತು ಚರ್ಚಿಸುವ ನಮ್ಮ ಹಕ್ಕುಗಳನ್ನು ಅತಿಕ್ರಮಿಸುತ್ತದೆ," ಎಂದು ಹೇಳಿಕೆ ತಿಳಿಸಿದೆ.

"ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ತಡೆಯುವ ವಿವಿ ಆಡಳಿತಗಳ ಯತ್ನವು ಶೈಕ್ಷಣಿಕ ಸ್ವಾತಂತ್ರ್ಯದ ತತ್ವಗಳ ಉಲ್ಲಂಘನೆಯಾಗಿದೆ, ವಿಶ್ವವಿದ್ಯಾಲಯಗಳು ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಮುಕ್ತ ಚರ್ಚೆಗಳಿಗೆ ಆಸ್ಪದ ನೀಡಬೇಕು," ಎಂದು ಹೇಳಿಕೆ ತಿಳಿಸಿದೆ. "ಇಂತಹ ಚರ್ಚೆಗಳು ಪ್ರಜಾಪ್ರಭುತ್ವ ಸಮಾಜದ ಸಮಾಧಾನಕರ ಕಾರ್ಯನಿರ್ವಹಣೆಗೆ ಅಗತ್ಯವಾಗಿದೆ, ಸರ್ಕಾರವನ್ನು ಟೀಕಿಸುತ್ತವೆ ಎಂದು ಕೆಲ ಆಭಿಪ್ರಾಯಗಳ ಅಭಿವ್ಯಕ್ತಿಗೆ ವಿವಿಗಳು ತಡೆ ಹೇರುವುದು ಸ್ವೀಕಾರಾರ್ಹವಲ್ಲ," ಎಂದು ಹೇಳಿಕೆ ತಿಳಿಸಿದೆ.

"2002 ಗಲಭೆಗಳ ಹಿಂಧೆ ಇದ್ದವರು ಹಾಗೂ ಅದಕ್ಕೆ ಪ್ರೋತ್ಸಾಹ ನೀಡಿದವರನ್ನು ಅದಕ್ಕೆ ಹೊಣೆಗಾರರನ್ನಾಗಿಸಲಾಗಿಲ್ಲ.  ಈ ರೀತಿ ಹೊಣೆಗಾರರನ್ನಾಗಿಸುವುದು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಅಗತ್ಯ, ಈ ಹಿನ್ನೆಲೆಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಎತ್ತಲಾಗಿರುವ ಪ್ರಶ್ನೆಗಳು ಮುಖ್ಯ," ಎಂದು ಹೇಳಿಕೆ ತಿಳಿಸಿದೆ.

ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸುವ ಯತ್ನಗಳನ್ನು ವಿದ್ಯಾರ್ಥಿಗಳು ದಿಲ್ಲಿಯ ಜೆಎನ್‌ಯು, ಅಂಬೇಡ್ಕರ್‌ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ದಿಲ್ಲಿ ವಿವಿ, ಮುಂಬೈಯ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸಾಯನ್ಸಸ್‌ ಹಾಗೂ ಕೊಲ್ಕತ್ತಾದ ಪ್ರೆಸಿಡೆನ್ಸಿ ವಿವಿಯಲ್ಲಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Similar News