ಟಿಪ್ಪರ್ ಲಾರಿ ಹರಿಸಿ ವ್ಯಕ್ತಿಯ ಕೊಲೆ: ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲು

Update: 2023-02-03 14:58 GMT

ಮೂಡುಬಿದಿರೆ: ಬುದ್ಧಿವಾದ ಹೇಳಿದ ವ್ಯಕ್ತಿಯ ಮಾತಿನಿಂದ ರೊಚ್ಚಿಗಿದ್ದ ಚಾಲಕನೊಬ್ಬ ಟಿಪ್ಪರ್ ಚಲಾಯಿಸಿ ವ್ಯಕ್ತಿಯನ್ನು ಅಮಾನವೀಯವಾಗಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ಕೋಟೆಬಾಗಿಲು ಬಳಿ ನಡೆದಿರುವುದಾಗಿ ವರದಿಯಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಕೋಟೆಬಾಗಿಲು ನಿವಾಸಿ ಫಯಾಝ್ (63) ಎಂದು ಗುರುತಿಸಲಾಗಿದೆ. ಸ್ಥಳೀಯನೇ ಆದ ಹಾರಿಸ್ (32) ಎಂಬಾತ ಕೊಲೆ ನಡೆಸಿದ ಆರೋಪಿ ಟಿಪ್ಪರ್ ಚಾಲಕನಾಗಿದ್ದಾನೆ. ಪರಾರಿಯಾಗಿರುವ ಈತನ ಪತ್ತೆಗಾಗಿ ಕ್ರಮ ಜರಗಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಘಟನೆಯ ವಿವರ: ಫಯಾಝ್ ಶುಕ್ರವಾರ ಮಧ್ಯಾಹ್ನ ಮಸೀದಿಗೆ ನಡೆದುಕೊಂಡು ಹೋಗುವ ಸಂದರ್ಭ ‘ಧೂಳೆಬ್ಬಿಸಬೇಡ, ನಿಧಾನವಾಗಿ ವಾಹನ ಚಲಾಯಿಸು. ಶಾಲಾ ಮಕ್ಕಳು ಹೋಗಿಬರುವ ದಾರಿ ಇದು’ ಎಂದು ಟಿಪ್ಪರ್ ಚಾಲಕ ಹಾರಿಸ್ ಬಳಿ ಹೇಳಿದರು ಎನ್ನಲಾಗಿದೆ. ಈ ಸಂದರ್ಭ ಟಿಪ್ಪರ್ ಚಾಲಕ ಹಾರಿಸ್ ಮತ್ತು ಫಯಾಝ್‌ರ ಮಧ್ಯೆ ಮಾತಿನ ಚಕಮಕಿ, ಹೊಡೆದಾಟ ನಡೆದಿದೆ ಎಂದು ಹೇಳಲಾಗಿದೆ.

ಶುಕ್ರವಾರದ ಜುಮಾ ನಮಾಝ್ ಮುಗಿಸಿಕೊಂಡು ಹಿಂತಿರುಗುವ ವೇಳೆ ಇಬ್ಬರ ಮಧ್ಯೆ ಮತ್ತೆ ಮಾತಿಗೆ ಮಾತು ಬೆಳೆದಿದ್ದು, ಈ ಸಂದರ್ಭ ಫಯಾಝ್ ಟಿಪ್ಪರ್‌ನ ಮೆಟ್ಟಿಲು ಹತ್ತಿದ್ದಾರೆ. ಆವಾಗ ಚಾಲಕ ಹಾರಿಸ್ ರಾಡ್‌ನಿಂದ ಫಯಾಝ್‌ರ ತಲೆಗೆ ಹೊಡೆದು ಟಿಪ್ಪರನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಅಮಿತ ವೇಗದಲ್ಲಿ ಚಲಿಸುತ್ತಿದ್ದ ಟಿಪ್ಪರ್‌ನಿಂದ ಫಯಾಝ್ ಆಯತಪ್ಪಿರಸ್ತೆಗೆ ಬಿದ್ದರೂ ನಿಲ್ಲಿಸದ ಆರೋಪಿ ಹಾರಿಸ್ ಟಿಪ್ಪರನ್ನು ಅವರ ಮೇಲೆಯೇ ಹಾಯಿಸಿದ್ದಾನೆ. ಇದರಿಂದ ಫಯಾಝ್‌ರ ಕಾಲಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಸಾರ್ವಜನಿಕರು ಫಯಾಝ್‌ನನ್ನು ಆಸ್ಪತ್ರೆಗೆ ಸಾಗಿಸಿದರೂ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ಬಳಿಕ ಆರೋಪಿ ಚಾಲಕನು ಟಿಪ್ಪರನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪ್ರಯತ್ನ ನಡೆದಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಗೆಳೆಯನನ್ನು ಕೊಂದು ಮೃತದೇಹ ಎಸೆಯಲು ಹೋದಾತ ಕಂದಕಕ್ಕೆ ಬಿದ್ದು ಸಾವು

Similar News