ಮೀನುಗಾರರ ನಿಯೋಗದಿಂದ ಮುಖ್ಯಮಂತ್ರಿ ಭೇಟಿ

Update: 2023-02-03 15:04 GMT

ಉಡುಪಿ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರಾವಳಿಯ ಮೀನುಗಾರರ ನಿಯೋಗವೊಂದು ಇಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿತು. ಉಡುಪಿ ಶಾಸಕ ಕೆ.ರಘುಪತಿ ಭಟ್ ನಿಯೋಗದ ನೇತೃತ್ವ ವಹಿಸಿದ್ದರು.

ಕರಾವಳಿಯ ಯಾಂತ್ರಿಕ ಮೀನುಗಾರಿಕಾ ದೋಣಿಗಳಿಗೆ ನೀಡುವ ಡೀಸೆಲ್ ಪ್ರಮಾಣವನ್ನು 500 ಲೀ.ಗೆ ಹೆಚ್ಚಿಸುವುದು, ಟೆಬ್ಮಾ ಶಿಪ್‌ಯಾರ್ಡ್‌ನ್ನು ಮಲ್ಪೆ ಮೀನುಗಾರಿಕೆಗೆ ಬಿಟ್ಟುಕೊಡುವುದು, ನಾಡದೋಣಿಯವರಿಗೆ 400 ಲೀ.ನಂತೆ ಸೀಮೆಎಣ್ಣೆಯ ಪೂರೈಕೆ ಮಾಡುವುದು, ನಾಡದೋಣಿಗಳಿಗೆ ತಂಗುದಾಣ  ವನ್ನು ನಿರ್ಮಿಸುವುದು, ಯಶಸ್ವಿನಿ ಯೋಜನಾ ಸೌಲಭ್ಯ ವಿಸ್ತರಿಸುವುದು, ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು ಬಂದರುಗಳಲ್ಲಿ ಗುತ್ತಿಗೆ ಆಧಾರದಲ್ಲಿ ನಿವೇಶನ ನೀಡುವುದು, ಮೀನುಗಾರಿಕಾ ಚಟುವಟಿಕೆ ಹಾಗೂ ಮೀನುಗಾರಿಕಾ ಅಭಿವೃದ್ಧಿಗೆ  ಅನುದಾನ ಒದಗಿಸುವುದು ಹೀಗೆ ಮೀನುಗಾರಿಕಾ ಚಟುವಟಿಕೆಯನ್ನು ಅಭಿವೃದ್ಧಿಗೊಳಿಸಲು ಈ ಸಾಲಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಘೋಷಿಸುವ ಬಗ್ಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿದೆಡೆಗಳ ಮೀನುಗಾರರ ಪ್ರತಿನಿಧಿಗಳು, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಉಡುಪಿ ಇದರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Similar News