ದೇಶದಲ್ಲಿ ಹಣಕಾಸು ಮಾರುಕಟ್ಟೆಗಳನ್ನು ಅತ್ಯುತ್ತಮವಾಗಿ ನಿಯಂತ್ರಿಸಲಾಗುತ್ತದೆ: ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಫೆ. 3: ಅದಾನಿ(Adani) ಗುಂಪಿನ ಕಂಪೆನಿಗಳ ವಿರುದ್ಧದ ವಂಚನೆ ಆರೋಪಗಳು ಹೂಡಿಕೆದಾರರ ನಂಬಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಭಾವಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಶುಕ್ರವಾರ ಹೇಳಿದ್ದಾರೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಸದೃಢವಾಗಿದೆ ಮತ್ತು ಹಣಕಾಸು ಮಾರುಕಟ್ಟೆಗಳನ್ನು ‘‘ಉತ್ತಮವಾಗಿ ನಿಯಂತ್ರಿಸಲಾಗುತ್ತಿದೆ’’ ಎಂದು ಅವರು ಹೇಳಿದರು.
ತಾವು ಅದಾನಿ ಗುಂಪಿನ ಶೇರುಗಳಲ್ಲಿ ಅಧಿಕ ಹೂಡಿಕೆ ಮಾಡಿಲ್ಲ ಎಂಬುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮತ್ತು ಭಾರತೀಯ ಜೀವವಿಮಾ ನಿಗಮ (LIC) ಈಗಾಗಲೇ ವಿವರಣೆ ನೀಡಿವೆ ಎಂದು ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಚಿವೆ ಹೇಳಿದರು.
‘‘ಅದಾನಿ ಗುಂಪಿನ ಶೇರುಗಳಲ್ಲಿ ತಾವು ಮಾಡಿರುವ ಹೂಡಿಕೆಗಳು ಅಂಗೀಕೃತ ಮಿತಿಗಿಂತ ತುಂಬಾ ಒಳಗೆ ಇದೆ ಹಾಗೂ ತಾವು ಈಗಲೂ ಲಾಭದಲ್ಲಿದ್ದೇವೆ ಎಂದು ಎಸ್ಬಿಐ ಮತ್ತು ಎಲ್ಐಸಿ ಸ್ಪಷ್ಟವಾಗಿ ಹೇಳಿವೆ. ಅವರು ಹೇಳಿದ ಮೇಲೆ ಅದೇ ಅಂತಿಮ’’ ಎಂದು ಅವರು ಅಭಿಪ್ರಾಯಪಟ್ಟರು.
‘‘ಭಾರತ ಉತ್ತಮ ಆಡಳಿತಕ್ಕೆ ಒಳಪಟ್ಟ ದೇಶವಾಗಿದೆ ಹಾಗೂ ದೇಶದ ಆರ್ಥಿಕ ಮಾರುಕಟ್ಟೆಗಳನ್ನು ಚೆನ್ನಾಗಿ ನಿಯಂತ್ರಿಸಲಾಗುತ್ತಿದೆ’’ ಎಂದು ಅವರು ಹೇಳಿದರು.