ಜಮ್ಮು ಕಾಶ್ಮೀರ: ಮನೆಗಳಲ್ಲಿ ಬಿರುಕು; ತಾತ್ಕಾಲಿಕ ಶಿಬಿರಕ್ಕೆ 19 ಕುಟುಂಬಗಳ ಸ್ಥಳಾಂತರ

Update: 2023-02-03 17:28 GMT

ಜಮ್ಮು, ಫೆ. 3: ಜಮ್ಮು ಹಾಗೂ ಕಾಶ್ಮೀರದ ಡೋಡಾ(Doda) ಜಿಲ್ಲೆಯ ನಯಿ ಬಸ್ತಿ ಗ್ರಾಮದಲ್ಲಿರುವ ಮನೆಗಳಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಅಲ್ಲಿದ್ದ 19 ಕುಟುಂಬಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕಿಸ್ತ್ವಾರ್-ಬಟೋಟೆ (Kishtwar-Batote)ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡೋಡಾ ಪಟ್ಟಣದಿಂದ 35 ಕಿ.ಮೀ. ದೂರದ ತಾತ್ರಿಯ ನಯಿ ಬಸ್ತಿ ಗ್ರಾಮದಲ್ಲಿರುವ ಮಸೀದಿ ಹಾಗೂ ಬಾಲಕಿಯರ ಧಾರ್ಮಿಕ ಶಾಲೆಗಳನ್ನು ಅಸುರಕ್ಷಿತ ಎಂದು ಆಡಳಿತ ಘೋಷಿಸಿದೆ.

ಗ್ರಾಮದ ಕೆಲವು ಕಟ್ಟಡಗಳಲ್ಲಿ ಎರಡು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡಿವೆ. ಆದರೆ, ಗುರುವಾರ ಭೂಕುಸಿತದಿಂದ ಬಿರುಕು ಬಿಟ್ಟ ಕಟ್ಟಡಗಳ ಸಂಖ್ಯೆ 21ಕ್ಕೆ ಏರಿಕೆಯಾದ ಬಳಿಕ ಪರಿಸ್ಥಿತಿ ಉಲ್ಬಣಗೊಂಡಿದೆ. ‘‘ಮನೆಗಳು ಅಸುರಕ್ಷಿತವಾಗಿವೆ ಎಂದು ತಿಳಿದ ಬಳಿಕ ಅದರಲ್ಲಿದ್ದ 19 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಅವರ ಸುರಕ್ಷತೆಗೆ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ’’ ಎಂದು ತಾತ್ರಿ ಉಪ ವಿಭಾಗೀಯ ದಂಡಾಧಿಕಾರಿ ಅಥರ್ ಅಮೀನ್ ಝರ್ಗಾರ್ ಅವರು ತಿಳಿಸಿದ್ದಾರೆ.

Similar News