ಶಾರದಾ ಚಿಟ್ಫಂಡ್ ಹಗರಣ: ಈ.ಡಿ.ಯಿಂದ ನಳಿನಿ ಚಿದಂಬರಂ, ಇತರರ 6.3 ಕೋ. ರೂ. ಮೌಲ್ಯದ ಸೊತ್ತು ಮುಟ್ಟುಗೋಲು

Update: 2023-02-04 17:00 GMT

ಹೊಸದಿಲ್ಲಿ, ಫೆ. 4: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಹಾಗೂ ಇತರರ 6.3 ಕೋ. ರೂ. ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. 

ಈ ಸೊತ್ತು ಶಾರದಾ ಸಮೂಹದ ಒಡೆತನದಲ್ಲಿದೆ. ಅಲ್ಲದೆ, ಕಂಪೆನಿ ಸೃಷ್ಟಿಸಿದ ಅಪರಾಧದ ಆದಾಯದಲ್ಲಿ ಆರೋಪಿಗಳು ಫಲಾನುಭವಿಗಳಾಗಿದ್ದಾರೆ ಎಂದು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ನಳಿನಿ ಚಿದಂಬರಂ ಅವರಲ್ಲದೆ ಜಾರಿ ನಿರ್ದೇಶನಾಲಯ ಸಿಪಿಐ (ಮಾರ್ಕ್ಸಿಸ್ಟ್)ಯ ಮಾಜಿ ಶಾಸಕ ದೇವೇಂದ್ರನಾಥ್ ಬಿಸ್ವಾಸ್, ದೇವ ವೃತ ಸರ್ಕಾರ್ ಹಾಗೂ ಅಸ್ಸಾಂನ ದಿವಂಗತ ಮಾಜಿ ಸಚಿವ ಅಂಜನ್ ದತ್ತಾ ಒಡೆತನದ ಅನುಭೂತಿ ಪ್ರಿಂಟರ್ಸ್ ಆ್ಯಂಡ್ ಪಬ್ಲಿಕೇಶನ್ ಅನ್ನು ಕೂಡ ಅದು ಉಲ್ಲೇಖಿಸಿದೆ. 

ಶಾರದಾ ಕಂಪೆನಿ ಪಶ್ಚಿಮಬಂಗಾಳದಲ್ಲಿ ಹಲವು ಪೋಂಝಿ ಯೋಜನೆಗಳನ್ನು ನಡೆಸಿದ್ದು, ಲಕ್ಷಾಂತರ ಜನರಿಗೆ ವಂಚಿಸಿದೆ ಎಂದು ಹೇಳಲಾಗಿದೆ. 2013ರಲ್ಲಿ ಈ ಯೋಜನೆ ಕುಸಿದ ಬಳಿಕ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು. ಅದೇ ವರ್ಷ ಅದರ ಪ್ರವರ್ತಕ ಸುದೀಪ್ತಾ ಸೇನ್ನನ್ನು ಬಂಧಿಸಲಾಗಿತ್ತು.

ಕೋಲ್ಕತಾ ಪೊಲೀಸರು ಹಾಗೂ ಸಿಬಿಐ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯ ಆಧಾರದಲ್ಲಿ ಶಾರದಾ ಸಮೂಹದ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

Similar News