'ಪ್ರಿಸನ್ ಪ್ಲೇ ಬುಕ್': ಜೈಲು ಬೆಸೆದ ಸಂ-ಬಂಧಗಳು

Update: 2023-02-05 08:20 GMT

 2017ರಲ್ಲಿ ಸರಣಿಯಾಗಿ ಹರಿದು ಬಂದ ಶಿನ್ ವನ್ ಹೊ ನಿರ್ದೇಶನದ 'ಪ್ರಿಸನ್ ಪ್ಲೇ ಬುಕ್' ಈಗಲೂ ನೆಟ್‌ಫ್ಲಿಕ್ಸ್‌ನಲ್ಲಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ವೀಕ್ಷಕರನ್ನು ಸೆಳೆಯು ತ್ತಿರುವ ಕೊರಿಯನ್ ಡ್ರಾಮ. 16 ಕಂತುಗಳನ್ನು ಈ ಸರಣಿ ಹೊಂದಿದೆ. ಬೇಸ್‌ಬಾಲ್ ಎಡಗೈ ಆಟಗಾರನಾಗಿ ಖ್ಯಾತಿ ವೆತ್ತ ಕಿಮ್ ಜೆ ಹ್ಯೂಕ್ ಎಂಬಾತ, ತನ್ನ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗುತ್ತಾನೆ. ಸುಮಾರು ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಕಿಮ್ ಜೆ ಹ್ಯೂಕ್ ಜೈಲಿನೊಳಗಿನ ಹೊಸ ಜಗತ್ತನ್ನು ಮುಖಾಮುಖಿಗೊಳ್ಳುತ್ತಾ, ತನ್ನೊಳಗಿನ ಕ್ರೀಡಾಳುವನ್ನು ಮತ್ತೆ ಹುರಿಗೊಳಿಸುವ ಪ್ರಯತ್ನವೇ 'ಪ್ರಿಸನ್ ಪ್ಲೇ ಬುಕ್'. ಕಿಮ್ ಜೆ ಹ್ಯೂಕ್ ಜೈಲು ಪ್ರವೇಶಿಸುವ ಮೂಲಕ ಸರಣಿ ಗಂಭೀರವಾಗಿ ತೆರೆದುಕೊಳ್ಳುತ್ತದೆಯಾದರೂ, ಕಿಮ್ ಜೆ ಹ್ಯೂಕ್‌ನ ಬಲಾಢ್ಯ ದೇಹದೊಳಗಿರುವ ಮುಗ್ಧತೆ ಮತ್ತು ಜೈಲೊಳಗಿನ ಕೈದಿಗಳ ಭಿನ್ನ ಜಗತ್ತು ನಿಧಾನಕ್ಕೆ ಕತೆಗೆ ಲವಲವಿಕೆಯನ್ನು ತುಂಬಿಕೊಡುತ್ತಾ ಹೋಗುತ್ತದೆ. ಕೈದಿಗಳು, ಸಿಬ್ಬಂದಿ ಮತ್ತು ಜೈಲಧಿಕಾರಿಗಳನ್ನೊಳಗೊಂಡ ಪ್ರತೀ ಪಾತ್ರಗಳನ್ನು ಆರ್ದ್ರವಾಗಿ ಕಟ್ಟಿ ಕೊಡಲಾಗಿದೆ.

''ಜೈಲಲ್ಲಿ ವಂಚಕರಷ್ಟೇ ತುಂಬಿಕೊಂಡಿರುತ್ತಾರೆ. ಇಲ್ಲಿ ಯಾರನ್ನು ನಂಬಬಾರದು'' ಎನ್ನುವ ಸಾಲನ್ನು ಕಿಮ್ ಜೆ ಹ್ಯೂಕ್‌ಗೆ ಹಲವರು ಹಲವು ಬಾರಿ ಕಿವಿ ಮಾತಾಗಿ ಹೇಳುತ್ತಿರುತ್ತಾರೆ. ಆದರೆ ಆ ಕಿವಿ ಮಾತಿಗೆ ವ್ಯತಿರಿಕ್ತವಾಗಿ ಕೈದಿಗಳ ಒಳಗಿರುವ ಹೃದಯದ ಮಾತುಗಳಿಗೆ ಆತ ಸಂವಾದಿಯಾಗುತ್ತಾನೆ. ವಂಚಕರೊಳಗಿರುವ ಮುಗ್ಧತೆ, ಅಸಹಾಯಕತೆ, ಹೃದಯವಂತಿಕೆ, ಜೀವಂತಿಕೆಗಳ ಜೊತೆ ಸಂವಹನ ನಡೆಸುವ ಕಥಾನಾಯಕನ ಮೂಲಕ ಈ ಸರಣಿ ನವಿರಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.

ಬೇಸ್‌ಬಾಲ್ ಸ್ಟಾರ್ ಕಿಮ್ ಜೆ ಹ್ಯೂಕ್ ಸರಣಿಯ ಕೇಂದ್ರ ಪಾತ್ರ. ಕೊಲೆಗಾರನ ಆರೋಪ ಹೊತ್ತು ಜೈಲು ಸೇರುವ ಈತ ನಿಧಾನಕ್ಕೆ ಜೈಲೊಳಗಿರುವ ಕೈದಿಗಳ ಜೊತೆಗೆ ತನ್ನ ಬದುಕನ್ನು ಮರುಕಟ್ಟುವ ಪ್ರಯತ್ನ ನಡೆಸುತ್ತಾರೆ. ಸ್ಟಾರ್ ಆಟಗಾರನ ಪ್ರಭಾವ ಬಳಸಿ ಹಲವು ಅಸಹಾಯಕ ಕೈದಿಗಳಿಗೆ ನೆರವಾಗುತ್ತಾನೆ. ಇದೇ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಯಿಂದ ಬೇಸ್‌ಬಾಲ್ ಆಟದಿಂದ ನಿವೃತ್ತಿ ಘೋಷಿಸುವ ಸಂದರ್ಭ ಎದುರಾಗುತ್ತದೆ. ಜೈಲಲ್ಲಿದ್ದುಕೊಂಡೇ ಸಂದರ್ಶನವೊಂದರಲ್ಲಿ ತನ್ನ ನಿವೃತ್ತಿಯನ್ನು ಘೋಷಿಸುತ್ತಾನೆ. ಆತ ಮತ್ತೆ ಬೇಸ್ ಬಾಲ್ ಆಡುವಂತೆ ಕೈದಿಗಳು ಆತನಿಗೆ ಒತ್ತಾಸೆಯಾಗುತ್ತಾರೆ. ತನ್ನ ದೈಹಿಕ ಸಮಸ್ಯೆಯನ್ನು ಗೆದ್ದು ಮತ್ತೆ ಆತ ಬೇಸ್‌ಬಾಲ್ ಆಡುತ್ತಾನೆಯೇ ಎನ್ನುವುದು ಕಥೆಯ ಪ್ರಧಾನ ಎಳೆ.
  
ಕತೆಯಲ್ಲಿ ಕಿಮ್ ಜೆ ಹ್ಯೂಕ್ ಮತ್ತು ಜೈಲಿನ ಇನ್ನೊಬ್ಬ ಸಿಬ್ಬಂದಿ, ಬಾಲ್ಯ ಗೆಳೆಯ ಲೀ ಜೂನ್ ಹೂ ನಡುವಿನ ಸ್ನೇಹವನ್ನು ಹೃದ್ಯವಾಗಿ ಕಟ್ಟಿಕೊಡಲಾಗಿದೆ. ಜೈಲೊಳಗಿರುವ ಪ್ರತೀ ಪಾತ್ರಗಳಿಗೆ ಅವುಗಳದೇ ಆದ ಸ್ವಂತಿಕೆ, ಜೀವಂತಿಕೆಯನ್ನು ತುಂಬಲಾಗಿದೆ. ಪ್ರತೀ ಪಾತ್ರಗಳ ಹಿಂದೆಯೂ ಒಂದೊಂದು ಬದುಕಿದೆ. ಅವರೆಲ್ಲರೂ ತಮ್ಮಿಳಗಿನ ಕಹಿಯನ್ನು ಮರೆತು ಜೈಲಿನೊಳಗಿನ ಸಂತೋಷ, ತಮಾಷೆಗಳ ಮೂಲಕ ತಮ್ಮ ಒಡೆದ ಬದುಕನ್ನು ಮರು ಜೋಡಿಸುವ ಪ್ರಯತ್ನ ನಡೆಸುತ್ತಿರುತ್ತಾರೆ. ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಕಿಮ್ ಮಿನ್ ಚುಲ್ ಮತ್ತು ಜೈಲಿನೊಳಗೆ ಆತನನ್ನು ಅಪ್ಪಾಜಿ ಎಂದು ಕರೆಯುವ ತರುಣ ಜೀನ್ ವಲ್ಜಿನ್ ನಡುವಿನ ಸಂಬಂಧವೂ ಬದುಕಿನ ಬೇರೊಂದು ನೆಲೆಯನ್ನು ಪರಿಚಯಿಸುತ್ತದೆ. ತಂದೆ-ಮಗನ ನಡುವಿನ ಸಂಬಂಧವನ್ನು ಈ ಜೋಡಿ ಒರೆಗೆ ಹಚ್ಚುತ್ತದೆ. ನೋಡಲು ದೈತ್ಯ ದೇಹಿಯಾಗಿದ್ದರೂ ಕಿಮ್ ಮಿನ್ ಚುಲ್ ಮಗು ಮನಸ್ಸು ನಮ್ಮನ್ನು ಕಾಡುತ್ತದೆ. ಸಹ ಕೈದಿಗಳಿಂದ ಲೂನಿ ಎಂದು ಕರೆಯಲ್ಪಡುತ್ತಾ ಅರ್ಧ ಪೆದ್ದನಂತೆ, ಕೆಲವೊಮ್ಮೆ ಬುದ್ಧಿವಂತನಂತೆ ವರ್ತಿಸುತ್ತಾ ಸಹ ಕೈದಿಗಳನ್ನು ಕೆಣಕಿ ಅವರಿಂದ ಸದಾ ಏಟು ತಿನ್ನುತ್ತಾ ನಮ್ಮನ್ನು ನಗಿಸಿ ಅಳಿಸುವ ಇನ್ನೊಂದು ಪಾತ್ರ ಯೂ ಹಾನ್. ಡ್ರಗ್ಸ್ ಚಟದಿಂದ ಈತ ಜೈಲು ಪಾಲಾದವನು. ತನ್ನ ಕುಚೇಷ್ಟೆಯ ಮೂಲಕವೇ ಬದುಕಿನ ಹಲವು ಪಾಠಗಳನ್ನು ಹೇಳಿಕೊಡುವವನು.

ಇಲ್ಲಿನ ಜೈಲು ಜಗತ್ತಿನಲ್ಲಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಮಾನವಹಕ್ಕು ಹೋರಾಟಗಾರರು, ಇಂಜಿನಿಯರ್‌ಗಳು ಎಂದೆಲ್ಲ ಕರೆಯಬಹುದಾದ ಬೇರೆ ಬೇರೆ ವ್ಯಕ್ತಿತ್ವಗಳಿವೆ. ಅವರ ಸಂಶೋಧನೆಗಳು, ಹೋರಾಟಗಳು ನಮಗೆ ನಗು ತರಿಸಬಹುದು. ಅದರ ಜೊತೆ ಜೊತೆಗೇ ಬದುಕಿನ ಕುರಿತ ಅವರ ಅದಮ್ಯ ಪ್ರೀತಿ ನಮ್ಮ ಕಣ್ಣಾಲಿಗಳನ್ನು ಒದ್ದೆ ಮಾಡುತ್ತವೆ. ಈ ಜೈಲಲ್ಲಿರುವ ಪ್ರತೀ ಪಾತ್ರಗಳು ಹಲವು ಗಾಯಗಳಿಂದ ಒಳಗೊಳಗೆ ಮುಲುಗುಡುತ್ತಿರುತ್ತವೆ. ಆದರೆ ಹೊರಗಿನ ಜಗತ್ತಿಗೆ ಆ ಗಾಯಗಳನ್ನು ಹರಡಿ ಯಾರನ್ನೂ ದುಃಖಕ್ಕೀಡು ಮಾಡುವುದಿಲ್ಲ. ಪೊಲೀಸ್ ಅಧಿಕಾರಿಗಳೆಂದರೆ ಎಲ್ಲರೂ ಬೂಟುಗಾಲಿನ ದರ್ಪದ ಅಧಿಕಾರಿಗಳೇ ಆಗಿರಬೇಕಾಗಿಲ್ಲ. ಅವರೂ ತಾಯಿ ಹೃದಯವನ್ನು ಹೊಂದಿದವರಿರಬಹುದು. 'ಪ್ರಿಸನ್ ಪ್ಲೇ ಬುಕ್' ಎನ್ನುವುದು ಬದುಕು ನಮಗೆ ಕೊಡುವ ಇನ್ನೊಂದು ಅವಕಾಶ.

ಅದನ್ನು ಸದುಪಯೋಗ ಪಡಿಸಿಕೊಳ್ಳುವ ದಾರಿಯನ್ನು ಸರಣಿ ಪರಿಣಾಮಕಾರಿಯಾಗಿ ನಮಗೆ ತಿಳಿಸಿಕೊಡುತ್ತದೆ. ಪ್ರೀತಿ, ಸ್ನೇಹ, ವಾತ್ಸಲ್ಯ ಎಲ್ಲ ಸಂಬಂಧಗಳ ನಡುವಿನ ಬಿಗಿಯಾದ ಗಂಟುಗಳು ಇಲ್ಲಿರುವ 16 ಕಂತುಗಳು. 'ಪ್ರಿಸನ್ ಪ್ಲೇ ಬುಕ್' ಸರಣಿಯ ಒಪ್ಪಂದ 2023 ಜನವರಿಗೆ ಮುಗಿದ ಕಾರಣ ಅದು ನೆಟ್‌ಫ್ಲಿಕ್ಸ್‌ನಿಂದ ಅದು ಹೊರಬಿದ್ದಿತ್ತು. ಆದರೆ ಅಪಾರ ವೀಕ್ಷಕರ ಒತ್ತಡದ ಮೇರೆಗೆ ಮತ್ತೆ ಒಪ್ಪಂದ ನವೀಕರಣವಾಗಿ ಎರಡೇ ದಿನದಲ್ಲಿ ವೀಕ್ಷಕರ ಅಗ್ರಪಟ್ಟಿಯಲ್ಲಿ ಸೇರಿಕೊಂಡಿದೆ. 
 

Writer - -ಮುಸಾಫಿರ್

contributor

Editor - -ಮುಸಾಫಿರ್

contributor

Similar News