ಸ್ಫೂರ್ತಿಯ ‘ತನುಜಾ’

Update: 2023-02-05 08:14 GMT

ತನುಜಾ, ಈ ವಾರ ಬಿಡುಗಡೆಯಾದ ಸ್ಫೂರ್ತಿದಾಯಕ ಸಿನೆಮಾ. ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಗಳೊಬ್ಬಳ ಪರದಾಟದ ಕಥೆಯ ಸುತ್ತ ಸುತ್ತುತ್ತದೆ ತನುಜಾ ಚಿತ್ರ. ಅಂದಹಾಗೆ ತನುಜಾ ನೈಜ ಘಟನೆಯಾಧಾರಿತ ಸಿನೆಮಾ. ಸಾಮಾನ್ಯವಾಗಿ ನೈಜ ಘಟನೆಯಾಧಾರಿತ ಸಿನೆಮಾಗಳು ಅಂದಾಗ ಅವುಗಳ ಬಗ್ಗೆ ಆಸಕ್ತಿ ಸ್ವಲ್ಪಕಡಿಮೆಯೇ. ರಿಯಲ್ ಕಥೆಯನ್ನು ರೀಲ್‌ನಲ್ಲಿ ತೋರಿಸುವಾಗ ಚಿತ್ರಜಗತ್ತಿಗೆ ಬೇಕಾದ ಬದಲಾವಣೆಗಳಾಗಿರುತ್ತವೆ ಎನ್ನುವ ಕಾರಣಕ್ಕೆ ಅಂತಹ ಕಥೆಗಳ ಬಗ್ಗೆ ಪ್ರೇಕ್ಷಕರು ಅಷ್ಟು ಆಸಕ್ತಿ ತೋರಿಸುವುದಿಲ್ಲ. ಆದರೆ ತನುಜಾ ಕಥೆ ಹಾಗಲ್ಲ. ಯಾಕೆಂದರೆ ಇದು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಡೆದ ಕಥೆ. ಅದರಲ್ಲೂ ಪ್ರತಿ ಹೆಣ್ಣುಮಗಳಿಗೂ ಸ್ಫೂರ್ತಿಯಾಗುವ ಕಥೆ.

ಕೊರೋನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಅಂದರೆ 2020ರಲ್ಲಿ ನಡೆದ ಘಟನೆಯ ಸುತ್ತ ಈ ಸಿನೆಮಾದ ಕಥೆ ನಡೆಯುತ್ತದೆ. ತನುಜಾ ಎನ್ನುವ ಗ್ರಾಮೀಣ ಪ್ರದೇಶದ ಹೆಣ್ಣುಮಗಳೊಬ್ಬಳು, ಶಿಕ್ಷಣದ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾಳೆ. ತಾನು ಉತ್ತಮ ಶಿಕ್ಷಣ ಪಡೆದು ವೈದ್ಯ ವೃತ್ತಿ ಆರಿಸಿಕೊಂಡು, ತನ್ನ ಹಳ್ಳಿಗೆ ತನ್ನಿಂದಾದ ಸಹಾಯ ಮಾಡಬೇಕು ಅನ್ನುವ ಆಸೆ ಹೊತ್ತು ಹಗಲು ರಾತ್ರಿ ಕಷ್ಟಪಟ್ಟು ಓದುತ್ತಿರುತ್ತಾಳೆ. ಆದರೆ ಇದ್ದಕ್ಕಿದ್ದ ಹಾಗೆ ವಕ್ಕರಿಸುವ ಕೊರೋನ ಎನ್ನುವ ಸಾಂಕ್ರಾಮಿಕ ರೋಗ, ಅಂತಹ ಎಷ್ಟೋ ಆಸೆಗಳಿಗೆ ತಣ್ಣೀರು ಎರಚಿಬಿಡುತ್ತದೆ. ಆದರೆ ಛಲವಿದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಸಾಬೀತು ಮಾಡುತ್ತಾಳೆ ವಿದ್ಯಾರ್ಥಿನಿ ತನುಜಾ.

ಸಾಮಾನ್ಯವಾಗಿ ತನುಜಾ ಕಥೆ ಎಲ್ಲರಿಗೂ ನೆನಪಿರುತ್ತದೆ. ಯಾಕೆಂದರೆ 2020ರಲ್ಲಿ ತನುಜಾ ಎನ್ನುವ ವಿದ್ಯಾರ್ಥಿನಿ ತನ್ನ ಶಿಕ್ಷಣಕ್ಕಾಗಿ ನಡೆಸಿದ ಹೋರಾಟವೇ ಅಂಥದ್ದು. ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದು ಸುದ್ದಿ, ಸದ್ದು ಮಾಡಿದ್ದು ತನುಜಾ ಎನ್ನುವ ವಿದ್ಯಾರ್ಥಿನಿ. ಅದೇ ಕಥೆಯನ್ನು ಇಟ್ಟುಕೊಂಡು ಸಿನೆಮಾ ಮಾಡಿದ್ದಾರೆ ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ. ನೈಜ ಘಟನೆಯಾಧಾರಿತ ಚಿತ್ರವಾದ್ದರಿಂದ ಇಲ್ಲಿ ನೈಜತೆ ಎದ್ದು ಕಾಣುತ್ತದೆ. ಕೆಲವು ದೃಶ್ಯಗಳನ್ನು ನೋಡುವಾಗ ಇದು ಸಾಕ್ಷ್ಯಚಿತ್ರ ಇದ್ದ ಹಾಗಿದೆ ಅನಿಸಿದರೂ, ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗುವ ಕಥೆ ಎನ್ನುವ ಕಾರಣಕ್ಕೆ ಸಿನೆಮಾ ಇಷ್ಟವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಓದುವ ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಿರುತ್ತದೆ, ಅದರಲ್ಲೂ ವಿದ್ಯಾರ್ಥಿನಿಯರಿಗೆ ಏನೆಲ್ಲಾ ಸಮಸ್ಯೆಗಳಿವೆ ಎನ್ನುವುದನ್ನು ಈ ಸಿನೆಮಾದಲ್ಲಿ ತೋರಿಸಲಾಗಿದೆ.

ಕೋವಿಡ್‌ನಿಂದಾಗಿ, ನೀಟ್ ಪರೀಕ್ಷೆ ಬರೆಯಲು ತನುಜಾ ಹರಸಾಹಸವನ್ನೇ ಪಡಬೇಕಾಗುತ್ತದೆ. ಹಾಲ್‌ಟಿಕೆಟ್ ಸಿಗದೆ ತನುಜಾ ಪರದಾಡಬೇಕಾಗುತ್ತದೆ. ಆದರೆ ತಮ್ಮ ಶಿಕ್ಷಕರ ನೆರವಿನಿಂದ ಹೇಗೋ ಹಾಲ್‌ಟಿಕೆಟ್ ಪಡೆದು ಪರೀಕ್ಷೆ ಬರೆಯುತ್ತಾಳೆ. ತಾನಂದುಕೊಂಡದ್ದನ್ನು ಸಾಧಿಸುತ್ತಾಳೆ. ಇಂತಹ ಸ್ಫೂರ್ತಿಯ ಕಥೆಗೆ ಸಿನೆಮಾ ರೂಪ ಕೊಟ್ಟು, ನಿರ್ದೇಶನ ಮಾಡಿದ್ದಾರೆ ಹರೀಶ್. ಸಿನೆಮಾದ ವಿಶೇಷವೆಂದರೆ, ರಾಜಕಾರಣಿಗಳೂ ಈ ಚಿತ್ರದಲ್ಲಿ ಅಭಿನಯಿಸಿರುವುದು. ಮಾಜಿ ಸಿಎಂ ಯಡಿಯೂರಪ್ಪ, ಡಾ. ಕೆ. ಸುಧಾಕರ್ ಜೊತೆಗೆ ಪತ್ರಿಕೋದ್ಯಮಿ ವಿಶ್ವೇಶ್ವರ ಭಟ್ ಕೂಡ ಈ ಸಿನೆಮಾದಲ್ಲಿ ನೈಜ ಪಾತ್ರ ನಿರ್ವಹಿಸಿದ್ದಾರೆ. 

ತನುಜಾ ಪರೀಕ್ಷೆ ಬರೆಯಲು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಹಾಯ ಮಾಡಿದ್ದರು. ಅದೇ ಪಾತ್ರಗಳನ್ನು ಇಲ್ಲಿ ನಿರ್ವಹಿಸಿದ್ದಾರೆ. ಇನ್ನು, ಹೋರಾಟ ನಡೆಸುವ ವಿದ್ಯಾರ್ಥಿನಿ ಪಾತ್ರದಲ್ಲಿ ಸಪ್ತಾ ಪಾವೂರು ಗಮನ ಸೆಳೆಯುತ್ತಾರೆ. ಸ್ಫೂರ್ತಿ ನೀಡುವ ಶಿಕ್ಷಕನಾಗಿ ರಾಜೇಶ್ ನಟರಂಗ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಕಥೆ ಸ್ಫೂರ್ತಿ ನೀಡುವಂಥದ್ದೇ ಆದರೂ, ಸಿನೆಮಾದಲ್ಲಿ ಇನ್ನೂ ಸ್ವಲ್ಪಕಂಟೆಂಟ್ ಬೇಕಿತ್ತು ಎಂಬ ಅಭಿಪ್ರಾಯ ಮೂಡುತ್ತದೆ. ಅವೆಲ್ಲವನ್ನೂ ಹೊರಗಿಟ್ಟು ನೋಡಿದರೆ ತನುಜಾ ಪ್ರತೀ ವಿದ್ಯಾರ್ಥಿಗೂ ಸ್ಫೂರ್ತಿಯಾಗುವಂಥ ಕಥೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕಥೆಗೆ ತಕ್ಕಂತೆ ನೈಜವಾಗಿಯೇ ಸಂಗೀತ ನೀಡಿದ್ದಾರೆ ಪ್ರದ್ಯೋತನ್. ಒಟ್ಟಿನಲ್ಲಿ ನೀಟ್ ಪರೀಕ್ಷೆಯ ಸುತ್ತ ಸುತ್ತುವ ಸಿನೆಮಾ ಸೊಗಸಾಗಿಯೇ ಮೂಡಿಬಂದಿದೆ.

Similar News