ಮಲಯಾಳಂ ನಟ-ನಿರ್ದೇಶಕ ಬಾಬುರಾಜ್ ಬಂಧನ

Update: 2023-02-05 07:11 GMT

ತಿರುವನಂತಪುರಂ: ಇಡುಕ್ಕಿ ಜಿಲ್ಲೆಯ ಆದಿಮಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದ ಸಂಬಂಧ ಮಲಯಾಳಂ ನಟ-ನಿರ್ದೇಶಕ ಬಾಬುರಾಜ್ (Malayalam actor Baburaj) ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅವರು ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಪೊಲೀಸರಿಗೆ ಶರಣಾದರು. ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು ಎಂದು  thenewsminute.com ವರದಿ ಮಾಡಿದೆ.

ಈ ಕುರಿತು PTI ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಪೊಲೀಸರು, "ಹೈಕೋರ್ಟ್ ನಿರ್ದೇಶನದನ್ವಯ ಅವರನ್ನು ಬಂಧಿಸಲಾಗಿತ್ತು. ಇಡುಕ್ಕಿಯ ಸ್ಥಳೀಯ ನ್ಯಾಯಾಲಯದಲ್ಲಿ ಅವರನ್ನು ಹಾಜರುಪಡಿಸಿದ ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾದರು" ಎಂದು ತಿಳಿಸಿದ್ದಾರೆ.

ವಂಚನೆಯ ಪ್ರಕರಣವು ಬಾಬುರಾಜ್ ಅವರ ಇಡುಕ್ಕಿಯಲ್ಲಿನ ರೆಸಾರ್ಟ್‌ಗೆ ಸಂಬಂಧಿಸಿದೆ. ಅವರ ರೆಸಾರ್ಟ್ ಕಂದಾಯ ವಸೂಲಾತಿ ಪ್ರಕ್ರಿಯೆಗೆ ಗುರಿಯಾಗಿದೆ ಎಂಬ ಅಂಶವನ್ನು ಮುಚ್ಚಿಟ್ಟು, ಅದನ್ನು ವ್ಯಕ್ತಿಯೊಬ್ಬರಿಗೆ ಭೋಗ್ಯಕ್ಕೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

2020ರಲ್ಲಿ ಬಾಬುರಾಜ್ ತಮ್ಮ ರೆಸಾರ್ಟ್ ಅನ್ನು ಅರುಣ್ ಎಂಬುವವರಿಗೆ ರೂ. 40 ಲಕ್ಷಕ್ಕೆ ಭೋಗ್ಯಕ್ಕೆ ನೀಡಿದ್ದರು. ಇದೇ ವೇಳೆ ಕೋವಿಡ್-19 ವ್ಯಾಪಿಸಿದ್ದರಿಂದ ರೆಸಾರ್ಟ್ ಅನ್ನು ಮುಚ್ಚಿಸಲಾಗಿತ್ತು. ಆದರೆ, ಕೋವಿಡ್ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರ ಅರುಣ್ ರೆಸಾರ್ಟ್ ತೆರೆಯಲು ಪ್ರಯತ್ನಿಸಿದರಾದರೂ ಕೆಲವು ತಾಂತ್ರಿಕ ಸಮಸ್ಯೆಗಳಿಗೆ ಗುರಿಯಾದರು. ನಂತರ ಪರಿಶೀಲಿಸಿದಾಗ ಸ್ವತ್ತಿನ ವಿಚಾರದಲ್ಲಿ ಕೆಲವು ಸಮಸ್ಯೆಗಳಿರುವುದು ಕಂಡು ಬಂದಿತ್ತು. ಈ ಅಂಶಗಳನ್ನು ಭೋಗ್ಯಕ್ಕೆ ನೀಡುವಾಗ ನನ್ನಿಂದ ಮುಚ್ಚಿಡಲಾಗಿತ್ತು ಎಂದು ಅರುಣ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ತಾನು ನೀಡಿರುವ ಹಣವನ್ನು ಮರುಪಾವತಿಸುವಂತೆ ಅರುಣ್ ಅವರು ಬಾಬುರಾಜ್‌ಗೆ ಮನವಿ ಮಾಡಿದರೂ ಅವರದನ್ನು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅರುಣ್ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಬಾಬುರಾಜ್‌ಗೆ ಸಮನ್ಸ್ ಜಾರಿ ಮಾಡಿದ್ದರು ಹಾಗೂ ಕೇರಳ ಹೈಕೋರ್ಟ್ ಕೂಡಾ ಶನಿವಾರ ಪೊಲೀಸರೆದುರು ಹಾಜರಾಗುವಂತೆ ಅವರಿಗೆ ಸೂಚಿಸಿತ್ತು. ಪೊಲೀಸರು ಅವರನ್ನು ಬಂಧಿಸಿದ ನಂತರ, ಬಂಧನದ ಶಿಷ್ಟಾಚಾರಗಳನ್ನು ಪೂರೈಸಲು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.

ಮೊದಲಿಗೆ ಖಳನಾಯಕನಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಬಾಬುರಾಜ್, ನಂತರ ಹಾಸ್ಯ ನಟರಾಗಿ ಭಾರಿ ಜನಪ್ರಿಯರಾಗಿದ್ದಾರೆ. 'ಸಾಲ್ಟ್ ಎನ್ ಪೆಪ್ಪರ್', 'ಮಾಯಾಮೋಹಿನಿ', 'ಹನಿ ಬೀ'ಯಂತಹ ಯಶಸ್ವಿ ಚಿತ್ರಗಳಲ್ಲಿ ಅವರು ಹಾಸ್ಯನಟರಾಗಿ ಅಭಿನಯಿಸಿದ್ದಾರೆ. ಇದರೊಂದಿಗೆ 'ಪೆಪ್ಪರ್ ಎನ್ ಸಾಲ್ಟ್' ಸಿನಿಮಾದ ಎರಡನೆ ಭಾಗ ಹಾಗೂ 'ಬ್ಲ್ಯಾಕ್ ಕಾಫಿ' ಸಿನಿಮಾಗಳನ್ನೂ ಅವರು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಷರಫ್ ನಿಧನ

Similar News