ಸದನದಲ್ಲಿ ಎಎಪಿ-ಬಿಜೆಪಿ ಘರ್ಷಣೆ: ದಿಲ್ಲಿ ಹೊಸ ಮೇಯರ್ ಆಯ್ಕೆಯ ಕಸರತ್ತು ಸತತ 3ನೇ ಬಾರಿ ವಿಫಲ

Update: 2023-02-06 08:04 GMT

ಹೊಸದಿಲ್ಲಿ: ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಾಗೂ  ಬಿಜೆಪಿ ಸದಸ್ಯರು ಸೋಮವಾರ ಮಹಾನಗರಪಾಲಿಕೆ ಸದನದಲ್ಲಿ ಕೋಲಾಹಲ ಎಬ್ಬಿಸಿದ  ಹಿನ್ನೆಲೆಯಲ್ಲಿ ದಿಲ್ಲಿಯ ಹೊಸ ಮೇಯರ್ ಆಯ್ಕೆಯ ಕಸರತ್ತು ಸತತ ಮೂರನೇ ಬಾರಿಗೆ ವಿಫಲವಾಗಿದೆ.

ಡಿಸೆಂಬರ್ 4 ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯ ನಂತರ ಮೂರನೇ ಬಾರಿಗೆ ಸದನದ ಕಲಾಪ ನಡೆಯಿತು. ಆಲ್ಡರ್‌ಮೆನ್‌ಗಳಿಗೆ ಮತದಾನದ ಹಕ್ಕಿನ ಕುರಿತು ಎಎಪಿ ಸದಸ್ಯರು ಭಾರಿ ಪ್ರತಿಭಟನೆ ನಡೆಸಿದ್ದರಿಂದ ಸದನ ಅಸ್ತವ್ಯಸ್ತವಾಯಿತು.

ಗದ್ದಲದ ನಡುವೆ ಸದನವನ್ನು ಮುಂದೂಡಲಾಯಿತು ಹಾಗೂ  ಮೇಯರ್ ಚುನಾವಣೆಯನ್ನು ಮತ್ತೊಮ್ಮೆ ಮುಂದೂಡಲಾಯಿತು.

ಜನವರಿ 6 ಹಾಗೂ ಜ. 24 ರಂದು ನಡೆದ ಮೊದಲ ಎರಡು ಅಧಿವೇಶನಗಳಲ್ಲಿ  ಬಿಜೆಪಿ ಹಾಗೂ  ಎಎಪಿ ಸದಸ್ಯರ ನಡುವಿನ ಗದ್ದಲದ ನಂತರ ಮೇಯರ್ ಆಯ್ಕೆ ಮಾಡದೆ ಸಭಾಧ್ಯಕ್ಷರು  ಸದನ ಮುಂದೂಡಿದರು.

ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯಿದೆ 1957 ರ ಪ್ರಕಾರ, ಮಹಾನಗರ ಪಾಲಿಕೆ ಚುನಾವಣೆಯ ನಂತರ ಸೇರುವ ಮೊದಲ ಅಧಿವೇಶನದಲ್ಲಿ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಬೇಕು. ಆದರೆ, ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ದಿಲ್ಲಿಗೆ ಮೇಯರ್ ಸ್ಥಾನ ಸಿಕ್ಕಿಲ್ಲ.

Similar News